ಮುಂಬೈ: 11ನೇ ಆವೃತ್ತಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿರುವ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಜರ್ಸಿ ಅನಾವರಣಗೊಂಡಿದೆ. ಐಪಿಎಲ್ ಹರಾಜಿನಲ್ಲಿ ಕಿಂಗ್ಸ್ ಇಲವೆನ್ ಪಾಲಾಗಿರುವ ಕನ್ನಡಿಗರಾದ ಕೆ.ಎಲ್ ರಾಹುಲ್ ಮತ್ತು ಕರುಣ್ ನಾಯರ್ ಹೊಸ ಜರ್ಸಿ ಬಗ್ಗೆ ಹರ್ಷ ವ್ಯಕ್ತ ಪಡಿಸಿದ್ದಾರೆ.
ಕೆ.ಎಲ್ ರಾಹುಲ್ ಅವರ ಜರ್ಸಿ ನಂ.1 ಆಗಿದ್ದರೆ, ಕರುಣ್ ನಾಯರ್ ಅವರ ಜರ್ಸಿ ನಂ.69. ಹೊಸ ಜರ್ಸಿ ಬಿಡುಗಡೆಗೊಳ್ಳುತ್ತಲೇ, ಪ್ರಸಕ್ತ ಶ್ರೀಲಂಕಾ ಪ್ರವಾಸದಲ್ಲಿರುವ ರಾಹುಲ್ ತಮ್ಮ ಸಂಭ್ರಮವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.
ಕಿಂಗ್ಸ್ ಇಲವೆನ್ ಜರ್ಸಿ ತೊಡುವುದನ್ನು ಎದುರು ನೋಡುತ್ತಿದ್ದು, ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದೇನೆ. ನಿಮಗೆ ಸಂಭ್ರಮಿಸಲು ನಾವು ನಮ್ಮ ಅತ್ಯುತ್ತಮ ಆಟವಾಡಲಿದ್ದೇವೆ.
– ಕೆ.ಎಲ್ ರಾಹುಲ್
ಬುಧವಾರ ನಾಗ್ಪುರದಲ್ಲಿ ಆರಂಭವಾಗಲಿರುವ ವಿದರ್ಭ ವಿರುದ್ಧದ ಇರಾನಿ ಕಪ್ ಪಂದ್ಯದಲ್ಲಿ ಶೇಷ ಭಾರತ ತಂಡವನ್ನು ಮುನ್ನಡೆಸುತ್ತಿರುವ ಟೆಸ್ಟ್ ತ್ರಿಶತಕವೀರ ಕರುಣ್ ನಾಯರ್ ಕೂಡ ತಮ್ಮ ಸಂಭ್ರಮವನ್ನು ಟ್ಲೀಟ್ ಮೂಲಕ ಹಂಚಿಕೊಂಡಿದ್ದಾರೆ.
ಕಿಂಗ್ಸ್ ಇಲವೆನ್ ಪಂಜಾಬ್ ತಂಡಕ್ಕಾಗಿ ಈ ಜರ್ಸಿಯನ್ನು ತೊಡುವ ಕ್ಷಣಕ್ಕಾಗಿ ಕಾಯಲು ಇನ್ನು ಸಾಧ್ಯವಿಲ್ಲ. ಈ ಸಾಲಿನಲ್ಲಿ ಇದು ಸ್ಮರಣೀಯ ಮತ್ತು ನೆನಪಿನಲ್ಲಿಡಬಹುದಾದ ಪಯಣವಾಗಲಿದೆ.
– ಕರುಣ್ ನಾಯರ್
11ನೇ ಆವೃತ್ತಿಯ ಐಪಿಎಲ್ ಟೂರ್ನಿ ಏಪ್ರಿಲ್ 7ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಕಿಂಗ್ಸ್ ಇಲವೆನ್ ಪಂಜಾಬ್ ತಂಡ ಏಪ್ರಿಲ್ 8ರಂದು ಹೊಸದಿಲ್ಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಎದುರಿಸಲಿದೆ. ಡೆಲ್ಲಿ ಡ್ಯಾಶರ್ ವೀರೇಂದ್ರ ಸೆಹ್ವಾಗ್ ಮಾರ್ಗದರ್ಶನದ ಕಿಂಗ್ಸ್ ಇಲವೆನ್ ತಂಡವನ್ನು ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಮುನ್ನಡೆಸಲಿದ್ದಾರೆ.