KHO KHO World Cup ಟೀಮ್ ಇಂಡಿಯಾ ತಂಡ ಪ್ರಕಟಿಸಿದ ಕೆಕೆಎಫ್‌ಐ
ನವದೆಹಲಿ, ಜನವರಿ 9, 2025: ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಜನವರಿ 13 ರಿಂದ 19 ರವರೆಗೆ ನಡೆಯಲಿರುವ ಮೊದಲ ಆವೃತ್ತಿಯ 2025 ರ ಖೋಖೋ ವಿಶ್ವಕಪ್‌ಗಾಗಿ ಭಾರತ ಖೋ ಖೋ ಫೆಡರೇಶನ್ (ಕೆಕೆಎಫ್‌ಐ) ಮತ್ತು ಅಂತರರಾಷ್ಟ್ರೀಯ ಖೋ ಖೋ ಫೆಡರೇಶನ್ (ಐಕೆಕೆಎಫ್) ಗುರುವಾರ ಟೀಮ್ ಇಂಡಿಯಾದ ಪುರುಷ ಹಾಗೂ ಮಹಿಳಾ ತಂಡವನ್ನು ಪ್ರಕಟಿಸಿದೆ. ಈ ಮೆಗಾ ಈವೆಂಟ್‌ನ ಮೊದಲ ಆವೃತ್ತಿಯಲ್ಲಿ 20 ಪುರುಷರ ತಂಡಗಳು ಮತ್ತು 19 ಮಹಿಳಾ ತಂಡಗಳು ಭಾಗವಹಿಸಲಿದ್ದು, 23 ದೇಶಗಳು ಈ ವಿಶ್ವಕಪ್‌ನಲ್ಲಿ ಭಾಗವಹಿಸಲಿ ಭಾರತಕ್ಕೆ ಆಗಮಿಸಲಿದೆ. KKFI announce robust Team India squad for upcoming Kho Kho World Cup 2025
ಟೀಮ್ ಇಂಡಿಯಾ ಪುರುಷರ ತಂಡವನ್ನು ಪ್ರತೀಕ್ ವೈಕರ್ ಮುನ್ನಡೆಸಲಿದ್ದಾರೆ. 2016 ರಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದ ಏಕಲವ್ಯ ಪ್ರಶಸ್ತಿ ವಿಜೇತ, ತನ್ನ ಮನೆಯ ಅಕ್ಕಪಕ್ಕದಲ್ಲಿ ಇದ್ದ ಹುಡುಗರಿಂದ ಪ್ರೇರಿತರಾಗಿ ಎಂಟನೇ ವಯಸ್ಸಿನಲ್ಲಿ ಖೋಖೋ ಆಡಲು ಪ್ರಾರಂಭಿಸಿದರು. ಕಂಪ್ಯೂಟರ್ ಸೈನ್ಸ್ ಮತ್ತು ಫೈನಾನ್ಸ್‌ನಲ್ಲಿ ಪದವಿಗಳನ್ನು ಪಡೆದಿದ್ದರೂ, ಅವರು ವೃತ್ತಿಪರವಾಗಿ ಖೋಖೋ ಆಟವನ್ನು ಮುಂದುವರಿಸಿ, ಕ್ರೀಡಾ ಕೋಟಾದ ಮೂಲಕ ಉದ್ಯೋಗವನ್ನು ಪಡೆದರು. ಅವರು ಅಲ್ಟಿಮೇಟ್ ಖೋ ಖೋ ಲೀಗ್‌ನಲ್ಲಿ ತೆಲುಗು ಯೋಧಾಸ್ ತಂಡವನ್ನು ರನ್ನರ್-ಅಪ್ ಸ್ಥಾನಕ್ಕೆ ಮುನ್ನಡೆಸಿದ್ದರು ಮತ್ತು 56 ನೇ ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಮಹಾರಾಷ್ಟ್ರ ಚಿನ್ನದ ಪದಕ ಗೆಲ್ಲಲು ಕಾರಣರಾಗಿದ್ದರು.
