Friday, November 22, 2024

ದೇವಧರ್ ಟ್ರೋಫಿ: ಸಮರ್ಥ್ ಶತಕ, ಭಾರತ ‘ಬಿ’ ವಿರುದ್ಧ ಕರ್ನಾಟಕಕ್ಕೆ 6 ರನ್‌ಗಳ ರೋಚಕ ಜಯ

ಧರ್ಮಶಾಲಾ: ವಿಜಯ್ ಹಜಾರೆ ಟ್ರೋಫಿಯಲ್ಲಿ ವಿಜಯ ಪತಾಕೆ ಹಾರಿಸಿರುವ ಕರ್ನಾಟಕ ತಂಡ, ದೇವಧರ್ ಟ್ರೋಫಿ ಏಕದಿನ ಟೂರ್ನಿಯಲ್ಲೂ ಶುಭಾರಂಭ ಮಾಡಿದ್ದು ಮೊದಲ ಪಂದ್ಯದಲ್ಲಿ ಭಾರತ ‘ಬಿ’ ವಿರುದ್ಧ 6 ರನ್‌ಗಳ ರೋಚಕ ಗೆಲುವು ಸಾಸಿದೆ.

PC: Twitter/Stuart Binny

ಈ ಮೂಲಕ ಕರುಣ್ ನಾಯರ್ ನಾಯಕತ್ವದ ಕರ್ನಾಟಕ ತಂಡ 4 ಅಂಕ ಸಂಪಾದಿಸಿ, ಫೈನಲ್ ಪ್ರವೇಶವನ್ನು ಖಚಿತ ಪಡಿಸಿಕೊಂಡಿದೆ. ಮಂಗಳವಾರ ನಡೆಯಲಿರುವ ತನ್ನ 2ನೇ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ ಭಾರತ ‘ಎ’ ತಂಡದ ಸವಾಲನ್ನು ಎದುರಿಸಲಿದೆ.
ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ತಂಡ, ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 296 ರನ್‌ಗಳನ್ನು ಕಲೆ ಹಾಕಿತು.
ಮಧ್ಯಮ ಕ್ರಮಾಂಕದಲ್ಲಿ ಆರ್.ಸಮರ್ಥ್ 115 ಎಸೆತಗಳಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಬಿರುಸಿನ 117 ರನ್ ಸಿಡಿಸಿದರು. ಹುಬ್ಬಳ್ಳಿ ಹುಡುಗ ಪವನ್ ದೇಶಪಾಂಡೆ 46 ರನ್ ಗಳಿಸಿದರೆ, ರನ್ ಮಷಿನ್ ಮಯಾಂಕ್ ಅಗರ್ವಾಲ್ 44 ರನ್‌ಗಳ ಕಾಣಿಕೆಯಿತ್ತರು.
ನಂತರ ಗುರಿ ಬೆನ್ನತ್ತಿದ ಭಾರತ ‘ಬಿ’ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 296 ರನ್ ಗಳಿಸಿ ಕರ್ನಾಟಕಕ್ಕೆ ಶರಣಾಯಿತು. ಮನೋಜ್ ತಿವಾರಿ ಅವರ 120 ರನ್ ಹಾಗೂ ಸಿದ್ದೇಶ್ ಲಾಡ್ ಅವರ 70 ರನ್‌ಗಳ ನೆರವಿನಿಂದ ಭಾರತ ‘ಬಿ’ ತಂಡ ಒಂದು ಹಂತದಲ್ಲಿ ಗೆಲುವಿನ ಹಾದಿಯಲ್ಲಿತ್ತಾದರೂ, ಮಿಂಚಿನ ದಾಳಿ ನಡೆಸಿದ ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ 3 ವಿಕೆಟ್ ಕಬಳಿಸಿ ಕೈ ಜಾರುತ್ತಿದ್ದ ಪಂದ್ಯವನ್ನು ಕರ್ನಾಟಕದ ಕಡೆ ತಿರುಗಿಸಿದರು.

 

ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 296 ರನ್
ಆರ್.ಸಮರ್ಥ್ 117, ಪವನ್ ದೇಶಪಾಂಡೆ 46, ಮಯಾಂಕ್ ಅಗರ್ವಾಲ್ 44; ಸಿದ್ದಾರ್ಥ್ ಕೌಲ್ 3/49, ಜಯಂತ್ ಯಾದವ್ 2/48.

ಭಾರತ ‘ಬಿ’ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 290 ರನ್
ಮನೋಜ್ ತಿವಾರಿ 120, ಸಿದ್ದೇಶ್ ಲಾಡ್ 70 ಶ್ರೇಯಸ್ ಅಯ್ಯರ್ 33; ಶ್ರೇಯಸ್ ಗೋಪಾಲ್ 3/29, ಪ್ರಸಿದ್ಧ್ ಕೃಷ್ಣ 2/45, ಟಿ.ಪ್ರದೀಪ್ 1/54.

Related Articles