ಒಲಂಪಿಯನ್ನರಿಗೇ ಶಾಕ್ ನೀಡಿದ ಶಾರ್ಪ್ ಶೂಟರ್ ಜೊನಾಥನ್
ಬೆಂಗಳೂರು: ಉತ್ತರಾಖಂಡ್ನಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಶೂಟಿಂಗ್ನಲ್ಲಿ ಕರ್ನಾಟಕ ಮೊದಲ ಬಾರಿಗೆ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಐತಿಹಾಸಿಕ ಸಾಧನೆ ಒಬ್ಬ ಪುಟ್ಟ ಬಾಲಕನಿಂದ ಆಗಿದೆ ಎಂಬುದು ಅಚ್ಚರಿ ಹಾಗೂ ಹೆಮ್ಮೆಯ ಸಂಗತಿ. ನಾಳೆಗೆ ಒಲಿಂಪಿಕ್ಸ್ ಶೂಟರ್ಗಳ ಜೊತೆ ಸ್ಪರ್ಧೆ ಇದ್ದರೂ ಹೊಟೇಲ್ ರೂಮಿನಲ್ಲಿ ಕಾರ್ಟೂನ್ ನೋಡುತ್ತ ಕುಳಿತಿದ್ದ ಹುಡುಗ ಬೆಳಿಗ್ಗೆ ಚಿನ್ನ ಗೆದ್ದು ಅಚ್ಚರಿಯನ್ನುಂಟು ಮಾಡಿದ. ಈ ಅಚ್ಚರಿಯ ಬಾಲಕ ಬೇರೆ ಯಾರೂ ಅಲ್ಲ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಶಾರ್ಪ್ ಶೂಟರ್ ಮಾಸ್ಟರ್ ಜೊನಾಥನ್ ಗವಿನ್ ಅಂಥೋನಿ. Master Jonathan Gavin Antony Wins Karnataka’s First-Ever Individual Gold Medal in National Games 2025.
ಜೊನಾಥನ್ ಟೋಕಿಯೋ ಒಲಿಂಪಿನ್, ಜೂನಿಯರ್ ವಿಶ್ವ ಚಾಂಪಿಯನ್, ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಹಾಗೂ ವಿಶ್ವಕಪ್ ಸರಣಿಯಲ್ಲಿ ಹಲವಾರು ಪದಕಗಳನ್ನು ಗೆದ್ದಿರುವ ಸೌರಭ್ಚೌಧರಿ ಅವರನ್ನು ಮಣಿಸಿರುವುದರಲ್ಲದೆ, ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದಿರುವ ಸರಜ್ಬೋತ್ಸಿಂಗ್ ಅವರನ್ನೂ ಮಣಿಸಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾನೆ.
ಏರ್ಪಿಸ್ತೂಲ್ ಶೂಟಿಂಗ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಜೊನಾಥನ್ಗೆ ತರಬೇತಿ ನೀಡಿದ್ದು ಚಿಕ್ಕಬಳ್ಳಾಪುರ ಮೂಲದ, ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ, ಶೂಟಿಂಗ್ನಲ್ಲಿ ಹಲವಾರು ಪದಕಗಳನ್ನು ಗೆದ್ದಿರುವ Hawk-Eye Sports Rifle and Pistol Shooting Academy ಪ್ರಧಾನ ಕೋಚ್ ಶರಣೇಂದ್ರ ಕೆ ವೈ. ಮಂಗಳವಾರ SPORTSMAIL ಜೊತೆ ಮಾತನಾಡಿದ ಶರಣೇಂದ್ರ ಕೆ. ವೈ. ಅವರು ಜೊನಾಥನ್ ಗವಿನ್ ಅಂಥೋನಿಯ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, “ಜೊನಾಥನ್ ಅಲ್ಪ ಅವಧಿಯಲ್ಲಿಯೇ ಶೂಟಿಂಗ್ನಲ್ಲಿ ಪಳಗಿರುತ್ತಾನೆ. 400 ಅಂಕಗಳಲ್ಲಿ 391 ಅಂಕ ಗಳಿಸಿರುವುದು ಅದ್ಭುತ. ಇದೊಂದು ಐತಿಹಾಸಿಕ ಸಾಧನೆ, ರಾಜ್ಯಕ್ಕೆ ಒಲಿಂಪಿಕ್ಸ್ ಪದಕ್ಕೆ ತರುವುದು ನಮ್ಮ ಗುರಿ,” ಎಂದಿದ್ದಾರೆ.
ಬೆಂಗಳೂರಿನ ಗೋಡ್ವಿನ್ ಆಂಥೊನಿ ಹಾಗೂ ಆನ್ಸಿ ದಂಪತಿಯ ಮಗನಾಗಿರುವ ಜೊನಾಥನ್ ಅಂಥೋನಿ ಅವರ ಯಶಸ್ಸಿನ ಹಿಂದೆ ಕಠಿಣ ಶ್ರಮವಿದೆ. ಶಿಸ್ತಿನ ಅಭ್ಯಾಸವಿದೆ. ಆತನನ್ನು ಶಾರ್ಪ್ ಶೂಟರ್ ಆಗಿ ಪಳಗಿಸಿದ್ದು ರಾಷ್ಟ್ರೀಯ ಎ ಶ್ರೇಣಿಯ ಕೋಚ್ ಶರಣೇಂದ್ರ ಕೆ. ವೈ. ಅರ್ಹತಾ ಸುತ್ತಿನಲ್ಲಿ ಜೊನಾಥನ್ 600 ರಲ್ಲಿ 578 ಅಂಕ ಗಳಿಸಿ ಅಚ್ಚರಿ ಮೂಡಿಸಿದ್ದರು.
