Thursday, April 18, 2024

ನಮಗೊಂದು ನ್ಯಾಯ, ಕಾಂಗರೂಗಳಿಗೊಂದು ನ್ಯಾಯ…. ಭಜ್ಜಿ ಕೋಪ ಯಾರ ಮೇಲೆ?

ಬೆಂಗಳೂರು: ಟರ್ಬನೇಟರ್ ಹರ್ಭಜನ್ ಸಿಂಗ್ ಗರಂ ಆಗಿದ್ದಾರೆ. ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರರು ಬಾಲ್ ಟ್ಯಾಂಪರಿಂಗ್ ನಡೆಸಿದ ವಿಚಾರದಲ್ಲಿ ಐಸಿಸಿ ನಡೆದುಕೊಂಡ ರೀತಿಗೆ ಹರ್ಭಜನ್ ಸಿಂಗ್ ಕೆಂಡಾಮಂಡಲರಾಗಿದ್ದಾರೆ.

PC: Twitter/Harbhajan Singh

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಕ್ಯಾಮರಾನ್ ಬ್ಯಾಂಕ್ರ್‌ಟಾ ಬಾಲ್ ಟ್ಯಾಂಪರಿಂಗ್ ನಡೆಸಲು ಪ್ರಯತ್ನಿಸಿರುವುದು ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಅಲ್ಲದೆ ಬಾಲ್ ಟ್ಯಾಂಪರಿಂಗ್ ನಡೆಸಲು ಇಡೀ ತಂಡವೇ ತಂತ್ರ ಹೂಡಿತ್ತು ಎಂಬ ಆಘಾತಕಾರಿ ಸತ್ಯವನ್ನು ಸುದ್ದಿಗೋಷ್ಠಿ ಸ್ವತಃ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ಅವರೇ ಒಪ್ಪಿಕೊಂಡಿದ್ದರು.
ಇದಾದ ನಂತರ ಸ್ಟೀವನ್ ಸ್ಮಿತ್ ಅವರಿಗೆ ಐಸಿಸಿ ಒಂದು ಪಂದ್ಯದ ನಿಷೇಧ ಶಿಕ್ಷೆ ವಿಧಿಸಿತ್ತು. ಅಲ್ಲದೆ ಪಂದ್ಯ ಸಂಭಾವನೆಯ ಶೇಕಡ 100ರಷ್ಟು ದಂಡವನ್ನೂ ವಿಧಿಸಿತ್ತು. ಆದರೆ ಬ್ಯಾಂಕ್ರಾಫ್ಟ್ ಅವರಿಗೆ ನಿಷೇಧ ಹೇರದೆ ಪಂದ್ಯ ಸಂಭಾವನೆಯ ಶೇಕಡ 75ರಷ್ಟು ದಂಡ ಮಾತ್ರ ವಿಧಿಸಿದೆ. ಇದು ಹರ್ಭಜನ್ ಸಿಂಗ್ ಅವರ ಕೋಪಕ್ಕೆ ಕಾರಣವಾಗಿದೆ. ಐಸಿಸಿ ವಿರುದ್ಧ ತಮ್ಮ ಸಿಟ್ಟನ್ನು ಭಜ್ಜಿ ಟ್ವಿಟರ್‌ನಲ್ಲಿ ಹೊರ ಹಾಕಿದ್ದಾರೆ.

ವ್ಹಾವ್ ಐಸಿಸಿ ವ್ಹಾವ್… ಎಲ್ಲಾ ಸಾಕ್ಷಿಗಳಿದ್ದರೂ ಬ್ಯಾಂಕ್ರಾಫ್ಟ್ ಗೆ ನಿಷೇಧ ಹೇರಿಲ್ಲ. ಆದರೆ 2001ರಲ್ಲಿ ನಾವು ಔಟ್‌ಗಾಗಿ ಅತಿಯಾಗಿ ಮನವಿ ಸಲ್ಲಿಸಿದ ಕಾರಣಕ್ಕೆ ಯಾವುದೇ ಸಾಕ್ಷಿ ಇಲ್ಲದಿದ್ದರೂ 6 ಮಂದಿಯ ಮೇಲೆ ನಿಷೇಧ ಶಿಕ್ಷೆ ವಿಧಿಸಿದ್ದಿರಿ ಮತ್ತು 2008ರ ಸಿಡ್ನಿ ಟೆಸ್ಟ್ ಪಂದ್ಯ ನೆನಪಿದೆಯೇ? ಅಲ್ಲಿ ನನ್ನದೇನೂ ತಪ್ಪಿಲ್ಲದಿದ್ದರೂ 3 ಪಂದ್ಯಗಳ ನಿಷೇಧ ಶಿಕ್ಷೆ ವಿಧಿಸಲಾಗಿತ್ತು. ವಿಭಿನ್ನ ವ್ಯಕ್ತಿಗಳಿಗೆ ವಿಭಿನ್ನ ಕಾನೂನು.
– ಹರ್ಭಜನ್ ಸಿಂಗ್, ಭಾರತದ ಕ್ರಿಕೆಟಿಗ.

 

Harbhajan Turbanator @harbhajan_singh

wow @ICC wow. Great treatment nd FairPlay. No ban for Bancroft with all the evidences whereas 6 of us were banned for excessive appealing in South Africa 2001 without any evidence and Remember Sydney 2008? Not found guilty and banned for 3 matches.different people different rules.

 

Related Articles