ಬೆಂಗಳೂರು: ಟೀಮ್ ಇಂಡಿಯಾದಲ್ಲಿರುವ ಕನ್ನಡಿಗ ಕೆ.ಎಲ್ ರಾಹುಲ್ ಹತಾಶೆಗೊಂಡಿದ್ದಾರೆಯೇ? ನಿರೀಕ್ಷೆಗೆ ತಕ್ಕಂತೆ ಅವಕಾಶಗಳು ಸಿಗದಿರುವುದು ರಾಹುಲ್‌ಗೆ ಬೇಸರ ತಂದಿದೆಯೇ?. ಈ ಪ್ರಶ್ನೆ ಮೂಡಲು ಕಾರಣ, ಕೆ.ಎಲ್ ರಾಹುಲ್ ಮಾಡಿರುವ ಒಂದು ಟ್ವೀಟ್.
ಹೌದು. ರಾಹುಲ್ ಮಾಡಿರುವ ಟ್ವೀಟ್ ಹಲವು ಪ್ರಶ್ನೆಗಳನ್ನು ತೆರೆದಿಟ್ಟಿದೆ. ‘ಈ ದಿನಗಳಲ್ಲಿ ಜೀವನ ನಿಜಕ್ಕೂ ಕಷ್ಟವಾಗಿದೆ’’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೆ.ಎಲ್ ರಾಹುಲ್ ಅವರಿಗೆ ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶಗಳು ಕಡಿಮೆಯಾಗಿವೆ. ಟೆಸ್ಟ್ ತಂಡದ ನಂ.1 ಆದ್ಯತೆಯ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ರಾಹುಲ್ ಅವರನ್ನು ಈಗ ಮೀಸಲು ಆರಂಭಿಕನಾಗಿ ಬಳಸಿಕೊಳ್ಳುತ್ತಿದ್ದಾರೆ. ರಾಹುಲ್‌ಗಿಂತ ಡೆಲ್ಲಿ ಡ್ಯಾಶರ್ ಶಿಖರ್ ಧವನ್‌ಗೆ ನಾಯಕ ವಿರಾಟ್ ಕೊಹ್ಲಿ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಏಕದಿನ ತಂಡದಲ್ಲಿದ್ದ ರಾಹುಲ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಇನ್ನು ಟಿ20 ಕ್ರಿಕೆಟ್‌ನಲ್ಲಿ ರಾಹುಲ್‌ಗೆ ಆಗೊಮ್ಮೆ ಈಗೊಮ್ಮೆ ಅವಕಾಶಗಳು ಸಿಗುತ್ತಿವೆ. ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದ ಟಿ20 ಸರಣಿಯಲ್ಲಿ ಬೆಂಚ್ ಕಾಯಿಸಿದ್ದ ರಾಹುಲ್‌ಗೆ ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. 3ನೇ ಪಂದ್ಯದಲ್ಲಿ ಅವಕಾಶ ಸಿಕ್ಕಿ ಉತ್ತಮ ಆರಂಭ ಪಡೆದಿದ್ದ ರಾಹುಲ್, ದುರಾದೃಷ್ಠವಶಾತ್ ಹಿಟ್‌ವಿಕೆಟ್ ಆಗಿ ಔಟಾಗಿದ್ದರು. 4ನೇ ಪಂದ್ಯದಲ್ಲಿ ಆಡುವ ಬಳಗದಲ್ಲಿದ್ದರೂ, ಬ್ಯಾಟಿಂಗ್‌ಗೆ ಅವಕಾಶ ನೀಡಿರಲಿಲ್ಲ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಹುಲ್ ಈ ರೀತಿ ಟ್ವೀಟ್ ಮಾಡಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
Real tough life these days… #midweekchills