ರಾಷ್ಟ್ರೀಯ ಕ್ರೀಡಾಕೂಟ: ಈಜಿನಲ್ಲಿ ಕರ್ನಾಟಕ ಸಮಗ್ರ ಚಾಂಪಿಯನ್
ಹಲ್ದ್ವಾನಿ: 38ನೇ ರಾಷ್ಟ್ರೀಯ ಕ್ರೀಡಾಕೂಟದ ಈಜಿನಲ್ಲಿ ಕರ್ನಾಟಕ ಪುರುಷ ಹಾಗೂ ವನಿತೆಯರ ತಂಡ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. 38th National Games Uttarakhand Karnataka Swimming Team Both Women & Men won the overall championship
22 ಚಿನ್ನ, 10 ಬೆಳ್ಳಿ ಹಾಗೂ 5 ಕಂಚಿನ ಪದಕಗಳೊಂದಿಗೆ ಒಟ್ಟು 37 ಪದಕಗಳನ್ನು ಗೆದ್ದಿರುವ ಕರ್ನಾಟಕ ತಂಡ ಪುರುಷ ಹಾಗೂ ಮಹಿಳೆಯ ವಿಭಾಗದಲ್ಲಿ ಪ್ರಭುತ್ವ ಸಾಧಿಸಿತು. ಪದಕ ಪಟ್ಟಿಯಲ್ಲಿ ಕರ್ನಾಟಕ ಅಗ್ರ ಸ್ಥಾನ ಕಾಯ್ದುಕೊಳ್ಳಲು ಈಜಿನಲ್ಲಿ ಮಾಡಿರುವ ಸಾಧನೆಯೇ ಕಾರಣವಾಯಿತು. ಕರ್ನಾಟಕ 28 ಚಿನ್ನ, 12 ಬೆಳ್ಳಿ ಹಾಗೂ 13 ಕಂಚಿನ ಪದಕಗಳೊಂದಿಗೆ ಒಟ್ಟು 53 ಪದಕಗಳನ್ನು ಗೆದ್ದು ಅಗ್ರ ಸ್ಥಾನ ಕಾಯ್ದುಕೊಂಡಿದೆ.
ಈಜು ವಿಭಾಗದ ಕೊನೆಯ ದಿನದಲ್ಲಿ ಪುರುಷರ 100 ಮೀ. ಬ್ರೆಸ್ಟ್‌ಸ್ಟ್ರೋಕ್ ವಿಭಾಗದಲ್ಲಿ ಕರ್ನಾಟಕದ ವಿಧಿತ್ ಎಸ್. ಶಂಕರ್ 1 ನಿಮಿಷ 03.97 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. ವನಿತೆಯರ 100 ಮೀ. ಫ್ರೀಸ್ಟೈಲ್‌ನಲ್ಲಿ ಕರ್ನಾಟಕದ ಧೀನಿಧಿ ಧೇಸಿಂಘು 57.34 ಸೆಕೆಂಡುಗಳಲ್ಲಿ ಗುರಿ ತಲುಪಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ಪುರುಷ 100 ಮೀ. ಬಟರ್‌ಫ್ಲೈನಲ್ಲಿ ಕರ್ನಾಟಕದ ಶ್ರೀಹರಿ ನಟರಾಜ್ 50.60 ಸೆಕೆಂಡುಗಳಲ್ಲಿ ಗುರಿ ತಲುಪಿ ಸ್ವರ್ನತಮ್ಮದಾಗಿಸಿಕೊಂಡರು. 4×100 ಮೀ ಮಿಶ್ರ ಮೆಡ್ಲೇ ರಿಲೇಯಲ್ಲಿ ಕರ್ನಾಟಕ ತಂಡ 4 ನಿಮಿಷ 03.91 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದಿತು. ರಾಜ್ಯ ತಂಡದಲ್ಲಿ ಒಲಿಂಪಿಯನ್ ಶ್ರೀಹರಿ ನಟರಾಜ್, ವಿಧಿತ್ ಶಂಕರ್, ನಿಶಾ ಶೆಟ್ಟಿ ಹಾಗೂ ಧೀನಿಧಿ ದೇಸಿಂಘು ಸೇರಿದ್ದಾರೆ.
ಶ್ರೀಹರಿ, ಧೀನಿಧಿ ಕರ್ನಾಟಕದ ನವರತ್ನಗಳು: ಈ ಬಾರಿಯ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಈಜುಗಾರರು ಅದ್ಭುತ ಪ್ರದರ್ಶನ ತೋರಿದ್ದಾರೆ. ಅದರಲ್ಲಿ ಪುರುಷರ ವಿಭಾಗದಲ್ಲಿ ಒಲಿಂಪಿಯನ್ ಶ್ರೀಹರಿ ನಟರಾಜ್ ಹಾಗೂ ವನಿತೆಯರ ವಿಭಾಗದಲ್ಲಿ ಧೀನಿಧಿ ದೇಸಿಂಘು ತಲಾ 9 ಚಿನ್ನದ ಪದಕಗಳನ್ನು ಗೆದ್ದು ಇತಿಹಾಸ ಬರೆದಿದ್ದಾರೆ. ಶ್ರೀಹರಿ ನಟರಾಜ್ 9 ಚಿನ್ನ ಹಾಗೂ 1 ಬೆಳ್ಳಿ, ಧೀನಿಧಿ ದೇಸಿಂಘು 9 ಚಿನ್ನ ಹಾಗೂ 1 ಕಂಚಿನ ಸಾಧನೆ ಮಾಡಿದ್ದಾರೆ.