Thursday, November 21, 2024

ರಾಷ್ಟ್ರೀಯ ಸ್ಪೋರ್ಟ್‌ ಕ್ಲೈಮಿಂಗ್‌ಗೆ 200 ಸ್ಪರ್ಧಿಗಳು

ಬೆಂಗಳೂರು:

ಆಗಸ್ಟ್‌ 12 ರಿಂದ 14 ರವರೆಗೆ ಉತ್ತರ ಕಾಶಿಯಲ್ಲಿ ನಡೆಯಲಿರುವ 26ನೇ ರಾಷ್ಟ್ರೀಯ ಸ್ಪೋರ್ಟ್‌ ಕ್ಲೈಮಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ದೇಶದ ವಿವಿಧ ರಾಜ್ಯಗಳಿಂದ 200ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಐಎಂಎಫ್‌ನ ಪತ್ರಿಕಾ ಪ್ರಕಟಣೆ ತಿಳಿಸಿದೆ.

ನೆಹರು ಇನ್‌ಸ್ಟಿಟೂಟ್‌ ಆಫ್‌ ಮೌಂಟನೇರಿಂಗ್‌ನ ಆತಿಥ್ಯದಲ್ಲಿ ನಡೆಯಲಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುತ್ತಿರುವ ಸ್ಪರ್ಧಿಗಳನ್ನು ದೇಶದ ವಿವಿಧ ಭಾಗಗಳಲ್ಲಿರುವ ಐಎಂಎಫ್‌ನ ಏಳು ವಲಯ ಕೇಂದ್ರಗಳಲ್ಲಿ ನಡೆದ ಸ್ಪರ್ಧೆಗಳ ಮೂಲಕ ಆಯ್ಕೆ ಮಾಡಲಾಗಿರುತ್ತದೆ.

ಬೌಲ್ಡರಿಂಗ್‌, ಲೀಡ್‌ ಮತ್ತು ಸ್ಫೀಡ್‌ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಇದು ಅಂತಾರಾಷ್ಟ್ರೀಯ ಗುಣಮಟ್ಟದ ಮತ್ತು ಎಲ್ಲಾ ಹವಾಮಾನಕ್ಕೂ ಅನುಕೂಲವಾಗಿರುವ ಒಳಾಂಗಣ ಚಾಂಪಿಯನ್‌ಷಿಪ್‌ಗೆ ಸಜ್ಜಾಗಿದೆ. ಸಬ್‌ ಜೂನಿಯರ್‌, ಜೂನಿಯರ್‌ ಹಾಗೂ ಸೀನಿಯರ್‌ ವಿಭಾಗಗಳಲ್ಲಿ ಪುರುಷರು ಮತ್ತು ಮಹಿಳೆಯರಿಗಾಗಿ ಸ್ಪರ್ಧೆ ನಡೆಯಲಿದೆ. 2004ರಲ್ಲಿ ಏಷ್ಯಾಕಪ್‌ ಚಾಂಪಿಯನ್‌ಷಿಪ್‌ ನಡೆಯುವ ಮೂಲಕ ಭಾರತದಲ್ಲಿ ಮೊದಲ ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಡೆಯಿತು, ಅಂದಿನಿಂದ ಉತ್ತರಕಾಶಿಯ ಎನ್‌ಐಎಂನಲ್ಲಿ ನಡೆಯುವ ಪ್ರತಿಯೊಂದು ಸ್ಪರ್ಧೆಗೂ ಸ್ಥಳಿಯರು ಅಪಾರ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ ಎಂದು ಅಲ್ಲಿಯ ಪ್ರಾಂಶುಪಾಲರಾದ ಕರ್ನಲ್‌ ಅಮಿತ್‌ ಬಿಸ್ಟ್‌ (Col.Amit Bisht) ತಿಳಿಸಿದ್ದಾರೆ. ಆಗಸ್ಟ್‌ 12 ರ ಅಪರಾಹ್ನ 3 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಉದ್ಘಾಟಿಸುವ ನಿರೀಕ್ಷೆ ಇದೆ.

ಸಾಂಕ್ರಮಿಕ ಪಿಡುಗಿನ ಕಾರಣ ಕಳೆದ ಎರಡು ವರ್ಷಗಳಿಂದ ಯಾವುದೇ ಕ್ರೀಡಾ ಚಟುವಟಿಕೆಗಳು ನಡೆಯದೇ ಇದ್ದ ಕಾರಣ, ಭಾರತದ ಕ್ರೀಡಾಪಟುಗಳು ಮತ್ತು ಅವರ ಹೆತ್ತವರು, ಕ್ರೀಡಾಅಭಿಮಾನಿಗಳು ಈ ಚಾಂಪಿಯನ್‌ಷಿಪ್‌ನ ಆರಂಭಕ್ಕಾಗಿ ಕಾಯುತ್ತಿದ್ದಾರೆ. ಈ ಸ್ಪರ್ಧೆಯು ಉತ್ತಮ ರೀತಿಯಲ್ಲಿ ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಗಿ ಕ್ರೀಡಾಭಿಮಾನಿಗಳಲ್ಲಿ ಸಂಸತವನ್ನುಂಟು ಮಾಡುತ್ತದೆ ಎಂಬುದು ಖಚಿತ ಎಂದು ರಾಷ್ಟ್ರೀಯ ಸ್ಪೋರ್ಟ್‌ ಕ್ಲೈಮಿಂಗ್‌ ಸಮಿತಿಯ ಅಧ್ಯಕ್ಷ ಕರ್ನಾಟಕದ ಕೀರ್ತಿ ಪಾಯ್ಸ್‌ ಹೇಳಿದ್ದಾರೆ.

Related Articles