Saturday, December 21, 2024

ಭಾರತೀಯ ಕ್ರಿಕೆಟ್‌ನ ನಿಸ್ವಾರ್ಥ ಸೇವಕನ ಮಾತಿಗೆ ಬಿಸಿಸಿಐ ಬೆಲೆ ಕೊಡಬೇಕು

ದಿ ಸ್ಪೋರ್ಟ್ಸ್ ಬ್ಯೂರೋ

ಬೆಂಗಳೂರು: ಭಾರತೀಯ ಕ್ರಿಕೆಟ್‌ನ ನಿಸ್ವಾರ್ಥ ಸೇವಕ, ಕನ್ನಡಿಗ ರಾಹುಲ್ ದ್ರಾವಿಡ್ ಮತ್ತೆ ಸುದ್ದಿಯಲ್ಲಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ನಡೆದ ಕಿರಿಯರ ವಿಶ್ವಕಪ್‌ನಲ್ಲಿ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ ತಂಡ ಚಾಂಪಿಯನ್ ಪಟ್ಟಕ್ಕೇರಿ ಭಾರತಕ್ಕೆ ಮರಳಿದ ಮರುಕ್ಷಣವೇ ಕ್ರಿಕೆಟ್ ಜಗತ್ತಿನ ಸಹನಾಮೂರ್ತಿ, ಜಂಟಲ್‌ಮ್ಯಾನ್ ದ್ರಾವಿಡ್ ಕೋಪಿಸಿಕೊಂಡಿದ್ದಾರೆ. ಭಾರತದ ಕ್ರಿಕೆಟ್ ಪ್ರಿಯರು ಯುವ ಭಾರತದ ಐತಿಹಾಸಿಕ ಸಾಧನೆಗೆ ಸಂಭ್ರಮಿಸುತ್ತಿದ್ದರೆ, ಆ ವಿಶ್ವವಿಕ್ರಮದ ಸೂತ್ರಧಾರನಾಗಿದ್ದ ದ್ರಾವಿಡ್ ಬೇಸರಿಸಿಕೊಂಡಿದ್ದಾರೆ.

PC: Twitter/ICC

ರಾಹುಲ್ ದ್ರಾವಿಡ್ ಅವರ ಬೇಸರಕ್ಕೆ ಕಾರಣವಿದೆ. ವಿಶ್ವಕಪ್ ಗೆದ್ದ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭಾರತ ತಂಡದ ಆಟಗಾರರಿಗೆ ಮತ್ತು ಸಹಾಯಕ ಸಿಬ್ಬಂದಿಗೆ ನಗದು ಬಹುಮಾನ ಘೋಷಿಸಿತ್ತು. ಅದರಂತೆ ತಂಡದ ಪ್ರಧಾನ ಕೋಚ್ ದ್ರಾವಿಡ್ ಅವರಿಗೆ 50 ಲಕ್ಷ ರೂ., ಆಟಗಾರರಿಗೆ ತಲಾ 30 ಲಕ್ಷ ರೂ. ಮತ್ತು ಸಹಾಯಕ ಸಿಬ್ಬಂದಿಗೆ ತಲಾ 20 ಲಕ್ಷ ರೂ.ಗಳನ್ನು ನೀಡುವುದಾಗಿ ತಿಳಿಸಿತ್ತು. ದ್ರಾವಿಡ್ ಅವರ ಮನಸ್ಸಿಗೆ ನೋವು ತಂದಿರುವ ವಿಚಾರ ಇದೇ.

ವಿಶ್ವಕಪ್ ಗೆದ್ದದ್ದಕ್ಕಾಗಿ ತಮಗೆ ಮಾತ್ರ 50 ಲಕ್ಷ ರೂ., ಇತರ ಸಹಾಯಕ ಸಿಬ್ಬಂದಿಗೆ ಕೇವಲ 20 ಲಕ್ಷ., ಮೈದಾನದಲ್ಲಿ ಬೆವರು ಹರಿಸಿದ ಆಟಗಾರರಿಗೆ 30 ಲಕ್ಷ., ಇದ್ಯಾವ ನ್ಯಾಯ ಎಂಬುದು ದ್ರಾವಿಡ್ ಪ್ರಶ್ನೆ. ವಿಶ್ವಕಪ್ ಗೆಲುವಿನಲ್ಲಿ ಎಲ್ಲರದ್ದೂ ಸಮಾನ ಪಾತ್ರ. ಹೀಗಾಗಿ ಬಹುಮಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ, ಅಸಮಾನತೆ ಇರಬಾರದು ಎಂಬುದು ದ್ರಾವಿಡ್ ನಿಲುವು. ತಮ್ಮ ನಿಲುವನ್ನು ದ್ರಾವಿಡ್ ಈಗಾಗಲೇ ಬಿಸಿಸಿಐಗೂ ಸ್ಪಷ್ಟಪಡಿಸಿದ್ದಾರೆ.

