ಬೆಂಗಳೂರು: ಸಚಿನ್ ತೆಂಡೂಲ್ಕರ್ ಅಂದ್ರೆ ದಾಖಲೆ, ದಾಖಲೆಗಳಂದ್ರೆ ಸಚಿನ್ ತೆಂಡೂಲ್ಕರ್.. ಕ್ರಿಕೆಟ್ ಮೈದಾನದಲ್ಲಿ ಹಲವಾರು ವಿಶ್ವದಾಖಲೆಗಳನ್ನು ನಿರ್ಮಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ನಿವೃತ್ತಿಯ ಬಳಿಕವೂ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಮೂಲಕ ನಿವೃತ್ತಿಯಾದರೂ ತಮ್ಮ ಖದರ್ ಕಮ್ಮಿಯಾಗಿಲ್ಲ ಎಂಬುದನ್ನು ಸಚಿನ್ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಸಚಿನ್ ಈಗ ನಿರ್ಮಿಸಿರುವ ವಿಶ್ವದಾಖಲೆ ಏನು ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ. ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಎರಡೂವರೆ ಕೋಟಿ ಹಿಂಬಾಲಕ(ಫಾಲೋವರ್ಸ್)ರನ್ನು ಹೊಂದಿದ ವಿಶ್ವದ ಮೊಟ್ಟ ಮೊದಲ ಕ್ರಿಕೆಟ್ ಆಟಗಾರ ಎಂಬ ದಾಖಲೆಯನ್ನು ಸಚಿನ್ ಬರೆದಿದ್ದಾರೆ.
44 ವರ್ಷದ ಸಚಿನ್ ತೆಂಡೂಲ್ಕರ್ 2013ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದರು. ನಿವೃತ್ತಿಯಾಗಿ 4 ವರ್ಷಗಳು ಕಳೆದರೂ ಸಚಿನ್ ಅವರ ಹವಾ ಇನ್ನೂ ಹಾಗೆಯೇ ಇದೆ. ಈಗಿನ ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಖ್ಯಾತಿ ಹೊಂದಿರುವ ವಿರಾಟ್ ಕೊಹ್ಲಿ, ಎಂ.ಎಸ್ ಧೋನಿ ಅವರಂತಹ ದಿಗ್ಗಜರಿಗಿಂತ ಹೆಚ್ಚು ಟ್ವಿಟರ್ ಹಿಂಬಾಲಕರನ್ನು ಸಚಿನ್ ಹೊಂದಿದ್ದಾರೆ. ವಿರಾಟ್ ಕೊಹ್ಲಿ 2.4 ಕೋಟಿ ಫಾಲೋವರ್ಗಳನ್ನು ಹೊಂದಿದ್ದರೆ, ಎಂ.ಎಸ್ ಧೋನಿ ಇನ್ನೂ 1 ಕೋಟಿ ಹಿಂಬಾಲಕರನ್ನು ತಲುಪಿಲ್ಲ.