Friday, March 29, 2024

ಚೆನ್ನೈಯಿನ್ -ಗೋವಾ ನಡುವಿನ ಮೊದಲ ಸೆಮಿಫೈನಲ್ ಪಂದ್ಯ ಡ್ರಾ

ಗೋವಾ: ಪ್ರಬಲ ಪೈಪೋಟಿಯ ನಡುವೆಯೂ ಆತಿಥೇಯ ಹೀರೊ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನಲ್ಲಿ ಆತಿಥೇಯ ಎಫ್‌ಸಿ ಗೋವಾ ಮತ್ತು ವಿರುದ್ಧದ ಪ್ರವಾಸಿ ಚೆನ್ನೈಯಿನ್ ಎಫ್‌ಸಿ ತಂಡಗಳ ನಡುವಿನ ಸೆಮಿಫೈನಲ್-2ರ ಮೊದಲ ಚರಣದ ಪಂದ್ಯದ 1-1 ಡ್ರಾದಲ್ಲಿ ಅಂತ್ಯಗೊಂಡಿದೆ.
PC: ISL
ಉಭಯ ತಂಡಗಳ 2ನೇ ಚರಣದ ಸೆಮಿಫೈನಲ್ ಪಂದ್ಯ ಚೆನ್ನೈನ ಜವಾಹರ್ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿದ್ದು, ಗೆದ್ದ ತಂಡ ಪ್ರಶಸ್ತಿ ಸುತ್ತಿಗೇರಲಿದೆ.
ಶನಿವಾರ ನಡೆದ ಪಂದ್ಯದಲ್ಲಿ ಗೋವಾ ತಂಡದ ಪರ ಮ್ಯಾನ್ಯುಯೆಲ್  ಲಾನ್ಜರೊಟ್ 64ನೇ ನಿಮಿಷದಲ್ಲಿ ತಂಡದ ಪರ ಹಾಗೂ ಪಂದ್ಯದಲ್ಲಿ ಮೊದಲ ಗೋಲು ಗಳಿಸಿ ಗೋವಾ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಅಲ್ಲದೆ ಪ್ರವಾಸಿ ಚೆನ್ನೈಯಿನ್ ಪಾಳೆಯದಲ್ಲಿ ಸೋಲಿನ ಭೀತಿ ಮೂಡಿಸಿದರು.
ಆದರೆ ಏಳೇ ನಿಮಿಷಗಳ ಅಂತರದಲ್ಲಿ ಪ್ರವಾಸಿ ತಂಡ ಆತಿಥೇಯರಿಗೆ ತಿರುಗೇಟು ನೀಡಿತು. ಸ್ವದೇಶಿ ಆಟಗಾರ ಅನಿರುದ್ಧ್ ಥಾಪಾ 71ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡದ ಸೋಲನ್ನು ತಪ್ಪಿಸಿ ಪಂದ್ಯವನ್ನು ಡ್ರಾಗೊಳಿಸುವಲ್ಲಿ ಯಶಸ್ವಿಯಾದರು.
ಗೋಲು ರಹಿತ ನೀರಸ ಪ್ರಥಮಾರ್ಧ
ಚೆನ್ನೈಯಿನ್ ಮತ್ತು ಗೋವಾ ತಂಡಗಳು ಹೀರೊ ಐಎಸ್‌ಎಲ್‌ನ ಸಾಂಪ್ರದಾಯಿಕ ವೈರಿಗಳು. ಉಭಯ ತಂಡಗಳ ಈ ಹಿಂದಿನ ಮುಖಾಮುಖಿಗಳು ರೋಚಕ ಕದನಕ್ಕೆ ಸಾಕ್ಷಿಯಾಗಿದ್ದರು. ಹೀಗಾಗಿ ಈ ಪಂದ್ಯದಲ್ಲೂ ಚೆನ್ನೈಯಿನ್ ಮತ್ತು ಆತಿಥೇಯ ಗೋವಾ ತಂಡಗಳಿಂದ ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷಿಸಲಾಗಿತ್ತು. ಆದರೆ ಪಂದ್ಯ 1-1ರ ಡ್ರಾ ಅಂತ್ಯಗೊಳ್ಳುವುದರೊಂದಿಗೆ ವಿಜಯಲಕ್ಷ್ಮೀ ಯಾರಿಗೂ ಒಲಿಯಲಿಲ್ಲ.
