ಬೆಂಗಳೂರು: ಕೊಲೆ ಯತ್ನ, ಕಿರುಕುಳ, ದೌರ್ಜನ್ಯ, ಸಹೋದರನ ಮೇಲೆ ರೇಪ್ ಕೇಸ್… ಇಷ್ಟೂ ಸಾಲದೆಂಬಂತೆ ಮ್ಯಾಚ್ ಫಿಕ್ಸಿಂಗ್ ಆರೋಪ. ಪತ್ನಿಯಿಂದಲೇ ಇಷ್ಟೆಲ್ಲಾ ಆರೋಪಗಳಿಗೆ ತುತ್ತಾಗಿ ಮಾನಸಿಕವಾಗಿ ನೋವು ಅನುಭವಿಸುತ್ತಿರುವ ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಮೊದಲ ಜಯ ಸಿಕ್ಕಿದೆ.
ವಿವಾದದ ಹಿನ್ನೆಲೆಯಲ್ಲಿ ತಡೆ ಹಿಡಿಯಲಾಗಿದ್ದ ಮೊಹಮ್ಮದ್ ಶಮಿ ಅವರೊಂದಿಗಿನ ವಾರ್ಷಿಕ ಒಪ್ಪಂದವನ್ನು ಬಿಸಿಸಿಐ ಮುಂದುವರಿಸಿದೆ.
ಶಮಿ ವಿರುದ್ಧ ಪತ್ನಿ ಹಸೀನ್ ಜಹಾನ್ ಗಂಭೀರ ಆರೋಪಗಳನ್ನು ಮಾಡುತ್ತಿದ್ದಂತೆ ಶಮಿ ಅವರ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ಹೀಗಾಗಿ ಮಾರ್ಚ್ 7ರಂದು ಆಟಗಾರರ ವಾರ್ಷಿಕ ಒಪ್ಪಂದ ಪಟ್ಟಿಯನ್ನು ಪ್ರಕಟಿಸಿದ್ದ ಬಿಸಿಸಿಐ, ಶಮಿ ಅವರ ಹೆಸರನ್ನು ತಡೆ ಹಿಡಿದಿತ್ತು.
ಶಮಿ ಅವರ ವೈಯಕ್ತಿಕ ಜೀವನದಲ್ಲಿ ಕೇಳಿ ಬಂದಿರುವ ಆರೋಪಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿದ್ದ ಬಿಸಿಸಿಐ, ಮ್ಯಾಚ್ ಫಿಕ್ಸಿಂಗ್ ಆರೋಪದ ಬಗ್ಗೆ ತನಿಖೆಗೆ ಆದೇಶಿಸಿತ್ತು. ಸುಪ್ರೀಂ ಕೋರ್ಟ್‌ನಿಂದ ಬಿಸಿಸಿಐಗೆ ನೇಮಕಗೊಂಡಿರುವ ಆಡಳಿತಾಧಿಕಾರಿಗಳ ಸಮಿತಿ (ಸಿಒಎ)ಯ ಮುಖ್ಯಸ್ಥ ವಿನೋದ್ ರಾಯ್, ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಘಟಕ (ಎಸಿಯು)ದ ಮುಖ್ಯಸ್ಥ ನೀರಜ್ ಚೋಪ್ರಾ ಅವರಿಗೆ ಈ ಕುರಿತು ತನಿಖೆ ನಡೆಸುವಂತೆ ಸೂಚಿಸಿದ್ದರು. ಅಲ್ಲದೆ ಒಂದು ವಾರದ ಒಳಗೆ ತನಿಖಾ ವರದಿ ಸಲ್ಲಿಸುವಂತೆ ತಿಳಿಸಿದ್ದರು.
ಅದರಂತೆ ತನಿಖೆ ನಡೆಸಿರುವ ಎಸಿಯು ಮುಖ್ಯಸ್ಥ ನೀರಜ್ ಚೋಪ್ರಾ, ಈ ಕುರಿತ ಗುಪ್ತ ವರದಿಯನ್ನು ಸಿಒಗೆ ಸಲ್ಲಿಸಿದ್ದಾರೆ. ಇದನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿರುವ ಸಿಒಎ, ಶಮಿ ವಿರುದ್ಧದ ಆರೋಪಗಳಲ್ಲಿ ಹುರುಳಿಲ್ಲ ಎಂಬುದು ಮನದಟ್ಟಾಗಿರುವ ಹಿನ್ನೆಲೆಯಲ್ಲಿ ವಾರ್ಷಿಕ ಒಪ್ಪಂದವನ್ನು ಮುಂದುವರಿಸಲು ನಿರ್ಧರಿಸಿದೆ.
ಇದರೊಂದಿಗೆ ಶಮಿ ದೊಡ್ಡ ನಿಟ್ಟುಸಿರುವ ಬಿಡುವಂತಾಗಿದೆ. ಅಲ್ಲದೆ ವಾರ್ಷಿಕ ಒಪ್ಪಂದ ಪಟ್ಟಿಯಲ್ಲಿ ಶಮಿ ‘ಬಿ’ ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ವಾರ್ಷಿಕ 3 ಕೋಟಿ ರೂ.ಗಳನ್ನು ಪಡೆಯಲಿದ್ದಾರೆ. ‘ಎ+’ ಗ್ರೇಡ್‌ಗೆ 7 ಕೋಟಿ ರೂ., ‘ಎ’ ಗ್ರೇಡ್‌ಗೆ 5 ಕೋಟಿ ರೂ. ‘ಬಿ’ ಗ್ರೇಡ್‌ಗೆ 3 ಕೋಟಿ ರೂ. ಹಾಗೂ ‘ಸಿ’ ಗ್ರೇಡ್‌ಗೆ 1 ಕೋಟಿ ರೂ.ಗಳನ್ನು ಬಿಸಿಸಿಐ ನಿಗದಿ ಪಡಿಸಿದೆ.