Monday, December 23, 2024

ಮೊಹಮ್ಮದ್ ಶಮಿ ಟೈಮ್ ಸರಿ ಇಲ್ಲ… ಪತ್ನಿ ಪೀಡಿಸಿದ್ದಾಯ್ತು, ಇದೀಗ ಆಕ್ಸಿಡೆಂಟ್!

ಡೆಹ್ರಾಡೂನ್: ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಟೈಮ್ ಯಾಕೋ ಸರಿ ಇದ್ದಂತೆ ಕಾಣುತ್ತಿಲ್ಲ. ಪತ್ನಿಯಿಂದ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಿ ಮ್ಯಾಚ್ ಫಿಕ್ಸಿಂಗ್‌ನಂತಹ ಗಂಭೀರ ಆರೋಪಕ್ಕೊಳಗಾಗಿ ಜರ್ಝರಿತರಾಗಿದ್ದ ಶಮಿ, ಇದೀಗ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
PC:Twitter
ಭಾನುವಾರ ಡೆಹ್ರಾಡೂನ್‌ನಲ್ಲಿರುವ ಅಭಿಮನ್ಯು ಕ್ರಿಕೆಟ್ ಅಕಾಡೆಮಿಗೆ ಅಭ್ಯಾಸಕ್ಕೆ ಶಮಿ ಬೆಳಗ್ಗೆ 6 ಗಂಟೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ಕಾರಿಗೆ ಟ್ರಕ್ ಒಂದು ಹಿಂಭಾಗದಿಂದ ಡಿಕ್ಕಿ ಹೊಡೆದಿದೆ. ಇದರಿಂದ ಶಮಿ ಅವರ ಹಣೆಯ ಭಾಗಕ್ಕೆ ಗಾಯವಾಗಿದ್ದು, ಕೂಡಲೇ ಅವರನ್ನು ಡೆಹ್ರಾಡೂನ್‌ನ ಸಿಎಂಐ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅವರ ಹಣೆಗೆ ನಾಲ್ಕು ಹೊಲಿಗೆಗಳನ್ನು ಹಾಕಲಾಗಿದ್ದು, ಶಮಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ.
ಮೊಹಮ್ಮದ್ ಶಮಿ ಅವರಿಗೆ ಬಂದೊದಗಿರುವ ಸ್ಥಿತಿಗೆ ಟೀಮ್ ಇಂಡಿಯಾದ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮರುಕ ವ್ಯಕ್ತಪಡಿಸಿದ್ದಾರೆ.

ಮೊಹಮ್ಮದ್ ಶಮಿ ಇತ್ತೀಚಿನ ದಿನಗಳಲ್ಲಿ ತುಂಬಾ ಕಷ್ಟ ಎದುರಿಸುತ್ತಿದ್ದಾರೆ. ಅವರ ಶೀಘ್ರ ಚೇತರಿಕೆಗೆ ಹಾರೈಸುತ್ತೇನೆ.

– ರೋಹಿತ್ ಶರ್ಮಾ

ಮೊಹಮ್ಮದ್ ಶಮಿ ಅವರ ವಿರುದ್ಧ ಪತ್ನಿ ಹಸೀನ್ ಜಹಾನ್ ವಿವಾಹೇತರ ಸಂಬಂಧಗಳ ಆರೋಪ ಮಾಡಿದ್ದರು. ಅಲ್ಲದೆ ಕೋಲ್ಕತಾದಲ್ಲಿ ಪತಿಯ ವಿರುದ್ಧ ಕೊಲೆ ಯತ್ನ, ದೌರ್ಜನ್ಯ, ಕಿರುಕುಳದ ಕೇಸ್ ದಾಖಲಿಸಿದ್ದರು. ಅಲ್ಲದೆ ಮ್ಯಾಚ್ ಫಿಕ್ಸಿಂಗ್ ಆರೋಪವನ್ನೂ ಮಾಡಿದ್ದರು. ಮ್ಯಾಚ್ ಫಿಕ್ಸಿಂಗ್ ಆರೋಪದ ಬಗ್ಗೆ ತನಿಖೆ ನಡೆಸಿರುವ ಬಿಸಿಸಿಐನ ‘ಭ್ರಷ್ಟಾಚಾರ ವಿರೋಧಿ ಘಟಕ (ಎಸಿಯು) ಈಗಾಗಲೇ ಶಮಿ ಅವರಿಗೆ ಕ್ಲೀನ್‌ಚಿಟ್ ನೀಡಿದೆ.

Related Articles