ಗೋಲ್ಡ್ ಕೋಸ್ಟ್: 21ನೇ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಶಟ್ಲರ್‌ಗಳು ಭರ್ಜರಿಯಾಗಿಯೇ ಆಟ ಆರಂಭಿಸಿದ್ದಾರೆ. ಮೊದಲ ದಿನವಾದ ಗುರುವಾರ ನಡೆದ ಮಿಶ್ರ ತಂಡ ವಿಭಾಗದ,‘ಎ’ ಗುಂಪಿನ ಪಂದ್ಯದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆಗಳು ಶ್ರೀಲಂಕಾವನ್ನು 5-0 ಅಂತರದಲ್ಲಿ ಸೋಲಿಸಿ ಶುಭಾರಂಭ ಮಾಡಿದರು.
ಮಿಶ್ರ ಡಬಲ್ಸ್‌ನಲ್ಲಿ ಕಣಕ್ಕಿಳಿದ ಪ್ರಣವ್ ಛೋಪ್ರಾ ಮತ್ತು ರುತ್ವಿಕಾ ಗಾಧೆ ಜೋಡಿ ಸಚಿನ್ ಡಯಾಸ್ ಮತ್ತು ತಿಲಿನಿ ಪ್ರಮೋದಿಕ ಅವರನ್ನು 21-15, 19-21, 22-20ರ ಕಠಿಣ ಹೋರಾಟದಲ್ಲಿ ಮಣಿಸಿ ಭಾರತಕ್ಕೆ 1-0 ಮುನ್ನಡೆ ಒದಗಿಸಿತು.
ನಂತರ ಪುರುಷರ ಸಿಂಗಲ್ಸ್‌ನಲ್ಲಿ ಅಖಾಡಕ್ಕಿಳಿದ ವಿಶ್ವದ ನಂ.2 ಆಟಗಾರ ಹಾಗೂ ಗೇಮ್ಸ್‌ನಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಕಿಡಂಬಿ ಶ್ರೀಕಾಂತ್, ನಿಲುಕ ಕರುಣಾರತ್ನೆ ಅವರನ್ನು 21-16, 21-10ರ ನೇರ ಗೇಮ್‌ಗಳಿಂದ ಮಣಿಸಿ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು.
ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ 21-17, 21-14ರಲ್ಲಿ ಗೆದ್ದರೆ, ಮಹಿಳಾ ಸಿಂಗಲ್ಸ್‌ನಲ್ಲಿ ಕಣಕ್ಕಿಳಿದ ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್ 21-8, 21-4ರಲ್ಲಿ ದಿಲ್ರುಕ್ಷಿ ಅವರನ್ನು ಸುಲಭವಾಗಿ ಸೋಲಿಸಿದರು.
ಮಹಿಳಾ ಡಬಲ್ಸ್‌ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಜೋಡಿ 21-12, 21-14ರಲ್ಲಿ ಗೆಲುವು ದಾಖಲಿಸುವುದರೊಂದಿಗೆ ಭಾರತ ಕ್ಲೀನ್‌ಸ್ವೀಪ್ ಮಾಡಿತು.