Thursday, March 28, 2024

ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡ ಆಸೀಸ್ ವನಿತೆಯರು, ಭಾರತಕ್ಕೆ ಮುಳುವಾದ ಮಿಥಾಲಿ ಅಲಭ್ಯತೆ

ವಡೋದರ: ನಾಯಕಿ ಮಿಥಾಲಿ ರಾಜ್ ಅವರ ಅನುಪಸ್ಥಿತಿಯಲ್ಲಿ ಆಡಿದ ಭಾರತದ ಮಹಿಳಾ ತಂಡ, ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದೆ.
ಈ ಮೂಲಕ 2017ರ ಐಸಿಸಿ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ವಿರುದ್ಧ ಅನುಭವಿಸಿದ್ದ ಸೋಲಿಗೆ ಆಸ್ಟ್ರೇಲಿಯಾ ತಂಡ ಸೇಡು ತೀರಿಸಿಕೊಂಡು 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
PC: Twitter/Women’s CricZone
ರಿಲಾಯನ್ಸ್ ಕ್ರಿಕೆಟ್ ರಿಲಯನ್ಸ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ 50 ಓವರ್‌ಗಳಲ್ಲಿ 200 ರನ್‌ಗಳಿಗೆ ಆಲೌಟಾಯಿತು.
ಭಾರತ ಪರ ಇನ್ನಿಂಗ್ಸ್‌ನ ಆರಂಭದಲ್ಲಿ ಬಲಗೈ ಆರಂಭಿಕ ಆಟಗಾರ್ತಿ ಪೂನಂ ರಾವತ್ 37 ರನ್ ಗಳಿಸಿದರು. ಆದರೆ ಆಸ್ಟ್ರೇಲಿಯಾ ಬೌಲರ್‌ಗಳ ಕರಾರುವಾಕ್ ದಾಳಿಗೆ ಕುಸಿದ ಭಾರತ 113 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಈ ಸಂದರ್ಭದಲ್ಲಿ ತಂಡವನ್ನು ಆಧರಿಸಿದ ವಿಕೆಟ್ ಕೀಪರ್ ಸುಷ್ಮಾ ವರ್ಮಾ ಮತ್ತು ಪೂಜಾ ವಸ್ತ್ರಾಕರ್ 8ನೇ ವಿಕೆಟ್ ಅತ್ಯಮೂಲ್ಯ 86 ರನ್ ಸೇರಿಸಿ ತಂಡದ ಗೌರವ ಕಾಪಾಡಿದರು. ಸುಷ್ಮಾ ವರ್ಮಾ 41 ರನ್ ಗಳಿಸಿದರೆ, 2ನೇ ಏಕದಿನ ಪಂದ್ಯದಲ್ಲಿಯೇ ಮಿಂಚಿದ ಬಾಲಂಗೋಚಿ ಆಟಗಾರ್ತಿ ವಸ್ತ್ರಾಕರ್ ಚೊಚ್ಚಲ ಅರ್ಧಶತಕ ಬಾರಿಸಿದರು.
ಬಳಿಕ 201 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ, 32.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿ ಸುಲಭ ಜಯ ತನ್ನದಾಗಿಸಿಕೊಂಡಿತು. ಓಪನರ್  ನಿಕೋಲ್ ಬೋಲ್ಟನ್ ಅಜೇಯ ಶತಕ ಬಾರಿಸಿ ತಂಡದ ಗೆಲುವಿನ ರೂವಾರಿಯಾದರು. ಅಲಿಸಾ ಹೀಲಿ 38, ನಾಯಕಿ ಮೆಗ್ ಲ್ಯಾನಿಂಗ್ 33 ಮತ್ತು ಆಲ್ರೌಂಡರ್ ಎಲೀಸ್ ಪೆರಿ ಅಜೇಯ 25 ರನ್‌ಗಳ ಕಾಣಿಕೆಯಿತ್ತರು.
ಅನಾರೋಗ್ಯಕ್ಕೊಳಗಾಗಿದ್ದ ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಈ ಪಂದ್ಯದಿಂದ ಹೊರಗುಳಿದದ್ದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಮಿಥಾಲಿ ಅನುಪಸ್ಥಿತಿಯಲ್ಲಿ ಆಲ್ರೌಂಡರ್ ಹರ್ಮನ್‌ಪ್ರೀತ್ ಕೌರ್ ತಂಡವನ್ನು ಮುನ್ನಡೆಸಿದರು. ಸರಣಿಯ 2ನೇ ಏಕದಿನ ಪಂದ್ಯ ಗುರುವಾರ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್
ಭಾರತ: 50 ಓವರ್‌ಗಳಲ್ಲಿ 200 ರನ್‌ಗಳಿಗೆ ಆಲೌಟ್
ಪೂನಂ ರಾವತ್ 37, ಸುಷ್ಮಾ ವರ್ಮಾ 41, ಪೂಜಾ ವಸ್ತ್ರಾಕರ್ 51; ಜೆಸ್ ಜೊನಾಸೆನ್ 4/30, ಅಮಂಡಾ ವೆಲ್ಲಿಂಗ್ಟನ್ 3/24.
ಆಸ್ಟ್ರೇಲಿಯಾ: 32.1 ಓವರ್‌ಗಳಲ್ಲಿ 2 ವಿಕೆಟ್‌ಗೆ 202 ರನ್ 
ನಿಕೋಲ್ ಬೋಲ್ಟನ್ ಅಜೇಯ 100, ಅಲಿಸಾ ಹೀಲಿ 38, ಮೆಗ್ ಲ್ಯಾನಿಂಗ್ 33, ಎಲೀಸ್ ಪೆರಿ ಅಜೇಯ 25; ಶಿಖಾ ಪಾಂಡೆ 1/38.

Related Articles