ಐದು ದಶಕಗಳ ಕಾಲ ಕ್ರೀಡೆಯಲ್ಲಿ ಕಂಡಂಥ ಅನುಭವವನ್ನು ಅಶ್ವನಿ ಕುಮಾರ್ ಶರ್ಮ ಪುರುಷರ ತಂಡಕ್ಕೆ ನೀಡಲಿದ್ದಾರೆ. ಅವರ ಟ್ರ್ಯಾಕ್ ರೆಕಾರ್ಡ್‌ನಲ್ಲಿ 2019ರ ಸೌತ್ ಏಷ್ಸನ್ ಗೇಮ್ಸ್‌ನಲ್ಲಿ ಪುರುಷರ ತಂಡವನ್ನು ಚಿನ್ನದ ಪದಕಕ್ಕೆ ಮುನ್ನಡೆಸಿದ್ದ ದಾಖಲೆಯೂ ಇದೆ. ಅದರೊಂದಿಗೆ ಅವರ ಕೋಚಿಂಗ್‌ನಲ್ಲಿಯೇ ಒಡಿಶಾ ಜಗ್ಗರ್‌ನಾಟ್ಸ್ ಮೊದಲ ಆವೃತ್ತಿಯ ಅಲ್ಟಿಮೇಟ್ ಖೋಖೋ ಲೀಗ್‌ನಲ್ಲಿ ಚಾಂಪಿಯನ್ ಆಗಿತ್ತು. 2014ರಲ್ಲಿಯೇ ಇವರಿಗೆ ದೆಹಲಿಯ ಬೆಸ್ಟ್ ಕೋಚ್ ಎನ್ನುವ ಮನ್ನಣೆ ಕೂಡ ದೊರೆತಿತ್ತು. ಅದ್ಭುತ ಟ್ರ್ಯಾಕ್ ರೆಕಾರ್ಡ್ ಹಾಗೂ ಯಶಸ್ಸಿನ ಸವಿ ಕಂಡಿರುವ ವಿಶ್ವಾಸ ಹೊಂದಿರುವ ಇವರು, ತಂಡದ ಅಮೂಲ್ಯ ಆಸ್ತಿ ಎನಿಸಿದ್ದಾರೆ. ಮಹಿಳಾ ತಂಡಕ್ಕೆ ಪ್ರಿಯಾಂಕಾ ಇಂಗ್ಲೆ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. 15 ವರ್ಷಗಳಲ್ಲಿ 23 ರಾಷ್ಟ್ರೀಯ ಟೂರ್ನಿಗಳಲ್ಲಿ ಸ್ಪರ್ಧಿಸಿರುವ ಅವರು ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಸಾಧನೆಗಳಲ್ಲಿ ಐಎಲ್‌ಎ ಅಲಾರ್ಡ್ (ಅತ್ಯುತ್ತಮ ಸಬ್-ಜೂನಿಯರ್ ಆಟಗಾರ್ತಿ), ರಾಣಿ ಲಕ್ಷ್ಮಿ ಬಾಯಿ ಪ್ರಶಸ್ತಿ (2022 ಸೀನಿಯರ್ ನ್ಯಾಷನಲ್ಸ್), ಮತ್ತು 2022-23 ರ 4 ನೇ ಏಷ್ಯನ್ ಖೋ ಖೋ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಸೇರಿವೆ. ಎಂಕಾಂ ಪದವೀಧರೆಯಾಗಿರುವ ಈ ಆಲ್ರೌಂಡರ್, ಪ್ರತಿದಿನದ ಕಠಿಣ ತರಬೇತಿಯೊಂದಿಗೆ ಮುಂಬೈನ ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ತಂಡಕ್ಕೆ ಸುಮಿತ್ ಭಾಟಿಯಾ ಅವರು ತರಬೇತಿ ನೀಡಲಿದ್ದಾರೆ. ಶ್ರೇಷ್ಠ ಖೋಖೋ ಕೋಚ್ ಆಗಿರುವ ಸುಮಿತ್ ಭಾಟಿಯಾ, ಹಿರಿಯ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಹಲವು ಪದಕಗಳನ್ನು ಒಳಗೊಂಡಂತೆ ರಾಷ್ಟ್ರೀಯ ಸಾಧನೆಗಳನ್ನು ಮಾಡಿದ್ದಾರೆ. 