ದ್ರಾವಿಡ್ ಅವರ ವ್ಯಕ್ತಿತ್ವವೇ ಅಂಥದ್ದು. ಯಶಸ್ಸಿನ ಶ್ರೇಯವನ್ನು ತಾವೊಬ್ಬರೇ ಸ್ವೀಕರಿಸದೆ ಎಲ್ಲರೊಂದಿಗೆ ಹಂಚಿಕೊಳ್ಳುವ ದೊಡ್ಡ ವ್ಯಕ್ತಿ ದ್ರಾವಿಡ್. ಭಾರತ ತಂಡದ ಪರ ಆಡುತ್ತಿದ್ದಾಗ ತಾವೊಬ್ಬ ಹಿರಿಯ ಆಟಗಾರನೆಂಬ ಹಮ್ಮು-ಬಿಮ್ಮು ತೋರದೆ ಎಲ್ಲಾ ಪಾತ್ರಗಳನ್ನು ನಿಭಾಯಿಸಿದ್ದ ಟೀಮ್ ಮ್ಯಾನ್ ದ್ರಾವಿಡ್ ಈಗ ಕಿರಿಯರ ತಂಡದ ಕೋಚ್ ಆಗಿ ಭಾರತೀಯ ಕ್ರಿಕೆಟ್‌ಗೆ ‘ವಿಷ್ಯದ ತಾರೆಗಳನ್ನು ತಯಾರು ಮಾಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಎಲ್ಲವೂ ತನ್ನಿಂದಲೇ, ಎಲ್ಲದಕ್ಕೂ ನಾನೇ ಕಾರಣ ಎಂಬ ಮನಸ್ಥಿತಿಯ ವ್ಯಕ್ತಿಗಳ ನಡುವೆ ದ್ರಾವಿಡ್ ಬೇರೆಯದ್ದೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ದುಡ್ಡಿನ ವಿಚಾರದಲ್ಲಿ ‘ತನಗೂ ಇರಲಿ, ತನ್ನ ಕುಟುಂಬ ಸದಸ್ಯರಿಗೂ ಇರಲಿ’ ಎಂಬ ಜನರೇ ಹೆಚ್ಚಾಗಿರುವ ಈ ಕಾಲದಲ್ಲಿ ದ್ರಾವಿಡ್ ನಿಜಕ್ಕೂ ಜಂಟಲ್‌ಮ್ಯಾನ್. ಭಾರತದ ಕಿರಿಯರ ತಂಡ ವಿಶ್ವಕಪ್ ಗೆಲ್ಲುವಲ್ಲಿ ದ್ರಾವಿಡ್ ಅವರದ್ದು ಸಿಂಹಪಾಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ದ್ರಾವಿಡ್ ಎಲ್ಲವೂ ತನ್ನಿಂದಲೇ ಎಂದು ಬೀಗಲಿಲ್ಲ. ವಿಶ್ವಕಪ್ ಗೆದ್ದ ಬಳಿಕ ನ್ಯೂಜಿಲೆಂಡ್‌ನ ವೀಕ್ಷಕ ವಿವರಣೆಗಾರ ಸೈಮನ್ ಡುಲ್ ಅವರ ಮಾಡಿದ ಸಂದರ್ಶನದ ವೇಳೆ ದ್ರಾವಿಡ್ ಆಡಿದ ಮಾತು ಅವರು ಎಂತಹ ಸಜ್ಜನ ಎಂಬುದಕ್ಕೆ ಮತ್ತೊಂದು ಉದಾಹರಣೆಯಷ್ಟೇ.

‘‘ವಿಶ್ವಕಪ್ ಗೆದ್ದ ಈ ಸಂದರ್ಭದಲ್ಲಿ ಎಲ್ಲರ ಗಮನ ನನ್ನ ಮೇಲೆ ಕೇಂದ್ರೀಕೃತವಾಗುತ್ತಿರುವುದು, ಎಲ್ಲರೂ ನನ್ನ ಬಗ್ಗೆ ಮಾತನಾಡುತ್ತಿರುವುದು ನನಗೆ ಮುಜುಗರವನ್ನುಂಟು ಮಾಡುತ್ತಿದೆ. ಗುಣ ಮಟ್ಟದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯ ಶ್ರಮದಿಂದ ಇದು ಸಾಧ್ಯವಾಯಿತು.’’