ಆಕ್ರಮಣಕಾರಿ ಆಟಕ್ಕೆ ಹೆಸರಾಗಿರುವ ಗೋವಾ ತಂಡ ಪ್ರಥಮಾರ್ಧದ ಆರಂಭದಿಂದಲೂ ಪದೇ ಪದೇ ಚೆನ್ನೈಯಿನ್ ತಂಡದ ರಕ್ಷಣಾಕೋಟೆಯನ್ನುಭೇದಿಸುವ ಪ್ರಯತ್ನ ಮಾಡಿತು. ಆದರೆ ನಿರೀಕ್ಷೆಗೆ ತಕ್ಕಂತೆ ಗೋಲು ಗಳಿಸುವಲ್ಲಿ ಎಡವಿತು. ಇಡೀ ಲೀಗ್‌ನಲ್ಲೇ 42 ಗೋಲುಗಳೊಂದಿಗೆ ಅತಿ ಹೆಚ್ಚು ಗೋಲು ಗಳಿಸಿದ ತಂಡವೆಂಬ ಖ್ಯಾತಿ ಗೋವಾದ ಆಕ್ರಮಣವನ್ನು ಚೆನ್ನೈಯಿನ್ ತಂಡ ಪ್ರಥಮಾರ್ದಲ್ಲಿ ಯಶಸ್ವಿಯಾಗಿ ಹಿಮ್ಮೆಟ್ಟಿಸಿತು.
ರೋಚಕ ದ್ವಿತೀಯಾರ್ಧ
ಗೋಲು ರಹಿತ ಪ್ರಥಮಾರ್ಧದ ನಂತರ ದ್ವಿತೀಯಾರ್ದಲ್ಲಿ ಮತ್ತೆ ಕಂಡು ಬಂದದ್ದು ಜಿದ್ದಾಜಿದ್ದಿನ ಕಾದಾಟ. ಇದರಲ್ಲಿ ಗೋವಾಗೆ ಮೊದಲ ಯಶಸ್ಸು. ತಂಡದ ಸ್ಟಾರ್ ಆಟಗಾರ ಮ್ಯಾನ್ಯುಯೆಲ್ ಲಾನ್ಜರೊಟ್ 64ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ವ್ಯರ್ಥಗೊಳಿಸದೆ ಗೋಲು ಪೆಟ್ಟಿಗೆಯೊಳಗೆ ಚೆಂಡನ್ನು ಸೇರಿಸಿದಾಗ, ಕ್ರೀಡಾಂಗಣದಲ್ಲಿ ನೆರೆದಿದ್ದ ತವರು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು.
ಆದರೆ ಈ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಕೆಲವೇ ನಿಮಿಷಗಳಲ್ಲಿ ಚೆನ್ನೈಯಿನ್  ತಿರುಗೇಟು ನೀಡಿ 1-1ರಲ್ಲಿ ಸಮಬಲದದ ಹೋರಾಟ ತೋರಿತು. ಅನಿರುದ್ಧ ಥಾಪಾ ತಂಡದ ಪಾಲಿಗೆ ಆಪ್ತರಕ್ಷಕನಾಗಿ ಮಿಂಚಿ ಎದುರಾಗಲಿದ್ದ ಸೋಲನ್ನು ತಪ್ಪಿಸಿದರು.
ಎಡವಿದ ಕೊರೊಮಿನಾಸ್
ಹೀರೊ ಐಎಸ್‌ಎಲ್ ಲೀಗ್ ಹಂತದಲ್ಲಿ 2ನೇ ಸ್ಥಾನ ಪಡೆದಿದ್ದ ಚೆನ್ನೈಯಿನ್  ತಂಡಕ್ಕೆ ಗೋವಾ ಪ್ರಬಲ ಸವಾಲೊಡ್ಡಿತು. ಕೊನೆಯ ಮೂರೂ ಲೀಗ್ ಪಂದ್ಯಗಳನ್ನು ಅದ್ಭುತವಾಗಿ ಗೆದ್ದು ಪ್ಲೇ ಆಫ್ ಹಂತಕ್ಕೇರಿದ್ದ ಗೋವಾ ತಂಡಕ್ಕೆ ಮೊದಲ ಚರಣದಲ್ಲಿ ಗೆಲುವು ಲಭ್ಯವಾಗದಿರಲು ಪ್ರಮುಖ ಕಾರಣ ಕೊರೊಮಿನಾಸ್ ಅವರ ವೈಫಲ್ಯ. ಹೀರೊ ಐಎಸ್‌ಎಲ್ ಲೀಗ್‌ನಲ್ಲಿ ಅತಿ ಹೆಚ್ಚು 18 ಗೋಲುಗಳನ್ನು ಬಾರಿಸಿ ಗೋಲ್ಡನ್ ಬೂಟ್ ರೇಸ್‌ನಲ್ಲಿರುವ ಕೊರೊಮಿನಾಸ್, ಶನಿವಾರ ಮಾತ್ರ ಬರಿಗೈ ದೊರೆಯಾದರು. ಪ್ರಮುಖ ಸ್ಟ್ರೈಕರ್ ಕೊರೊಮಿನಾಸ್ ಅವರಿಗೆ ಒಂದೂ ಗೋಲು ಬಾರಿಸಲು ಸಾಧ್ಯವಾಗದಿದ್ದದ್ದು ಗೋವಾ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಆದರೆ ಮತ್ತೊಬ್ಬ ಸ್ಟ್ರೈಕರ್ ಮ್ಯಾನ್ಯುಯೆಲ್ ಲಾನ್ಜರೊಟ್ ತಮ್ಮ ಮೇಲಿನ ನಿರೀಕ್ಷೆಯನ್ನು ಹುಸಿಗೊಳಿಸದೆ ಗೋಲು ತಂದು ಕೊಟ್ಟರು.

Related Articles