Friday, November 22, 2024

ನನಗೆ ಮಾತ್ರ 50 ಲಕ್ಷ… ಅವರಿಗೇಕೆ 20 ಲಕ್ಷ? ತಾರತಮ್ಯದ ವಿರುದ್ಧ ಸಿಡಿದೆದ್ದ ದ್ರಾವಿಡ್

ದಿ ಸ್ಪೋರ್ಟ್ಸ್ ಬ್ಯೂರೊ
ಮುಂಬೈ: ‘ನನಗೆ 50 ಲಕ್ಷ ರೂ. ಅವರಿಗೇಕೆ 20 ಲಕ್ಷ. ಗೆಲುವಿನಲ್ಲಿ ನನ್ನಷ್ಟೇ ಅವರದ್ದೂ ಸಮಾನ ಕೊಡುಗೆಯಿದೆ. ಹೀಗಾಗಿ ಬಹುಮಾನ ನೀಡಿಕೆಯಲ್ಲಿ ತಾರತಮ್ಯ ಮಾಡಬೇಡಿ‘.
ಇದು ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ವಿಜೇತ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರ ಅಸಮಾಧಾನದ ನುಡಿಗಳು.
PC: Twitter/ICC
ನ್ಯೂಜಿಲೆಂಡ್‌ನಲ್ಲಿ ನಡೆದ ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು 8 ವಿಕೆಟ್‌ಗಳಿಂದ ಮಣಿಸಿ ಚಾಂಪಿಯನ್ ಪಟ್ಟಕ್ಕೇರುತ್ತಿದ್ದಂತೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ವಿಶ್ವಕಪ್ ವಿಜೇತರಿಗೆ ನಗದು ಬಹುಮಾನ ಘೋಷಿಸಿತ್ತು.
ಆ ಪ್ರಕಾರ ತಂಡದ ಹೆಡ್ ಕೋಚ್ ದಿ ಗ್ರೇಟ್ ವಾಲ್ ಆಫ್ ಇಂಡಿಯಾ ಖ್ಯಾತಿಯ ರಾಹುಲ್ ದ್ರಾವಿಡ್ ಅವರಿಗೆ ಲಕ್ಷ ರೂ.ಗಳ ಬಹುಮಾನವನ್ನು ಬಿಸಿಸಿಐ ಘೋಷಿಸಿತ್ತು. ವಿಶ್ವಕಪ್ ಗೆದ್ದುಕೊಟ್ಟ ಆಟಗಾರರಿಗೆ ತಲಾ 30 ಲಕ್ಷ ರೂ. ಮತ್ತು ಫೀಲ್ಡಿಂಗ್ ಕೋಚ್ ಅಭಯ್ ಶರ್ಮಾ, ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಸೇರಿ ತಂಡದ ಸಹಾಯಕ ಸಿಬ್ಬಂದಿಗೆ ತಲಾ 20 ಲಕ್ಷ ರೂ.ಗಳನ್ನು ನೀಡುವುದಾಗಿ ಬಿಸಿಸಿಐ ಘೋಷಣೆ ಮಾಡಿತ್ತು.
ಬಹುಮಾನ ಘೋಷಣೆಯಲ್ಲಿ ಬಿಸಿಸಿಐ ಅಸಮಾನತೆ ತೋರಿರುವುದು ಸಜ್ಜನ ವ್ಯಕ್ತಿತ್ವದ ದ್ರಾವಿಡ್ ಅವರಿಗೆ ಬೇಸರ ತರಿಸಿದೆ. ವಿಶ್ವಕಪ್ ಗೆಲ್ಲಲು ಎಲ್ಲರೂ ಸಮಾನವಾಗಿ ಶ್ರಮಿಸಿರುವ ಕಾರಣ, ಬಹುಮಾನ ನೀಡುವ ಸಂದರ್ಭದಲ್ಲೂ ಎಲ್ಲರನ್ನೂ ಸಮಾನವಾಗಿ ಕಾಣಬೇಕೆಂದು ದ್ರಾವಿಡ್ ಬಿಸಿಸಿಐಗೆ ಮನವಿ ಮಾಡಿದ್ದಾರೆ.
ದ್ರಾವಿಡ್ ಎಂತಹ ವ್ಯಕ್ತಿ ಎಂಬುದಕ್ಕೆ ಇದೊಂದೇ ಉದಾಹರಣೆಯಲ್ಲ. ಶನಿವಾರ ಭಾರತ ವಿಶ್ವಕಪ್ ಗೆಲ್ಲುತ್ತಿದ್ದಂತೆ ನ್ಯೂಜಿಲೆಂಡ್‌ನ ಕಾಮೆಂಟೇಟರ್ ಸೈಮನ್ ಡುಲ್, ಭಾರತದ ದಿಗ್ಗಜನನ್ನು ಸಂದರ್ಶನ ಮಾಡಿದರು. ಆಗ ದ್ರಾವಿಡ್, ‘‘ಎಲ್ಲರ ಗಮನ ನನ್ನ ಮೇಲೆ ಕೇಂದ್ರೀಕೃತವಾಗುತ್ತಿರುವುದು ಮತ್ತು ಎಲ್ಲರೂ ನನ್ನ ಬಗ್ಗೆಯೇ ಮಾತನಾಡುತ್ತಿರುವುದು ನನನಗೆ ಮುಜುಗರ ತರುತ್ತಿದೆ. ಗುಣಮಟ್ಟದ ಆಟಗಾರರು ಮತ್ತು ಎಲ್ಲಾ ಸಹಾಯಕ ಸಿಬ್ಬಂದಿಯ ಶ್ರಮದಿಂದ ಇದು ಸಾಧ್ಯವಾಯಿತೇ ಹೊರತು, ನನ್ನೊಬ್ಬನಿಂದಲೇ ಅಲ್ಲ’’  ಎಂದಿದ್ದರು. ಈ ಮೂಲಕ ಗೆಲುವಿನ ಶ್ರೇಯಸ್ಸನ್ನು ತಾವೊಬ್ಬರೇ ಸ್ವೀಕರಿಸದೆ ವಿಶ್ವಕಪ್ ಗೆಲ್ಲಲು ಶ್ರಮಿಸಿದ ಎಲ್ಲರೊಂದಿಗೆ ಹಂಚಿಕೊಂಡು ಆದರ್ಶ ಮೆರೆದಿದ್ದರು.

Related Articles