Thursday, January 2, 2025

ಪಾಂಡೆ ಬ್ಯಾಟಿಂಗ್ ಪವರ್, ಠಾಕೂರ್ ಬೌಲಿಂಗ್ ಖದರ್… ಸಿಂಹಗಳನ್ನು ಬೇಟೆಯಾಡಿದ ಟೀಮ್ ಇಂಡಿಯಾ

ಕೊಲಂಬೊ: ಕರ್ನಾಟಕದ ಭರವಸೆಯ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ಅವರ ಆಕರ್ಷಕ ಬ್ಯಾಟಿಂಗ್ ಆರ್ಭಟ, ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಲ್ಲಿ ಭಾರತಕ್ಕೆ ಸತತ 2ನೇ ಜಯ ತಂದು ಕೊಟ್ಟಿದೆ.

PC: Twitter/BCCI

ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಭಾರತ, ಆತಿಥೇಯ ಶ್ರೀಲಂಕಾ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಮತ್ತಷ್ಟು ಹತ್ತಿರವಾಯಿತು.
ಮಳೆಯ ಕಾರಣ ತಲಾ 19 ಓವರ್‌ಗಳ ಇನ್ನಿಂಗ್ಸ್‌ಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡ, 9 ವಿಕೆಟ್ ನಷ್ಟಕ್ಕೆ 152 ರನ್ ಕಲೆ ಹಾಕಿತು. 11ನೇ ಓವರ್‌ನಲ್ಲಿ 2 ವಿಕೆಟ್‌ಗೆ 96 ರನ್ ಗಳಿಸಿ ಬೃಹತ್ ಮೊತ್ತದತ್ತ ಮುನ್ನುಗ್ಗುತ್ತಿದ್ದ ಸಿಂಹಳೀಯರಿಗೆ ಮುಂಬೈನ ಯುವ ವೇಗಿ ಶಾರ್ದೂಲ್ ಠಾಕೂರ್ ಮತ್ತು ತಮಿಳುನಾಡಿನ ಯುವ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಬ್ರೇಕ್ ಹಾಕಿದರು. ಹೀಗಾಗಿ ಶ್ರೀಲಂಕಾ 152 ರನ್ ಗಳಿಸಲಷ್ಟೇ ಶಕ್ತವಾಯಿತು.
153 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಭಾರತ ತಂಡ 22 ರನ್ ಗಳಿಸುವಷ್ಟರಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ವಿಕೆಟ್ ಕಳೆದುಕೊಂಡಿತು. 85 ರನ್ ಗಳಿಸುವಷ್ಟರಲ್ಲಿ ಕೆ.ಎಲ್ ರಾಹುಲ್ ಮತ್ತು ಸುರೇಶ್ ರೈನಾ ಕೂಡ ಪೆವಿಲಿಯನ್ ಸೇರಿಕೊಂಡಿದ್ದರು. ಆದರೆ ಮುರಿಯದ 5ನೇ ವಿಕೆಟ್‌ಗೆ ಕನ್ನಡಿಗ ಮನೀಶ್ ಪಾಂಡೆ ಮತ್ತು ದಿನೇಶ್ ಕಾರ್ತಿಕ್ 68 ರನ್ ಸೇರಿಸಿ ತಂಡವನ್ನು ಗುರಿ ಮುಟ್ಟಿಸಿದರು. 17.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿ ಜಯ ದಾಖಲಿಸಿದ ಭಾರತ, ಮೊದಲ ಪಂದ್ಯದಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿತು. ಜವಾಬ್ದಾರಿಯುತ ಆಟವಾಡಿದ ಮನೀಶ್ ಪಾಂಡೆ 31 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 42 ರನ್ ಗಳಿಸಿದರೆ, ದಿನೇಶ್ ಕಾರ್ತಿಕ್ 25 ಎಸೆತಗಳಲ್ಲಿ 5 ಬೌಂಡರಿಗಳನ್ನೊಳಗೊಂಡ ಅಜೇಯ 39 ರನ್ ಗಳಿಸಿದರು.
4 ಓವರ್‌ಗಳಲ್ಲಿ ಕೇವಲ 27 ರನ್ ನೀಡಿ 4 ವಿಕೆಟ್ ಕಬಳಿಸಿದ ಶಾರ್ದೂಲ್ ಠಾಕೂರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ: 19 ಓವರ್‌ಗಳಲ್ಲಿ 9 ವಿಕೆಟ್‌ಗೆ 152 ರನ್
ಕುಸಾಲ್ ಮೆಂಡಿಸ್ 55, ಉಪುಲ್ ತರಂಗ 2; ಶಾರ್ದೂಲ್ ಠಾಕೂರ್ 4 / 27, ವಾಷಿಂಗ್ಟನ್ ಸುಂದರ್ 2 / 21, ವಿಜಯ್ ಶಂಕರ್ 1 / 30.

ಭಾರತ: 17.3 ಓವರ್‌ಗಳಲ್ಲಿ 4 ವಿಕೆಟ್‌ಗೆ 153 ರನ್
ಮನೀಶ್ ಪಾಂಡೆ ಅಜೇಯ 42, ದಿನೇಶ್ ಕಾರ್ತಿಕ್ ಅಜೇಯ 39, ಸುರೇಶ್ ರೈನಾ ಅಜೇಯ 27; ಅಕಿಲ ಧನಂಜಯ 2 / 19.

Related Articles