ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟಕ್ಕೇರಿ ಇತಿಹಾಸ ನಿರ್ಮಿಸಿದ್ದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಈ ಬಾರಿ ವಿಶ್ವ ವಿಖ್ಯಾತ ಸ್ಪಿನ್ ಮಾಂತ್ರಿಕ ಬಲ ಸಿಕ್ಕಿದೆ.
ಹೌದು. 2008ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ತಮ್ಮ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್, ಇದೀಗ ತಂಡದ ಮೆಂಟರ್(ಮಾರ್ಗದರ್ಶಕ) ಆಗಿ ನೇಮಕಗೊಂಡಿದ್ದಾರೆ.
10 ವರ್ಷಗಳ ಹಿಂದೆ ತಂಡವನ್ನು ಚೊಚ್ಚಲ ಐಪಿಎಲ್ ಕಿರೀಟದತ್ತ ಮುನ್ನಡೆಸಿದ್ದ ಶೇನ್ ವಾರ್ನ್ ಅವರಿಗೆ ಈ ಬಾರಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಮೆಂಟರ್ ಜವಾಬ್ದಾರಿ ನೀಡಿದೆ.
2008ರಿಂದ 2015ರವರೆಗೆ ಐಪಿಎಲ್‌ನಲ್ಲಿ ಆಡಿದ್ದ ರಾಜಸ್ಥಾನ್ ರಾಯಲ್ಸ್ ತಂಡ 2016 ಮತ್ತು 2017ರಲ್ಲಿ ಆಡಿರಲಿಲ್ಲ. ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜಸ್ಥಾನ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಮೇಲೆ 2 ವರ್ಷದ ಅಮಾನತು ಶಿಕ್ಷೆ ವಿಧಿಸಲಾಗಿತ್ತು. ಶಿಕ್ಷೆ ಮುಗಿಸಿರುವ ರಾಜಸ್ಥಾನ್ ರಾಯಲ್ಸ್ ಐಪಿಎಲ್‌ಗೆ ಮರಳಿದೆ.
ಈಗಾಗಲೇ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ಸಾರಥ್ಯದಲ್ಲಿ ಐಪಿಎಲ್‌ಗೆ ಸಜ್ಜಾಗಿರುವ ರಾಜಸ್ಥಾನ್ ತಂಡಕ್ಕೆ ಶೇನ್ ವಾರ್ನ್ ಅವರ ಆಗಮನ ಆನೆಬಲ ತಂದುಕೊಟ್ಟಿದೆ.