ದಿ ಸ್ಪೋರ್ಟ್ಸ್ ಬ್ಯೂರೊ
ಬೆಂಗಳೂರು: ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ತಂಡ 4ನೇ ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದೆ. ಮುಂಬೈನ ವಂಡರ್ ಕಿಡ್ ಖ್ಯಾತಿಯ ಪೃಥ್ವಿ ಶಾ, ಭಾರತ ತಂಡವನ್ನು ಚಾಂಪಿಯನ್ ಪಟ್ಟದತ್ತ ಮುನ್ನಡೆಸಿ ದೇಶದ ಕ್ರಿಕೆಟ್ ಪ್ರಿಯರ ಕಣ್ಮಣಿಯಾಗಿದ್ದಾರೆ.
ಪೃಥ್ವಿ ಶಾ ನಾಯಕತ್ವದಲ್ಲಿ ಭಾರತದ ಸಿಂಹದ ಮರಿ ಸೈನ್ಯ ವಿಶ್ವಕಪ್ ಗೆಲ್ಲಲು ಕಾರಣ ಕನ್ನಡಿಗ ರಾಹುಲ್ ದ್ರಾವಿಡ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ನ್ಯೂಜಿಲೆಂಡ್‌ನಲ್ಲಿ ಆಡಿದ ಅನುಭವವೇ ಇಲ್ಲದ ತಂಡವನ್ನು ಪಳಗಿಸಿ ವಿಶ್ವಕಪ್ ಗೆಲುವಿನ ಹಿಂದಿನ ಸೂತ್ರಧಾರನಾಗಿ ದ್ರಾವಿಡ್ ನಿಂತಿದ್ದಾರೆ.
ಇದೀಗ ತಮ್ಮ ಮಹಾಗುರು ರಾಹುಲ್ ದ್ರಾವಿಡ್ ಅವರಿಗೆ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಪೃಥ್ವಿ ಶಾ ಟ್ವಿಟರ್ ಹಾಗೂ ಇನ್ಸ್‌ಟಾಗ್ರಾಂ ಮೂಲಕ ಹೃದಯಸ್ಪರ್ಶಿ ಕೃತಜ್ಞತೆ ಸಲ್ಲಿಸಿದ್ದಾರೆ.
‘ರಾಹುಲ್ ಸರ್ ಇಲ್ಲದಿರುತ್ತಿದ್ದರೆ, ಇದು ಖಂಡಿತಾ ಸಾಧ್ಯವಾಗುತ್ತಿರಲಿಲ್ಲ. ಅವರು ಆಡಿದ ಪ್ರತಿ ಮಾತು ಕೂಡ ನನ್ನಲ್ಲಿ ಒಬ್ಬ ಆಟಗಾರ ಹಾಗೂ ವ್ಯಕ್ತಿಯಾಗಿ ಸಾಕಷ್ಟು ಬದಲಾವಣೆಗೆ ಕಾರಣವಾಯಿತು. ಅವರೊಬ್ಬ ದಂತಕಥೆ’’ ಎಂದು ಪೃಥ್ವಿ ಶಾ ಟ್ವೀಟ್ ಮಾಡಿದ್ದಾರೆ.