2015ರಲ್ಲಿ ರಾಹುಲ್ ದ್ರಾವಿಡ್ ಭಾರತ ‘ಎ’ ಹಾಗೂ ಭಾರತದ 19 ವರ್ಷದೊಳಗಿನವರ ತಂಡಗಳ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಳ್ಳುವ ಮುನ್ನ ಭಾರತದ ಹಿರಿಯರ ತಂಡದ ಪ್ರಧಾನ ಕೋಚ್ ಹುದ್ದೆ ಅವರಿಗೆ ಒಲಿದು ಬಂದಿತ್ತು. ಕೋಚ್ ಹುದ್ದೆ ವಹಿಸಿಕೊಳ್ಳುವಂತೆ ದ್ರಾವಿಡ್ ಅವರಿಗೆ ಅಂದಿನ ಬಿಸಿಸಿಐ ಅ‘್ಯಕ್ಷ ಅನುರಾಗ್ ಠಾಕೂರ್ ಖುದ್ದು ಮನವಿ ಮಾಡಿದ್ದರು. ಆದರೆ ಆ ಮನವಿಯನ್ನು ನಯವಾಗಿಯೇ ತಿರಸ್ಕರಿಸಿದ್ದ ದ್ರಾವಿಡ್ ಕಿರಿಯರ ತಂಡಕ್ಕೆ ಮಾರ್ಗದರ್ಶನ ನೀಡುವ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದರು. ತಮ್ಮ ಅವಶ್ಯಕತೆ ಎಲ್ಲಿಗೆ ಬೇಕು ಎಂಬುದನ್ನು ದ್ರಾವಿಡ್ ಸ್ಪಷ್ಟವಾಗಿ ಗುರುತಿಸಿದ್ದರು.

ರಾಹುಲ್ ದ್ರಾವಿಡ್ ಅವರ ಸಮಕಾಲೀನರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. ಈ ಸಮಿತಿಗೂ ದ್ರಾವಿಡ್ ಅವರ ಹೆಸರು ಕೇಳಿ ಬಂದಿತ್ತಾದರೂ, ಅದನ್ನೂ ಒಲ್ಲೆ ಎಂದಿದ್ದರು. ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ಮಾಡುವ ಕೆಲಸ ದ್ರಾವಿಡ್ ಅವರಿಗೆ ಬೇಕಾಗಿರಲಿಲ್ಲ. ಸ್ಥಾನ-ಮಾನ, ಹುದ್ದೆಯನ್ನೂ ಅವರು ಬಯಸಿರಲಿಲ್ಲ. ಭಾರತೀಯ ಕ್ರಿಕೆಟ್‌ಗೆ ಭವಿಷ್ಯದ ಕ್ರಿಕೆಟಿಗರನ್ನು ಸಜ್ಜುಗೊಳಿಸುವ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡ ದ್ರಾವಿಡ್ ಈ ಜವಾಬ್ದಾರಿ ವಹಿಸಿಕೊಂಡ ಮೂರೇ ವರ್ಷಗಳಲ್ಲಿ ವಿಶ್ವಕಪ್ ಗೆದ್ದುಕೊಟ್ಟಿದ್ದಾರೆ. 2016ರಲ್ಲಿ ದ್ರಾವಿಡ್ ಗರಡಿಯಲ್ಲಿ ಪಳಗಿದ್ದ ತಂಡ ಕೂದಲೆಳೆಯ ಅಂತರದಲ್ಲಿ ವಿಶ್ವಕಪ್ ಗೆಲ್ಲಲು ವಿಲವಾಗಿ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು.

ಜಗತ್ತಿನ ಯುವ ಕ್ರಿಕೆಟಿಗರ ಪಾಲಿಗೆ ರಾಹುಲ್ ದ್ರಾವಿಡ್ ಆದರ್ಶ. ಅವರ ಆದರ್ಶಗಳನ್ನು ಶೇಕಡಾ 10ರಷ್ಟು ಪಾಲಿಸಿದರೂ, ಉತ್ತಮ ಕ್ರಿಕೆಟಿಗನಷ್ಟೇ ಅಲ್ಲದೆ, ಉತ್ತಮ ವ್ಯಕ್ತಿಯಾಗಬಹುದು. ಅಂತಹ ಸಭ್ಯ, ಸಜ್ಜನ, ಶಿಸ್ತಿನ ವ್ಯಕ್ತಿ ರಾಹುಲ್ ದ್ರಾವಿಡ್ ಇದೀಗ ಬಿಸಿಸಿಐ ವಿರುದ್ಧ ಬೇಸರಿಸಿಕೊಂಡಿದ್ದಾರೆ. ಅವರ ಬೇಸರಕ್ಕೆ ಅರ್ಥ ಇದೆ. ಅದನ್ನು ಬಿಸಿಸಿಐ ಆದಷ್ಟು ಬೇಗ ಅರ್ಥ ಮಾಡಿಕೊಂಡರೆ, ದಿಗ್ಗಜನಿಗೆ ನಿಜಕ್ಕೂ ಗೌರವ ಸಲ್ಲಿಸಿದಂತಾಗುತ್ತದೆ.

Related Articles