ಕೊಲಂಬೊ: ಬಾಂಗ್ಲಾದೇಶ ವಿರುದ್ಧದ ಫೈನಲ್ ಪಂದ್ಯವನ್ನು ಗೆದ್ದು ತ್ರಿಕೋನ ಟಿ20 ಸರಣಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಲು ಭಾರತ ತಂಡ ಕೊನೆಯ ಎಸೆತದಲ್ಲಿ 5 ರನ್ ಗಳಿಸಬೇಕಿತ್ತು. ಬೌಂಡರಿ ಬಾರಿಸಿದರೆ ಪಂದ್ಯ ಟೈ. ಆದರೆ ಕ್ರೀಸ್‌ನಲ್ಲಿದ್ದ ತಮಿಳುನಾಡಿನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಸಿಕ್ಸರ್ ಸಿಡಿಸಿ ಭಾರತಕ್ಕೆ ರೋಚಕ ಜಯ ತಂದುಕೊಟ್ಟರು. ಪಂದ್ಯ ಗೆದ್ದು ಕೊಟ್ಟ ದಿನೇಶ್ ಕಾರ್ತಿಕ್ ಅವರನ್ನು ಮೈದಾನದಲ್ಲಿ ಬೀಳಿಸಿದ ಟೀಮ್ ಇಂಡಿಯಾ ಆಟಗಾರರು ಅವರ ಮೇಲೆ ಮುಗಿ ಬಿದ್ದು ಸಂಭ್ರಮಿಸಿದರು.
ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾದ ತಂಡದ ಹಂಗಾಮಿ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡರು. ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್‌ಗಳ ಉತ್ತಮ ಮೊತ್ತ ಕಲೆ ಹಾಕಿತು. ಶಬ್ಬೀರ್ ರಹ್ಮಾನ್ 50 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ 77 ರನ್ ಸಿಡಿಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು.
ನಂತರ ಗೆಲುವಿಗೆ 167 ರನ್‌ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 32 ರನ್ ಗಳಿಸುವಷ್ಟರಲ್ಲಿ ಗಬ್ಬರ್ ಖ್ಯಾತಿಯ ಶಿಖರ್ ಧವನ್ ಮತ್ತು ಸಿಡಿಲಬ್ಬರದ ಬ್ಯಾಟ್ಸ್‌ಮನ್ ಸುರೇಶ್ ರೈನಾ ಅವರನ್ನು ಕಳೆದುಕೊಂಡಿತು. ಆದರೆ 3ನೇ ವಿಕೆಟ್‌ಗೆ ನಾಯಕ ರೋಹಿತ್ ಶರ್ಮಾ ಮತ್ತು ಕನ್ನಡಿಗ ಕೆ.ಎಲ್ ರಾಹುಲ್ 36 ಎಸೆತಗಳಲ್ಲಿ 51 ರನ್ ಸೇರಿಸಿ ಗೆಲುವಿಗೆ ಬೇಕಾದ ವೇದಿಕೆ ನಿರ್ಮಿಸಿಕೊಟ್ಟರು.
ಆದರೆ 14 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 24 ರನ್ ಬಾರಿಸಿದ ರಾಹುಲ್ ತಂಡದ ಮೊತ್ತ 83 ರನ್‌ಗಳಾಗಿದ್ದಾಗ ಔಟಾದರು. ತಂಡದ ಮೊತ್ತಕ್ಕೆ 16 ರನ್ ಒಟ್ಟುಗೂಡುವಷ್ಟರಲ್ಲಿ 42 ಎಸೆತಗಳಲ್ಲಿ 56 ರನ್ ಗಳಿಸಿ ಆಡುತ್ತಿದ್ದ ರೋಹಿತ್ ಶರ್ಮಾ ಕೂಡ ಔಟಾದರು.
ಮನೀಶ್ ಪಾಂಡೆ 27 ಎಸೆತಗಳಲ್ಲಿ 28 ರನ್ ಹಾಗೂ ವಿಜಯ್ ಶಂಕರ್ 19 ಎಸೆತಗಳಲ್ಲಿ 17 ರನ್ ಗಳಿಸಿದರೂ ಅವರ ಆಟದಲ್ಲಿ ವೇಗ ಇರಲಿಲ್ಲ. ಹೀಗಾಗಿ ಭಾರತ ಕಡಿಮೆ ಎಸೆತಗಳಲ್ಲಿ ಹೆಚ್ಚು ರನ್ ಗಳಿಸುವ ಒತ್ತಡಕ್ಕೆ ಸಿಲುಕಿತು.