ತಾಯಿಯ ಶ್ರಮ: ಜೊನಾಥನ್ನನ್ನು ಒಬ್ಬ ಉತ್ತಮ ಕ್ರೀಡಾಪಟುವನ್ನಾಗಿ ಮಾಡಬೇಕೆಂಬುದು ತಾಯಿ ಆನ್ಸಿ ಅವರ ಹೆಬ್ಬಯಕೆಯಾಗಿತ್ತು. ಅದಕ್ಕಾಗಿ ಹಲವು ಕ್ರೀಡೆಗಳಲ್ಲಿ ಅವನನ್ನು ತೊಡಗಿಸಿಕೊಳ್ಳುವಂತೆ ಮಾಡಿದರು. ಆದರೆ ಜೊನಾಥನ್ ಯಾವುದಕ್ಕೂ ಆಸಕ್ತಿ ತೋರಲಿಲ್ಲ. ನಂತರ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ Hawk-Eye Sports Rifle and Pistol Shooting Academy, Electronic City ಇಲ್ಲಿಗೆ ತರಬೇತಿಗೆಂದು ಕಳುಹಿಸಿದರು. ಅಲ್ಲಿ ಶರಣೇಂದ್ರ ಅವರ ಗುರಿಯನ್ನು ಜೊನಾಥನ್ ತಪ್ಪಿಸಲಿಲ್ಲ. ಈ ಆನ್ಸಿ ಅವರಲ್ಲಿ ಮಗು ಐತಿಹಾಸಿಕ ಚಿನ್ನ ಗೆದ್ದ ಬಗ್ಗೆ ಸಂಭ್ರಮವಿದೆ. ಧನ್ಯತಾಭಾವವಿದೆ. ಇನ್ನೂ ಹೆಚ್ಚಿನ ಸಾಧನೆಗಾಗಿ ಉತ್ತಮ ತರಬೇತಿ ನೀಡುವ ಹಂಬಲವಿದೆ.
12ನೇ ವಯಸ್ಸಿನಲ್ಲೇ ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಜೊನಾಥನ್: ಶರಣೇಂದ್ರ ಅವರಲ್ಲಿ ಪಳಗಿದ ಜೊನಾಥನ್ ತರಬೇತಿಗೆ ಸೇರಿದ ಕೆಲ ಸಮಯದಲ್ಲೇ ಪದಕಗಳಿಗೆ ಗುರಿ ಇಡಲಾರಂಭಿಸಿದ. 2024ರ ಖೇಲೋ ಇಂಡಿಯಾ ಯೂಥ್ ಗೇಮ್ಸ್ನಲ್ಲಿ 600ರಲ್ಲಿ 587 ಅಂಕ ಗಳಿಸಿ ಅಚ್ಚರಿ ಮೂಡಿಸಿದ. ಇದುವರೆಗೂ 18ಕ್ಕೂ ಹೆಚ್ಚು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪದಕ ಗೆದ್ದು ಸಾಧನೆ ಮಾಡಿರುತ್ತಾನೆ.
ಸ್ಫೂರ್ತಿಯ ಸೆಲೆಯಾದ ಜೊನಾಥನ್: 15ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಜೊನಾಥನ್ ಚಿನ್ನದ ಪದಕ ಗೆದ್ದಿರುವುದು ಕರ್ನಾಟಕದ ಅನೇಕ ಯುವ ಶೂಟರ್ಗಳಿಗೆ ಸ್ಪೂರ್ತಿಯಾಗಿದೆ. ಈ ಸಾಧನೆ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ ದೇಶದ ಯುವ ಶೂಟರ್ಗಳಲ್ಲೂ ಹೊಸ ಭರವಸೆ ಮೂಡಿಸಿದೆ. ಉತ್ತಮ ತರಬೇತಿ ಸಿಕ್ಕರೆ ಯಶಸ್ಸು ಗಳಿಸುವುದು ಕಷ್ಟವಲ್ಲ ಎಂಬುದನ್ನು ಯುವ ಶೂಟರ್ ಜೊನಾಥನ್ ತೋರಿಸಿದ್ದಾರೆ.
ಜೊನಾಥನ್ ಆತ್ಮವಿಶ್ವಾಸ ಹೆಚ್ಚಿದೆ. ಇನ್ನು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಆಶಯ ವ್ಯಕ್ತಪಡಿಸಿದ್ದಾರೆ ಎಂದು ಕೋಚ್ ಶರಣೇಂದ್ರ ಅವರು ಹೇಳಿದ್ದಾರೆ. ಅವರ ಕನಸನ್ನು ನನಸಾಗಿಸಲು ರಾಜ್ಯ ಸರಕಾರ ಎಲ್ಲ ರೀತಿಯ ನೆರವನ್ನು ನೀಡಬೇಕಾದ ಅಗತ್ಯವಿದೆ.
.