ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಚಿನ್ನದ ಮೊಟ್ಟೆ ಇಡುವ ಕೋಳಿ ಎಂದೇ ಕರೆಯಲ್ಪಡುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯಲ್ಲಿ ಹಣದ ಹೊಳೆಯೇ ಹರಿಸುತ್ತದೆ. ಹೀಗಾಗಿ ಬಿಸಿಸಿಐ ಈ ಟೂರ್ನಿಯನ್ನು ಅದ್ಧೂರಿಯಾಗಿ ನಡೆಸುತ್ತದೆ. ಉದ್ಘಾಟನಾ ಸಮಾರಂಭವಂತೂ ಹಬ್ಬದ ವಾತಾವರಣದಂತಿರುತ್ತದೆ. ಆದರೆ 11ನೇ ಆವೃತ್ತಿಯ ಐಪಿಎಲ್ನ ಉದ್ಘಾಟನಾ ಸಮಾರಂಭ ಈ ಹಿಂದಿನಂತೆ ಇರುವುದಿಲ್ಲ.
ಏಕೆಂದರೆ ಉದ್ಘಾಟನಾ ಸಮಾರಂಭಕ್ಕೆ ಖರ್ಚು ಮಾಡಲಿರುವ ಬಜೆಟ್ನಲ್ಲಿ 20 ಕೋಟಿ ರೂ.ಗಳನ್ನು ಕಡಿತ ಮಾಡುವಂತೆ ಬಿಸಿಸಿಐಗೆ ಸುಪ್ರೀಂ ಕೋರ್ಟ್ ನೇಮಿತ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಖಡಕ್ ಸೂಚನೆ ನೀಡಿದೆ.
ಬಿಸಿಸಿಐನಲ್ಲಿ ನಡೆಯುತ್ತಿರುವ ದುಂದುವೆಚ್ಚವನ್ನು ತಪ್ಪಿಸಲು ಸಿಒಎ ಈ ನಿರ್ಧಾರ ಕೈಗೊಂಡಿದೆ. ಹೀಗಾಗಿ ಈ ಹಿಂದೆ ನಿಗದಿಯಾದಂತೆ 50 ಕೋಟಿ ರೂ. ವೆಚ್ಚದಲ್ಲಿ ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ(ಸಿಸಿಐ)ದಲ್ಲಿ ಏಪ್ರಿಲ್ 6ರಂದು ನಡೆಯಬೇಕಿದ್ದ ಉದ್ಘಾಟನಾ ಸಮಾರಂಭವನ್ನು ಏಪ್ರಿಲ್ 7ಕ್ಕೆ ಮುಂದೂಡಲಾಗಿದೆ. ಈ ಸಮಾರಂಭ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಸಮಾರಂಭದ ನಂತರ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಹಾಗೂ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಟೂರ್ನಿಯ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.