ಆದರೆ 7ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ದಿನೇಶ್ ಕಾರ್ತಿಕ್ ಅಬ್ಬರದ ಆಟವಾಡಿ ತಂಡವನ್ನು ಜಯದ ಹೊಸ್ತಿಲಲ್ಲಿ ತಂದು ನಿಲ್ಲಿಸಿದರು. ಕಾರ್ತಿಕ್ ಅವರ ಸ್ಫೋಟಕ ಆಟದಿಂದ ಚೇತರಿಸಿಕೊಂಡ ಭಾರತ ಕೊನೆಯ ಓವರ್‌ನಲ್ಲಿ 12 ರನ್ ಗಳಿಸುವ ಗುರಿ ಪಡೆಯಿತು. ಮೊದಲ 4 ಎಸೆತಗಳಲ್ಲಿ ದಿನೇಶ್ ಕಾರ್ತಿಕ್ ಮತ್ತು ವಿಜಯ್ ಶಂಕರ್ 7 ರನ್ ಗಳಿಸಿದರು. 5ನೇ ಎಸೆತದಲ್ಲಿ ವಿಜಯ್ ಶಂಕರ್ ಔಟಾಗಿದ್ದರಿಂದ ಕೊನೆಯ ಎಸೆತದಲ್ಲಿ ಗೆಲ್ಲಲು 5 ರನ್ ಗಳಿಸುವ ಸವಾಲು ಭಾರತಕ್ಕೆ ಎದುರಾಯಿತು.
ಸೌಮ್ಯ ಸರ್ಕಾರ್ ಎಸೆದ ಎಸೆತವನ್ನು ಅಮೋಘವಾಗಿ ಸಿಕ್ಸರ್‌ಗಟ್ಟಿದ ದಿನೇಶ್ ಕಾರ್ತಿಕ್ ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು. 20 ಓವರ್‌ಗಳಲ್ಲಿ 6 ವಿಕೆಟ್‌ಗೆ 168 ರನ್ ಗಳಿಸಿ ಬಾಂಗ್ಲಾ ಹುಲಿಗಳನ್ನು ಬೇಟೆಯಾಡಿದ ಭಾರತ ಸರಣಿ ಗೆದ್ದು ಬೀಗಿತು. ಕೇವಲ 8 ಎಸೆತಗಳನ್ನೆದುರಿಸಿದ ದಿನೇಶ್ ಕಾರ್ತಿಕ್ 2 ಬೌಂಡರಿ ಮತ್ತು 3 ಅಮೋಘ ಸಿಕ್ಸರ್‌ಗಳ ನೆರವಿನಿಂದ ಅಜೇಯ 29 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 166 ರನ್
ಶಬ್ಬೀರ್ ರಹ್ಮಾನ್ 77, ಮಹಮ್ಮದುಲ್ಲಾ 21, ಮೆಹದಿ ಹಸನ್ 19; ಯುಜ್ವೇಂದ್ರ ಚೆಹಾಲ್ 3/18, ವಾಷಿಂಗ್ಟನ್ ಸುಂದರ್ 1/20, ಜೈದೇವ್ ಉನಾದ್ಕಟ್ 2/33.
ಭಾರತ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 168 ರನ್
ರೋಹಿತ್ ಶರ್ಮಾ 56, ಕೆ.ಎಲ್ ರಾಹುಲ್ 24, ಮನೀಶ್ ಪಾಂಡೆ 28, ದಿನೇಶ್ ಕಾರ್ತಿಕ್ ಅಜೇಯ 29; ರುಬೆಲ್ ಹೊಸೇನ್ 2/35, ಮುಸ್ತಾಫಿಜುರ್ ರಹ್ಮಾನ್ 1/21, ಶಕೀಬ್ ಅಲ್ ಹಸನ್ 1/28.
You beauty ! @DineshKarthik.
Incredible knock from @DineshKarthik under pressure.