ಬೆಂಗಳೂರು:ಕ್ಷಣ ಕ್ಷಣದ ಕುತೂಹಲ, ನಿರೀಕ್ಷೆಗಳ ತಳಮಳ, ದಿನದಿಂದ ದಿನಕ್ಕೆ ಹೆಚ್ಚಿದ ಉತ್ಸಾಹ ಇವುಗಳ ನಡುವೆ ಕೊಡಗಿನ ಹಿರಿಯ ರ್ಯಾಲಿಪಟು ಜಗತ್ ನಂಜಪ್ಪ ಹಾಗೂ ಅವರ ಸಹ ಚಾಲಕ ಚೇತನ್ ಚಂಗಪ್ಪ ಅವರು ಪ್ರಸಕ್ತ ಸಾಲಿನ ರೈನ್ ಫಾರೆಸ್ಟ್ ಚಾಲೆಂಜ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ವಿ೫ ಆಫ್ ರೋಡರ್ಸ್ ತಂಡವನ್ನು ಪ್ರತಿನಿಧಿಸಿದ ಜಗತ್ ಹಾಗೂ ಚೇತನ್ ಮಲೇಷ್ಯಾದಲ್ಲಿ ನಡೆಯಲಿರುವ ವಿಶ್ವ ರೈನ್ ಫಾರೆಸ್ಟ್ ಚಾಲೆಂಜ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
೨೦೦೬ ಅಂಕಗಳನ್ನು ಗಳಿಸಿದ ಜಗತ್ ಹಾಗೂ ಚೇತನ್ ಜೋಡಿ ಐದನೇ ವರ್ಷದ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡರು. ದಕ್ಷಿಣ ಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಹಾಗೂ ಭಾರತದ ಎರಡನೇ ರ್ಯಾಲಿಪಟು ಎಂಬ ಹೆಗ್ಗಳಿಕೆಗೆ ಜಗತ್ ನಂಜಪ್ಪ ಪಾತ್ರರಾದರು.
ಮಲೇಷ್ಯಾದ ಮೆರ್ವಿನ್ ಲಿಮ್ ಹಾಗೂ ಸಹ ಚಾಲಕ ಅಲೆಕ್ಸ್ ಟಾನ್ ಸಮಗ್ರ ಎರಡನೇ ಸ್ಥಾನ ಗಳಿಸಿದರು. ಈ ಇಬ್ಬರೂ ಸ್ಪರ್ಧಿಗಳು ಜಿಒಎ ತಂಡವನ್ನು ಪ್ರತಿನಿಧಿಸಿದ್ದರು. ಲಿಮ್ ಜೋಡಿ ಒಟ್ಟು ೧೮೪೯ ಅಂಕ ಗಳಿಸಿತ್ತು. ಆರ್‌ಎಫ್ ಸಿ ಇಂಡಿಯಾ ಹಾಲಿ ಚಾಂಪಿಯನ್ ಗೆರಾರಿ ಆಫ್ ರೋಡರ್ಸ್ ಗುರ್ಮಿತ್ ವಿರ್ಡಿ ಹಾಗೂ ಸಹ ಚಾಲಕ ಕ್ರಪಾಲ್ ಸಿಂಗ್ ತುಂಗ್ ಮೂರನೇ ಸ್ಥಾನ ಗಳಿಸಿದರು. ಈ ಜೋಡಿ ಒಟ್ಟು ೧೮೦೦ ಅಂಕ ಗಳಿಸಿತ್ತು, ಗೆರಾರಿ ಆಫ್ ರೋಡರ್ಸ್ ಸನ್ಬೀರ್ ಸಿಂಗ್ ಫಾಲಿವಾಲಾ ಹಾಗೂ ಸಹ ಚಾಲಕ ಗುರ್‌ಪ್ರತಾಪ್ ಸಿಂಗ್ ಸಂಧೂ ನಾಲ್ಕನೇ ಸ್ಥಾನ ಗಳಿಸಿದರು. ಈ ಜೋಡಿಯ ಒಟ್ಟು ಅಂಕ ೧೭೪೨. ಹೈದರಾಬಾದ್‌ನ ಡಾ. ಚೈತನ್ಯ ಚಲ್ಲಾ ಹಾಗೂ ಸಹ ಚಾಲಕ ಶ‘ಭರೀಶ್ ಜಗರಾಪು ೧೬೬೮ ಅಂಕಗಳೊಂದಿಗೆ ಐದನೇ ಸ್ಥಾನಕ್ಕೆ ತೃಪ್ತಿಪಟ್ಟರು