ಬರ್ಮಿಂಗ್ಹ್ಯಾಮ್: ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಬುಧವಾರ ಆರಂಭವಾಗಲಿದ್ದು, ಭಾರತದ ಸ್ಟಾರ್ ಶಟ್ಲರ್ಗಳಾದ ಸೈನಾ ನೆಹ್ವಾಲ್, ಪಿ.ವಿ ಸಿಂಧೂ ಮತ್ತು ಕಿಡಂಬಿ ಶ್ರೀಕಾಂತ್ ಪ್ರಶಸ್ತಿ ಗೆಲ್ಲುವ ಕನಸು ಹೊಂದಿದ್ದಾರೆ.
ಸಿಂಗಲ್ಸ್ ವಿಭಾಗದಲ್ಲಿ ಸೈನಾ, ಸಿಂಧೂ ಮತ್ತು ಶ್ರೀಕಾಂತ್ ಭಾರತದ ಭರವಸೆಯಾಗಿದ್ದಾರೆ.
2015ರ ಆಲ್ ಇಂಗ್ಲೆಂಡ್ ಚಾಂಪಿಯನ್ಷಿಪ್ನ ಮಹಿಳಾ ಸಿಂಗಲ್ಸ್ನಲ್ಲಿ ಫೈನಲ್ ತಲುಪಿದ್ದ ಸೈನಾ ನೆಹ್ವಾಲ್, ಫೈನಲ್ನಲ್ಲಿ ಸ್ಪೇನ್ನ ಕ್ಯಾರೊಲಿನಾ ಮರಿನ್ ವಿರುದ್ಧ ಸೋತು ನಿರಾಸೆ ಅನುಭವಿಸಿದ್ದರು.
ಬ್ಯಾಡ್ಮಿಂಟನ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ಟೂರ್ನಿಯಾಗಿರುವ ಆಲ್ ಇಂಗ್ಲೆಂಡ್ ಚಾಂಪಿಯನ್ಷಿಪ್ನಲ್ಲಿ ಇದುವರೆಗೆ ಭಾರತದ ಇಬ್ಬರು ಮಾತ್ರ ಪ್ರಶಸ್ತಿ ಗೆದ್ದಿದ್ದಾರೆ. 1980ರಲ್ಲಿ ಕನ್ನಡಿಗ ಪ್ರಕಾಶ್ ಪಡುಕೋಣೆ ಮೊದಲ ಬಾರಿ ಆಲ್ ಇಂಗ್ಲೆಂಡ್ ಗೆದ್ದು ಇತಿಹಾಸ ನಿರ್ಮಿಸಿದರೆ, 2001ರಲ್ಲಿ ಹೈದರಾಬಾದ್ನ ಪುಲ್ಲೇಲ ಗೋಪಿಚಂದ್ ಈ ಸಾಧನೆ ಮಾಡಿದ್ದರು. ಗೋಪಿಚಂದ್ ಸದ್ಯ ರಾಷ್ಟ್ರೀಯ ತಂಡದ ಕೋಚ್ ಆಗಿದ್ದಾರೆ.