ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಅಖಾಡದ ಯಶಸ್ವಿ ನಾಯಕರಲ್ಲೊಬ್ಬರಾದ ಡೆಲ್ಲಿ ಡ್ಯಾಶರ್ ಗೌತಮ್ ಗಂಭೀರ್, ಐಪಿಎಲ್‌ನ 11ನೇ ಆವೃತ್ತಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಅನುಭವಿ ಎಡಗೈ ಬ್ಯಾಟ್ಸ್‌ಮನ್ ಹಾಗೂ ನಾಯಕತ್ವದಲ್ಲಿ ಅಮೋಘ ದಾಖಲೆ ಹೊಂದಿರುವ ಗೌತಮ್ ಗಂಭೀರ್ ಅವರನ್ನು ತನ್ನ ತಂಡದ ನಾಯಕನನ್ನಾಗಿ ಡೆಲ್ಲಿ ಫ್ರಾಂಚೈಸಿ ನೇಮಕ ಮಾಡಿದೆ. ಬೆಂಗಳೂರಿನಲ್ಲಿ ಜನವರಿಯಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಗಂಭೀರ್ ಅವರನ್ನು 2.8 ಕೋಟಿ ರೂ.ಗಳಿಗೆ ಖರೀದಿಸಿತ್ತು. ಸ್ವತಃ ಗಂಭೀರ್ ಅವರೇ ಮತ್ತೆ ತವರು ತಂಡದ ಪರ ಆಡಲು ಬಯಸಿದ್ದರಿಂದ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿ ಉಳಿಸಿಕೊಂಡಿರಲಿಲ್ಲ(ರೀಟೇನ್).
ತವರು ನೆಲದ ತಂಡವನ್ನು ಮತ್ತೊಮ್ಮೆ ಮುನ್ನಡೆಸುವ ಅವಕಾಶ ಸಿಕ್ಕಿರುವ ಕುರಿತು ಪ್ರತಿಕ್ರಿಯಿಸಿರುವ ಗಂಭೀರ್, ‘‘ಇದು ನನ್ನ ಪಾಲಿಗೆ ಸಂದಿರುವ ದೊಡ್ಡ ಗೌರವವೆಂದೇ ಭಾವಿಸುತ್ತೇನೆ. ನಮ್ಮದು ಈ ಬಾರಿ ಅತ್ಯುತ್ತಮ ತಂಡವಾಗಿದೆ. ಆಟಗಾರರು ಅದ್ಭುತ ಪ್ರತಿಭಾವಂತರಾಗಿದ್ದಾರೆ. ಅಲ್ಲದೆ ರಿಕಿ ಪಾಂಟಿಂಗ್ ಅವರ ಜೊತೆ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇನೆ,’’ ಎಂದು ತಿಳಿಸಿದ್ದಾರೆ.
ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಮಾಜಿ ಕೋಚ್ ರಿಕಿ ಪಾಂಟಿಂಗ್ ಅವರನ್ನು ಡೆಲ್ಲಿ ತಂಡದ ತನ್ನ ಕೋಚ್ ಆಗಿ ನೇಮಿಸಿಕೊಂಡಿದೆ.
36 ವರ್ಷದ ಗೌತಮ್ ಗಂಭೀರ್, ತಮ್ಮ ಐಪಿಎಲ್ ಪಯಣವನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡದೊಂದಿಗೇ ಆರಂಭಿಸಿದ್ದರು. ನಂತರ ಗಂಭೀರ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡ ಖರೀದಿಸಿತ್ತು. ಗಂಭೀರ್ ಅವರ ನಾಯಕತ್ವದಲ್ಲಿ ನೈಟ್ ರೈಡರ್ಸ್ ತಂಡ 2012 ಹಾಗೂ 2014ರಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು.