Friday, November 22, 2024

ರಬಾಡ ದಾಳಿಗೆ ಆಸ್ಟ್ರೇಲಿಯಾ ಧೂಳೀಪಟ, 2ನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಜಯಭೇರಿ

ಪೋರ್ಟ್ ಎಲಿಜಬೆತ್: ಯುವ ವೇಗದ ಬೌಲರ್ ವೇಗಿ ಕಗಿಸೊ ರಬಾಡ ಅವರ ಮಾರಕ ದಾಳಿಗೆ ಧೂಳೀಪಟಗೊಂಡ ಪ್ರವಾಸಿ ಆಸ್ಟ್ರೇಲಿಯಾ ತಂಡ, ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್‌ಗಳ ಸೋಲು ಕಂಡಿದೆ.
ಪೋರ್ಟ್ ಎಲಿಜಬೆತ್‌ನ ಸೇಂಟ್ ಜಾರ್ಜ್ ಪಾರ್ಕ್ ಮೈದಾನದಲ್ಲಿ ಸೋಮವಾರ ಅಂತ್ಯಗೊಂಡ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡ ದಕ್ಷಿಣ ಆಫ್ರಿಕಾ ತಂಡ, 4 ಪಂದ್ಯಗಳ ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿದೆ. ಡರ್ಬಾನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತ್ತು.
PC: Twitter/ICC
5 ವಿಕೆಟ್‌ಗೆ 180 ರನ್‌ಗಳಿಂದ 4ನೇ ದಿನದಾಟ ಆರಂಭಿಸಿದ ಪ್ರವಾಸಿ ಆಸೀಸ್, ರಬಾಡ ಅವರ ಬೆಂಕಿ ಚೆಂಡುಗಳಿಗೆ ತತ್ತರಿಸಿ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 239 ರನ್‌ಗಳಿಗೆ ಆಲೌಟಾಯಿತು. ಪ್ರಥಮ ಇನ್ನಿಂಗ್ಸ್‌ನಲ್ಲಿ 96ರನ್ನಿತ್ತು 5 ವಿಕೆಟ್ ಉಡಾಯಿಸಿದ್ದ ರಬಾಡ, 2ನೇ ಇನ್ನಿಂಗ್ಸ್‌ನಲ್ಲೂ ತಮ್ಮ ಖದರ್ ತೋರಿ 54 ರನ್ನಿತ್ತು 6 ವಿಕೆಟ್ ಪಡೆಯುವ ಮೂಲಕ ಕಾಂಗರೂಗಳ ಸೊಕ್ಕಡಗಿಸಿದರು. ಅಲ್ಲದೆ ಪಂದ್ಯದಲ್ಲಿ ಒಟ್ಟು 11 ವಿಕೆಟ್‌ಗಳ ಸಾಧನೆಗಾಗಿ ಪಂದ್ಯಶ್ರೇಷ್ಠರಾಗಿ ಮೂಡಿ ಬಂದರು.
ಗೆಲುವಿಗೆ 101 ರನ್‌ಗಳ ಸುಲಭ ಗುರಿ ಪಡೆದ ದಕ್ಷಿಣ ಆಫ್ರಿಕಾ, 4 ವಿಕೆಟ್‌ಗೆ 102 ರನ್ ಗಳಿಸಿ ಜಯ ದಾಖಲಿಸಿ ಮೊದಲ ಟೆಸ್ಟ್‌ನ ಸೋಲಿಗೆ ಸೇಡು ತೀರಿಸಿಕೊಂಡಿತು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ: ಪ್ರಥಮ ಇನ್ನಿಂಗ್ಸ್: 243 ಮತ್ತು ದ್ವಿತೀಯ ಇನ್ನಿಂಗ್ಸ್ 79 ಓವರ್‌ಗಳಲ್ಲಿ 239 ರನ್
ಮಿಚೆಲ್ ಮಾರ್ಷ್ 45, ಉಸ್ಮಾನ್ ಖವಾಜ 75; ಕಗಿಸೊ ರಬಾಡ 6/54, ಲುಂಗಿ ಎನ್‌ಗಿಡಿ 2/24, ಕೇಶವ್ ಮಹಾರಾಜ್ 2/90.
ದಕ್ಷಿಣ ಆಫ್ರಿಕಾ: ಪ್ರಥಮ ಇನ್ನಿಂಗ್ಸ್ 382 ಮತ್ತು ದ್ವಿತೀಯ ಇನ್ನಿಂಗ್ಸ್ 22.5 ಓವರ್‌ಗಳಲ್ಲಿ 102/4
ಏಡನ್ ಮರ್ಕ್ರಾಮ್ 21, ಹಶೀಮ್ ಆಮ್ಲಾ 27, ಎಬಿ ಡಿ’ವಿಲಿಯರ್ಸ್ 28; ನೇಥನ್ ಲಯಾನ್ 2/44, ಜೋಶ್ ಹೇಜಲ್‌ವುಡ್ 1/26, ಪ್ಯಾಟ್ ಕಮಿನ್ಸ್ 1/13.

Related Articles