ಪೋರ್ಟ್ ಎಲಿಜಬೆತ್: ಟೀಮ್ ಇಂಡಿಯಾದಲ್ಲೀಗ ಯುವ ರಿಸ್ಟ್ ಸ್ಪಿನ್ನರ್‌ಗಳಾದ ಉತ್ತರ ಪ್ರದೇಶದ ಕುಲ್‌ದೀಪ್ ಯಾದವ್ ಮತ್ತು ಹರ್ಯಾಣದ ಯುಜ್ವೇಂದ್ರ ಚೇಹಲ್ ಅವರದ್ದೇ ದರ್ಬಾರ್.
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಹರಿಣಗಳ ವಿರುದ್ಧದ 6 ಪಂದ್ಯಗಳ ಏಕದಿನ ಸರಣಿಯ ಮೊದಲ ಐದು ಪಂದ್ಯಗಳಲ್ಲಿ ಕುಲ್‌ದೀಪ್ ಯಾದವ್ ಮತ್ತು ಯುಜ್ವೇಂದ್ರ ಚೇಹಲ್ ಒಟ್ಟು 30 ವಿಕೆಟ್ ಪಡೆದು ಮಿಂಚಿದ್ದಾರೆ. ಇದರಲ್ಲಿ ಚೈನಾಮನ್ ಸ್ಪಿನ್ನರ್ ಕುಲ್‌ದೀಪ್ 16 ವಿಕೆಟ್‌ಗಳನ್ನು ಪಡೆದರೆ, ಲೆಗ್‌ಸ್ಪಿನ್ನರ್ ಚೇಹಲ್ 14 ವಿಕೆಟ್ ಕಬಳಿಸಿದ್ದಾರೆ.
ಈ ಅಮೋಘ ಸಾಧನೆಯೊಂದಿಗೆ ಕುಲ್‌ದೀಪ್ ಮತ್ತು ಚೇಹಲ್, ದಕ್ಷಿಣ ಆಫ್ರಿಕಾ ನೆಲದಲ್ಲಿ ಆಡಿದ ಏಕದಿನ ಸರಣಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿದೇಶಿ ಸ್ಪಿನ್ನರ್‌ಗಳೆಂಬ ದಾಖಲೆ ಬರೆದಿದ್ದಾರೆ. ಈ ಸ್ಪಿನ್ ಮೋಡಿಯ ವೇಳೆ ಇಬ್ಬರೂ, ವೆಸ್ಟ್ ಇಂಡೀಸ್‌ನ ಮಾಜಿ ಆಲ್ರೌಂಡರ್ ಕೀತ್ ಅಥರ್ಟನ್ ಅವರ ದಾಖಲೆಯನ್ನು ಮುರಿದಿದ್ದಾರೆ. 1998-99ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ 7 ಪಂದ್ಯಗಳ ಸರಣಿಯಲ್ಲಿ ಅಥರ್ಟನ್ 12 ವಿಕೆಟ್ ಉರುಳಿಸಿದ್ದರು.1996-97ರ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 8 ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದ ಆಸ್ಟ್ರೇಲಿಯಾದ ಸ್ಪಿನ್ ದಂತಕಥೆ ಶೇನ್ ವಾರ್ನ್ 4ನೇ ಸ್ಥಾನದಲ್ಲಿದ್ದಾರೆ.