ಹೊಸದಿಲ್ಲಿ: ಕ್ರಿಕೆಟ್ ಜಗತ್ತಿನ ಸಿಕ್ಸರ್ ಸರ್ದಾರರಾದ ಭಾರತದ ಯುವರಾಜ್ ಸಿಂಗ್ ಮತ್ತು ವೆಸ್ಟ್ ಇಂಡೀಸ್‌ನ ದೈತ್ಯ ಕ್ರಿಸ್ ಗೇಲ್ ಈ ಬಾರಿಯ ಐಪಿಎಲ್‌ನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ಪರ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ.
ಈ ಇಬ್ಬರೂ ದಿಗ್ಗಜ ಆಟಗಾರರನ್ನು ಪ್ರೀತಿ ಜಿಂಟಾ ಸಹ ಮಾಲೀಕತ್ವದ ಕಿಂಗ್ಸ್ ಇಲವೆನ್ ಪಂಜಾಬ್ ತಂಡ ಮೂಲ ಬೆಲೆ ತಲಾ 2 ಕೋಟಿ ರೂ.ಗಳಿಗೆ ಖರೀದಿಸಿದೆ.
ತಂಡದ ಮಾರ್ಗದರ್ಶಕರಾಗಿರುವ ವೀರೇಂದ್ರ ಸೆಹ್ವಾಗ್, ಸಿಕ್ಸರ್ ಸರ್ದಾರರಾದ ಯುವಿ ಮತ್ತು ಗೇಲ್ ಬಗ್ಗೆ ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಹೊಸದಿಲ್ಲಿಯಲ್ಲಿ ಮಂಗಳವಾರ ನಡೆದ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಜರ್ಸಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ವೀರೂ, ಯುವರಾಜ್ ಮತ್ತು ಗೇಲ್ ಕನಿಷ್ಠ ಎರಡು ಪಂದ್ಯಗಳನ್ನು ಗೆಲ್ಲಿಸಿದರೆ ನನಗಷ್ಟೇ ಸಾಕು ಎಂದು ಸೆಹ್ವಾಗ್ ಹೇಳಿದ್ದಾರೆ.
ಯುವರಾಜ್ ಸಿಂಗ್ ಮತ್ತು ಕ್ರಿಸ್ ಗೇಲ್ ಮೂಲಬೆಲೆಗೆ ಸಿಕ್ಕಿದ್ದು ನಮ್ಮ ಅದೃಷ್ಟ. ಇಬ್ಬರದ್ದೂ ದೊಡ್ಡ ಹೆಸರು ಮತ್ತು ಇಬ್ಬರೂ ಮ್ಯಾಚ್ ವಿನ್ನರ್‌ಗಳು. ಅವರಿಬ್ಬರೂ ಕನಿಷ್ಠ ಎರಡೆರಡು ಪಂದ್ಯಗಳನ್ನು ಗೆಲ್ಲಿಸಿದರೆ, ಅವರ ಮೇಲೆ ಹೂಡಿರುವ ನಮ್ಮ ದುಡ್ಡ ವಾಪಸ್ ಬಂದಂತೆ.
– ವೀರೇಂದ್ರ ಸೆಹ್ವಾಗ್, ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಮೆಂಟರ್.
11ನೇ ಆವೃತ್ತಿಯ ಐಪಿಎಲ್ ಟೂರ್ನಿ ಏಪ್ರಿಲ್ 7ರಂದು ಮುಂಬೈನಲ್ಲಿ ಆರಂಭವಾಗಲಿದ್ದು, ಏಪ್ರಿಲ್ 8ರಂದು ದಿಲ್ಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ತಂಡ, ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಎದುರಿಸಲಿದೆ.