Friday, March 29, 2024

ಮ್ಯಾಚ್ ಫಿಕ್ಸಿಂಗ್: ಮೊಹಮ್ಮದ್ ಶಮಿ ನೆರವಿಗೆ ಬಂದ ಪಾಕಿಸ್ತಾನದ ಮಹಿಳೆ…

ದುಬೈ: ತಮ್ಮ ವಿರುದ್ಧ ಪತ್ನಿ ಮಾಡಿರುವ ಮ್ಯಾಚ್ ಫಿಕ್ಸಿಂಗ್ ಆರೋಪದ ವಿಚಾರದಲ್ಲಿ ಟೀಮ್ ಇಂಡಿಯಾ ಪೇಸರ್ ಮೊಹಮ್ಮದ್ ಶಮಿಗೆ ದೊಡ್ಡ ರಿಲೀಫ್ ಸಿಕ್ಕಿದೆ.
PC: Twitter
ದುಬೈನಲ್ಲಿ ಪಾಕಿಸ್ತಾನ ಮೂಲದ ಮಹಿಳೆ ಅಲೀಶ್ಬಾ ಎಂಬವರಿಂದ ಶಮಿ ದುಡ್ಡು ಪಡೆದಿದ್ದರು ಎಂದು ಶಮಿ ಪತ್ನಿ ಹಸೀನ್ ಜಹಾನ್ ಆರೋಪಿಸಿದ್ದರು. ಇಂಗ್ಲೆಂಡ್ ಮೂಲದ ಮೊಹಮ್ಮದ್ ಭಾಯ್ ಎಂಬಾತನ ಸೂಚನೆಯಂತೆ ಈ ಹಣವನ್ನು ಶಮಿಗೆ ಅಲೀಶ್ಬಾ ನೀಡಿದ್ದಳು ಎಂದು ಹಸೀನ್ ಗಂಭೀರ ಆರೋಪ ಮಾಡಿದ್ದರು.
PC: Facebook/Hasin Jahan
ಇದೀಗ ಸ್ವತಃ ಅಲೀಶ್ಬಾ ಅವರೇ ಶಮಿ ನೆರವಿಗೆ ಧಾವಿಸಿದ್ದು, ನಾನು ಶಮಿ ಅವರಿಗೆ ಯಾವುದೇ ದುಡ್ಡು ನೀಡಿಲ್ಲ ಎಂದಿದ್ದಾರೆ. ಶಮಿ ಅವರನ್ನು ನಾನು ದುಬೈನಲ್ಲಿ ಭೇಟಿ ಮಾಡಿದ್ದು ನಿಜ. ಅವರು ನನ್ನ ಫ್ರೆಂಡ್. ಒಬ್ಬ ಕ್ರಿಕೆಟಿಗನ ಅಭಿಮಾನಿಯಾಗಿ ನಾನು ಶಮಿ ಅವರನ್ನು ಭೇಟಿ ಮಾಡಿದ್ದೇನೆ ಹೊರತು, ಇದರಲ್ಲಿ ಬೇರೇನೂ ಇಲ್ಲ ಎಂದಿದ್ದಾರೆ ಅಲೀಶ್ಬಾ.
ಕಳೆದ ವರ್ಷ ಇಂಗ್ಲೆಂಡ್‌ನ ಲಂಡನ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ಸೋತ ನಂತರ ಶಮಿ ಅವರನ್ನು ಮೊದಲ ಬಾರಿ ಭೇಟಿ ಮಾಡಿದ್ದೆ ಎಂದು ಅಲೀಶ್ಬಾ ಹೇಳಿದ್ದಾರೆ.


ಹೌದು. ಶಮಿ ಅವರನ್ನು ದುಬೈನಲ್ಲಿ ಭೇಟಿ ಮಾಡಿದ್ದು ನಿಜ. ನಾನು ದುಬೈಗೆ ಆಗಾಗ ಹೋಗುತ್ತಿರುತ್ತೇನೆ. ಏಕೆಂದರೆ ಅಲ್ಲಿ ನನ್ನ ಸಹೋದರಿ ಇದ್ದಾಳೆ. ಶಮಿ ಅವರನ್ನು ಒಬ್ಬ ವ್ಯಕ್ತಿಯಾಗಿ ತುಂಬಾ ಇಷ್ಟಪಡುತ್ತೇನೆ ಮತ್ತು ಗೌರವಿಸುತ್ತೇನೆ. ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಆಟಗಾರರನ್ನು ಭೇಟಿ ಮಾಡುವ ಕನಸಿರುತ್ತದೆ. ಅದೇ ರೀತಿ ನನಗೂ ಶಮಿ ಅವರನ್ನು ಭೇಟಿ ಮಾಡುವ ಆಸೆಯಿತ್ತು. ಇದೇನು ದೊಡ್ಡ ವಿಚಾರವಲ್ಲ.

– ಅಲೀಶ್ಬಾ, ಪಾಕಿಸ್ತಾನ ಮೂಲದ ಮಹಿಳೆ.


ಶಮಿ ಮತ್ತು ನನ್ನ ಮಧ್ಯೆ ಗೆಳೆತನ ಬೆಳೆಯಿತು. ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮುಗಿಸಿ ಅವರು ದುಬೈ ಮಾರ್ಗವಾಗಿ ಪ್ರಯಾಣಿಸುತ್ತಿದ್ದಾರೆ ಎಂದು ತಿಳಿಯಿತು. ಆ ಸಂದರ್ಭದಲ್ಲಿ ನಾನೂ ಕೂಡ ದುಬೈಗೆ ಪ್ರಯಾಣಿಸುತ್ತಿದ್ದೆ. ಆ ದಿನ ನೇರವಾಗಿ ಸಹೋದರಿಯ ಮನೆಗೆ ತೆರಳಿದೆ. ಮರು ದಿನ ಬೆಳಗ್ಗೆ ಶಮಿ ತಂಗಿದ್ದ ಹೋಟೆಲ್‌ಗೆ ಹೋಗಿ ಅವರನ್ನು ಭೇಟಿ ಮಾಡಿದೆ. ನಂತರ ಇಬ್ಬರೂ ಜೊತೆಯಾಗಿ ಬ್ರೇಕ್ ಫಾಸ್ಟ್ ಮಾಡಿದೆವು.

– ಅಲೀಶ್ಬಾ, ಪಾಕಿಸ್ತಾನ ಮೂಲದ ಮಹಿಳೆ.

ಮೊಹಮ್ಮದ್ ಭಾಯ್ ಯಾರೆಂಬುದೇ ನನಗೆ ಗೊತ್ತಿಲ್ಲ ಎಂದಿರುವ ಅಲೀಶ್ಬಾ, ಶಮಿ ಮತ್ತು ನನ್ನ ಮಧ್ಯೆ ಯಾವುದೇ ಹಣಕಾಸಿನ ವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

Related Articles