4 ನೇ ಏಷ್ಯನ್ ಖೋ ಖೋ ಚಾಂಪಿಯನ್‌ಶಿಪ್ 2023 ರಲ್ಲಿ ಮಹಿಳಾ ತಂಡದ ಮುಖ್ಯ ತರಬೇತುದಾರರಾಗಿ, ಅವರು 3 ನೇ ಏಷ್ಯನ್ ಚಾಂಪಿಯನ್‌ಶಿಪ್ ಮತ್ತು 12 ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳನ್ನು ಒಳಗೊಂಡಂತೆ ಅಂತರರಾಷ್ಟ್ರೀಯ ಗೆಲುವನ್ನು ದಾಖಲಿಸಿದ್ದಾರೆ.ಅದರೊಂದಿಗೆ ಜಾಗತಿಕ ಈವೆಂಟ್‌ಗಳಲ್ಲಿ ಅಂತರರಾಷ್ಟ್ರೀಯ ರೆಫರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
2024ರ ಡಿಸೆಂಬರ್ 10ರಿಂದ ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಕಠಿಣ ತರಬೇತಿ ಶಿಬಿರದ ನಂತರ ಟೀಮ್ ಇಂಡಿಯಾಗೆ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷ ಸುಧಾಂಶು ಮಿತ್ತಲ್ ಮತ್ತು ಪ್ರಧಾನ ಕಾರ್ಯದರ್ಶಿ ಎಂ.ಎಸ್. ತ್ಯಾಗಿ ನೇತೃತ್ವದ ಕೆಕೆಎಫ್‌ಐ ಆಯ್ಕೆ ಸಮಿತಿಯು ಪುರುಷ ಮತ್ತು ಮಹಿಳಾ ತಂಡಗಳಿಗೆ ಅಂತಿಮ 15 ಜನರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಶಿಬಿರದ ಭಾಗವಾಗಿದ್ದ 60 ಪುರುಷ ಮತ್ತು 60 ಮಹಿಳಾ ಆಟಗಾರರಿಂದ ತರಬೇತಿ ಶಿಬಿರದಲ್ಲಿ ತರಬೇತಿ ಸಿಬ್ಬಂದಿ ಅವರಿಗೆ ಉತ್ತಮ ಸಲಹೆ ನೀಡಿದರು.
ಟೀಮ್ ಇಂಡಿಯಾ ಪುರುಷರ ತಂಡ:
ಪ್ರತೀಕ್ ವೈಕರ್ (ನಾಯಕ), ಪ್ರಬಾನಿ ಸಬರ್, ಮೆಹುಲ್, ಸಚಿನ್ ಭಾರ್ಗೋ, ಸುಯಶ್ ಗಾರ್ಗೇಟ್, ರಾಮ್‌ಜಿ ಕಶ್ಯಪ್, ಶಿವ ಪೋತಿರ್ ರೆಡ್ಡಿ, ಆದಿತ್ಯ ಗನ್‌ಪುಲೆ, ಗೌತಮ್ ಎಂ.ಕೆ., ನಿಖಿಲ್ ಬಿ, ಆಕಾಶ್ ಕುಮಾರ್, ಸುಬ್ರಮಣಿ ವಿ., ಸುಮನ್ ಬರ್ಮನ್, ಅನಿಕೇತ್ ಪೋಟೆ, ಎಸ್. ರೋಕ್ಸನ್ ಸಿಂಗ್
ಮೀಸಲು ಆಟಗಾರರು: ಅಕ್ಷಯ್ ಬಂಗಾರೆ, ರಾಜವರ್ಧನ್ ಶಂಕರ್ ಪಾಟೀಲ್, ವಿಶ್ವನಾಥ್ ಜಾನಕಿರಾಮ್.
ಟೀಮ್ ಇಂಡಿಯಾ ಮಹಿಳಾ ತಂಡ:
ಪ್ರಿಯಾಂಕಾ ಇಂಗ್ಲೆ (ಕ್ಯಾಪ್ಟನ್), ಅಶ್ವಿನಿ ಶಿಂಧೆ, ರೇಷ್ಮಾ ರಾಥೋಡ್, ಭಿಲಾರ್ ದೇವ್ಜಿಭಾಯಿ, ನಿರ್ಮಲಾ ಭಾಟಿ, ನೀತಾ ದೇವಿ, ಚೈತ್ರಾ ಆರ್., ಸುಭಾಶ್ರೀ ಸಿಂಗ್, ಮಗೈ ಮಾಝಿ, ಅಂಶು ಕುಮಾರಿ, ವೈಷ್ಣವಿ ಬಜರಂಗ್, ನಸ್ರೀನ್ ಶೇಖ್, ಮೀನು, ಮೋನಿಕಾ, ನಾಜಿಯಾ ಬಿ.
ಮೀಸಲು ಆಟಗಾರ್ತಿಯರು: ಸಂಪದಾ ಮೋರ್, ರಿತಿಕಾ ಸಿಲೋರಿಯಾ, ಪ್ರಿಯಾಂಕಾ ಭೋಪಿ.