ಬೆಂಗಳೂರು: ಕರ್ನಾಟಕ ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಿ.ಎಂ ಗೌತಮ್ ಅವರನ್ನೊಳಗೊಂಡ ವಿಜಯಾ ಬ್ಯಾಂಕ್ ತಂಡ, ಅಲೆಪ್ಪಿ ಕಪ್ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ.
ಕಳೆದ ವಾರ ಕೇರಳದ ಪ್ರವಾಸಿ ತಾಣ ಅಲೆಪ್ಪಿಯಲ್ಲಿ ನಡೆದ ಟೂರ್ನಿಯಲ್ಲಿ ಬೆಂಗಳೂರಿನ ವಿಜಯಾ ಬ್ಯಾಂಕ್ ತಂಡ ಅಮೋಘ ಪ್ರದರ್ಶನ ತೋರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಸಿ.ಎಂ ಗೌತಮ, ಕೆ.ಸಿ ಕಾರಿಯಪ್ಪ ಅವರಂತಹ ಸ್ಟಾರ್ ಆಟಗಾರರನ್ನೊಳಗೊಂಡಿದ್ದ ವಿಜಯಾ ಬ್ಯಾಂಕ್ ತಂಡ, ಫೈನಲ್ ಹಣಾಹಣಿಯಲ್ಲಿ ಸೌತ್ ಜೋನ್ ಅಕಾಡೆಮಿ ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿತು. ಸೌತ್ ಜೋನ್ ತಂಡದ ಪರ ಕೇರಳದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಆಡಿದ್ದರು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸೌತ್ ಜೋನ್ ಅಕಾಡೆಮಿ ತಂಡ 19.4 ಓವರ್‌ಗಳಲ್ಲಿ 141 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಸಂಜು ಸ್ಯಾಮ್ಸನ್ 23 ರನ್ ರನ್ ಹಾಗೂ ಸಲ್ಮಾನ್ ನಿಸಾರ್ 28 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ವಿಜಯಾ ಬ್ಯಾಂಕ್ ಪರ ಮಾರಕ ದಾಳಿ ಸಂಘಟಿಸಿದ ಆಲ್ರೌಂಡರ್‌ಗಳಾದ ಸಿ.ಎ ಕಾರ್ತಿಕ್ 14 ರನ್ನಿತ್ತು 3 ವಿಕೆಟ್ ಹಾಗೂ ಜೀಶನ್ ಅಲಿ ಸೈಯದ್ 30 ರನ್ನಿತ್ತು 3ವಿಕೆಟ್ ಕಬಳಿಸಿ ಸೌತ್ ಜೋನ್ ತಂಡಕ್ಕೆ ಕಡಿವಾಣ ಹಾಕಿದರು.
ನಂತರ ಗುರಿ ಬೆನ್ನತ್ತಿದ ವಿಜಯಾ ಬ್ಯಾಂಕ್ ತಂಡ 19 ಓವರ್‌ಗಳಲ್ಲಿ 6 ವಿಕೆಟ್‌ಗೆ 142 ರನ್ ಗಳಿಸಿ ಸುಲಭ ಜಯ ದಾಖಲಿಸಿತು. ಸ್ವಪ್ನಿಲ್ 40 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರೆ, ಬ್ಯಾಟಿಂಗ್‌ನಲ್ಲೂ ಮಿಂಚಿದ ಸಿ.ಎ ಕಾರ್ತಿಕ್ 28 ರನ್ ಗಳಿಸಿ ತಂಡಕ್ಕೆ ಜಯ ತಂದು ಕೊಟ್ಟರು.
ಸಂಕ್ಷಿಪ್ತ ಸ್ಕೋರ್
ಸೌತ್ ಜೋನ್ ಅಕಾಡೆಮಿ: 19.4 ಓವರ್‌ಗಳಲ್ಲಿ 141 ರನ್‌ಗಳಿಗೆ ಆಲೌಟ್
ಸಂಜು ಸ್ಯಾಮ್ಸನ್ 23, ಸಲ್ಮಾನ್ ನಿಸಾರ್ 28; ಸಿ.ಎ ಕಾರ್ತಿಕ್ 3/14, ಜೀಶನ್ ಅಲಿ ಸೈಯದ್ 3/30.
ವಿಜಯಾ ಬ್ಯಾಂಕ್: 19 ಓವರ್‌ಗಳಲ್ಲಿ 6 ವಿಕೆಟ್‌ಗೆ 142 ರನ್
ಸ್ವಪ್ನಿಲ್ 40, ಸಿ.ಎ ಕಾರ್ತಿಕ್ 28; ಅಕ್ಷಯ್ ಕೆ. 2/16.