ಬೆಂಗಳೂರು: ಯುವಕರು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಉತ್ತಮ ಆರೋಗ್ಯ ಮಾತ್ರವಲ್ಲ ಉತ್ತಮ ಉದ್ಯೋಗವೂ ಸಿಗುತ್ತದೆ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕರ್ನಾಟಕದ 82 ಕ್ರೀಡಾ ಸಾಧಕರು ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಪಡೆದು ಈಗ ಒಂದು ವರ್ಷದ ಕಾಲ ಇಲಾಖೆಯ ತರಬೇತಿಯಲ್ಲಿದ್ದಾರೆ. 82 sports champions got job in Karnataka Police Department.
ಸಾಧಕರ ಶೈಕ್ಷಣಿಕ ಆಧಾರದ ಮೇಲೆ ಹುದ್ದೆಗಳನ್ನು ನೀಡಲಾಗಿದೆ. 12ನೇ ತರಗತಿ ವರೆಗೆ ಓದಿದವರಿಗೆ ಕಾನ್‌ಸ್ಟೇಬಲ್ ಹಾಗೂ ಪದವಿ ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸ ಪಡೆದವರನ್ನು ಇನ್‌ಸ್ಪೆಕ್ಟರ್ ಹುದ್ದೆಗೆ ಪರಿಗಣಿಸಲಾಗಿದೆ. ಇದರಿಂದಾಗಿ 12 ಕ್ರೀಡಾ ಸಾಧಕರು ಸಬ್ ಇನ್‌ಸ್ಪೆಕ್ಟರ್ ಹುದ್ದೆಯಲ್ಲೂ, 70 ಕ್ರೀಡಾ ಸಾಧಕರು ಪೊಲೀಸ್ ಕಾನ್‌ಸ್ಟೇಬಲ್‌ಗಳಾಗಿ ತರಬೇತಿ ಪಡೆಯುತ್ತಿದ್ದಾರೆ. ಕರ್ನಾಟಕ ಸರಕಾರ ಕ್ರೀಡಾ ಸಾಧಕರಿಗೆ ಸರಕಾರಿ ಉದ್ಯೋಗದಲ್ಲಿ ಶೇ.3ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಿತ್ತು. ಸುಮಾರು 450ಕ್ಕೂ ಹೆಚ್ಚು ಕ್ರೀಡಾ ಸಾಧಕರು ಅರ್ಜಿ ಸಲ್ಲಿಸಿದ್ದರು.
ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ತಜ್ಞರು ಕ್ರೀಡಾಪಟುಗಳ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಾಧನೆಯನ್ನು ಪರಿಶೀಲಿಸಿ ಆಯ್ಕೆ ಪ್ರಕ್ರಿಯೆ ನಡೆಸಿರುತ್ತಾರೆ. ಇಲಾಖೆಯನ್ನು ಸೇರಿದ ನಂತರವೂ ಈ ಕ್ರೀಡಾಪಟುಗಳು ಪೊಲೀಸ್ ಕ್ರೀಡಾ ಉತ್ತೇಜನ ಪ್ರಾಧಿಕಾರದ ಮೂಲಕ ಕ್ರೀಡಾ ತರಬೇತಿಯನ್ನು ಮುಂದುವರಿಸಿ ರಾಜ್ಯ ಮತ್ತು ಪೊಲೀಸ್ ಇಲಾಖೆಗೆ ಕೀರ್ತಿಯನ್ನು ತರಬಹುದು. ಅಥ್ಲೆಟಿಕ್ಸ್, ಹಾಕಿ, ಬಾಕ್ಸಿಂಗ್, ಫೆನ್ಸಿಂಗ್, ವಾಲಿಬಾಲ್, ಜಿಮ್ನಾಸ್ಟಿಕ್, ಶೂಟಿಂಗ್, ಕಬಡ್ಡಿ, ಹ್ಯಾಂಡ್‌ಬಾಲ್, ಬಾಸ್ಕೆಟ್‌ಬಾಲ್ ಹಾಗೂ ಸೈಕ್ಲಿಂಗ್ ಸೇರಿದಂತೆ ಸುಮಾರು 20 ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿದವರು ಅರ್ಜಿ ಸಲ್ಲಿಸಿದ್ದರಿಂದ ಹೆಚ್ಚಿನ ಕ್ರೀಡಾ ಸಾಧಕರನ್ನು ಅಯ್ಕೆ ಮಾಡಲು ಸಾಧ್ಯವಾಯಿತು.