ಹರಾರೆ: ವೆಸ್ಟ್ ಇಂಡೀಸ್ನ ದೈತ್ಯ ಬ್ಯಾಟ್ಸ್ಮನ್, ಸಿಕ್ಸರ್ಗಳ ಸರ್ದಾರ ಕ್ರಿಸ್ ಗೇಲ್, ಐಸಿಸಿ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಯುಎಇ ವಿರುದ್ಧ ಸಿಡಿಲಬ್ಬರದ 123 ರನ್ ಸಿಡಿಸಿ ಅಬ್ಬರಿಸಿದ್ದಾರೆ. 91 ಎಸೆತಗಳಲ್ಲಿ 7 ಬೌಂಡರಿ ಮತ್ತು 11 ಭರ್ಜರಿ ಸಿಕ್ಸರ್ಗಳ ನೆರವಿನಿಂದ ಗೇಲ್ 123 ರನ್ ಸಿಡಿಸಿದ್ದು, ಇದರಲ್ಲಿ 94 ರನ್ಗಳನ್ನು ಬೌಂಡರಿ ಮತ್ತು ಸಿಕ್ಸರ್ಗಳ ಮೂಲಕವೇ ಸಿಡಿಸಿದ್ದಾರೆ.
ದೂರದ ಜಿಂಬಾಬ್ವೆಯ ಹರಾರೆಯಲ್ಲಿ ಕ್ರಿಸ್ ಗೇಲ್ ಅಬ್ಬರಿಸುತ್ತಲ್ಲೇ, ಇತ್ತ ಭಾರತದಲ್ಲಿರುವ ಬಾಲಿವುಡ್ ನಟಿ ಪ್ರೀತಿ ಜಿಂಟಾ ಮುಖದಲ್ಲಿ ಮಂದಹಾಸ ಮೂಡಿದೆ. ಏಕೆಂದರೆ 11ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಪ್ರೀತಿ ಜಿಂಟಾ ಸಹ ಮಾಲೀಕತ್ವದ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪರ ಗೇಲ್ ಬ್ಯಾಟ್ ಬೀಸಲಿದ್ದಾರೆ.
ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಕ್ರಿಸ್ ಗೇಲ್ ಅವರನ್ನು ಪಂಜಾಬ್ ಫ್ರಾಂಚೈಸಿ 2 ಕೋಟಿ ರೂ.ಗಳ ಮೂಲ ಬೆಲೆಗೆ ಖರೀದಿಸಿತ್ತು. ಎರಡು ಸುತ್ತುಗಳ ಹರಾಜಿನಲ್ಲಿ ಗೇಲ್ ಅವರನ್ನು ಯಾವ ಫ್ರಾಂಚೈಸಿಯೂ ಖರೀದಿಸಿರಲಿಲ್ಲ. ಆದರೆ 3ನೇ ಸುತ್ತಿನಲ್ಲಿ ಗೇಲ್ಗೆ ಪಂಜಾಬ್ ತಂಡ ಆಶ್ರಯ ನೀಡಿತ್ತು. 2011ರಿಂದ 2017ರವರೆಗೆ ಗೇಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. ಆದರೆ ಈ ಬಾರಿಯ ಹರಾಜಿನಲ್ಲಿ ಆರ್ಸಿಬಿ ಫ್ರಾಂಚೈಸಿ ಗೇಲ್ ಅವರತ್ತ ಕಣ್ಣೆತ್ತಿಯೂ ನೋಡಿರಲಿಲ್ಲ.
ಪ್ರಸಕ್ತ ಸಾಲಿನ ಐಪಿಎಲ್ ಏಪ್ರಿಲ್ 7ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಏಪ್ರಿಲ್ 8ರಂದು ದಿಲ್ಲಿ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆತಿಥೇಯ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಎದುರಿಸಲಿದೆ.