ಮುಂಬಯಿ ತಂಡದ ಆಪತ್ಬಾಂಧವ ತನುಷ್ ಕೋಟ್ಯಾನ್
ಮುಂಬಯಿ ರಣಜಿ ತಂಡದ ಪರ ಆಡುತ್ತಿರುವ ಉಡುಪಿ ಮೂಲದ ತನುಷ್ ಕೋಟ್ಯಾನ್ ಈಗ ಮುಂಬಯಿ ರಣಜಿ ತಂಡದ ಆಪತ್ಪಾಂಧವ. ಆಫ್ ಸ್ಪಿನ್ ಬೌಲರ್ ಆಗಿ ತಂಡವನ್ನು ಸೇರಿದ್ದ ತನುಷ್ ಬದಲಾದದ್ದು ಉತ್ತಮ ಆಲ್ರೌಂಡರ್ ಆಗಿ. ಈತ ಸಾಮಾನ್ಯ ಆಲ್ರೌಂಡರ್ ಆಲ್ಲ. ನಂಬಿಕೆಗೆ ಅರ್ಹನಾದ ಆಲ್ರೌಂಡರ್. ಕಳೆದ ಎರಡು ವರ್ಷಗಳಿಂದ ಮುಂಬಯಿ ತಂಡ ಸಂಕಷ್ಟದಲ್ಲಿ ಸಿಲುಕಿರುವಾಗ 9ನೇ ಕ್ರಮಾಂಕದಲ್ಲಿ ಅಂಗಣಕ್ಕಿಳಿದ ತನುಷ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿರುವುದಲ್ಲಿದೆ, ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. Allrounder Tanush Kotian helping Mumbai Ranji team at crucial time.
ಈ ವಿಷಯ ಈಗ ಮತ್ತೆ ಯಾಕೆ ನೆನಪಿಗೆ ಬಂತೆಂದರೆ. ನಿನ್ನೆ ಕೋಲ್ಕೊತಾದ ಈಡನ್ ಗಾರ್ಡನ್ಸ್‌ನಲ್ಲಿ ಮುಂಬಯಿ ಹಾಗೂ ಹರಿಯಾಣ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತನುಷ್ ಮತ್ತೊಮ್ಮೆ ತಂಡಕ್ಕೆ ಆಪದ್ಬಾಂಧವನಾಗಿ ನೆರವಾದರು. ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬಯಿ 96 ರನ್‌ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ತನುಷ್ ಹಾಗೂ ಶಮ್ಸ್ ಮುಲಾನಿ ಉತ್ತಮ ಜೊತೆಯಾಟವಾಡಿ ತಂಡದ ಮೊತ್ತವನ್ನು 315ಕ್ಕೆ ಕೊಂಡೊಯ್ದರು. ತನುಷ್ ಕೋಟ್ಯಾನ್ 97 ರನ್ ಗಳಿಸಿ ತಂಡಕ್ಕೆ ರಕ್ಷಣೆ ನೀಡಿದರು.
ರಣಜಿಯಲ್ಲಿ 52 ಇನಿಂಗ್ಸ್ ಆಡಿರುವ ತನುಷ್ ಅವರು ಎರಡು ಶತಕ ಹಾಗೂ 15 ಅರ್ಧ ಶತಕ ಗಳಿಸಿರುತ್ತಾರೆ. ಬೌಲಿಂಗ್‌ನಲ್ಲಿ 64 ಇನ್ನಿಂಗ್ಸ್‌ಗಳಲ್ಲಿ 109 ವಿಕೆಟ್ ಗಳಿಸಿರುತ್ತಾರೆ. ʼಒತ್ತಡಗಳಿಗೆ ಸಿಲುಕದೆ ತನ್ನ ನೈಜ ಆಟವನ್ನು ಪ್ರದರ್ಶಿಸುವುದು ತನುಷ್ ಅವರ ಬ್ಯಾಟಿಂಗ್‌ನ ಶಕ್ತಿ. ಕಳೆದ ಋತುವಿನಲ್ಲಿ ಕೋಟ್ಯಾನ್ ಅವರು ಬ್ಯಾಟಿಂಗ್ ಶಕ್ತಿಯ ಪ್ರಕಟವಾಗಿತ್ತು. ಅವರ ಆಲ್ರೌಂಡ್ ಪ್ರದರ್ಶನದಿಂದಾಗಿ ಮುಂಬಯಿ ತಂಡ ಆರು ವರ್ಷಗಳ ನಂತರ ರಣಜಿ ಟ್ರೋಫಿಯನ್ನು ಗೆದ್ದಿತ್ತು. ಕಳೆದ ಬಾರಿಯೂ ಮುಂಬಯಿ ತಂಡವನ್ನು ರಕ್ಷಣೆ ಮಾಡಿದ್ದು ಇದೇ ತನುಷ್ ಕೋಟ್ಯಾನ್. ಬರೋಡ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 120 ರನ್ ಸಿಡಿಸಿ ತಂಡಕ್ಕೆ ನೆರವಾಗಿದ್ದ ತನುಷ್ ಕೋಟ್ಯಾನ್ ನಂತರ ತಮಿಳು ನಾಡು ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 89 ರನ್ ಗಳಿಸಿ ತಂಡ ಫೈನಲ್ ತಲಪುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇರಾನಿ ಕಪ್‌ನಲ್ಲಿ ಬಲಿಷ್ಠ ರೆಸ್ಟ್ ಆಫ್ ಇಂಡಿಯಾ ವಿರುದ್ಧ 120 ರನ್ ಗಳಿಸಿ ಮುಂಬಯಿ 27 ವರ್ಷಗಳ ಬಳಿಕ ಇರಾನಿ ಟ್ರೋಫಿ ಗೆಲ್ಲುವಲ್ಲಿ ನೆರವಾಗಿದ್ದರು. ಇದೆಲ್ಲದರ ಫಲವಾಗಿ ತನುಷ್ ಕೋಟ್ಯಾನ್ ಕಳೆದ ಬಾರಿಯ ರಣಜಿಯಲ್ಲಿ Player of the Tournament ಗೌರವಕ್ಕೆ ಪಾತ್ರರಾದರು. ರಣಜಿ ಟ್ರೋಫಿ, ಇರಾನಿ ಟ್ರೋಫಿಯನ್ನೂ ಗೆಲ್ಲಿಸಿಕೊಟ್ಟರು. ಈ ಎಲ್ಲ ಸಾಧನೆ ತನುಷ್ ಅವರನ್ನು ಭಾರತ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡುವಂತೆ ಮಾಡಿತು. ಇತ್ತೀಚಿಗೆ ಬಿಸಿಸಿಐ ನೀಡಿದ ವಾರ್ಷಿಕ ಪ್ರಶಸ್ತಿಯಲ್ಲಿ ದೇಶದ ಉತ್ತಮ ದೇಶೀಯ ಆಲ್ರೌಂಡರ್ ಆಟಗಾರನೆಂಬ ಗೌರವಕ್ಕೆ ಪಾತ್ರರಾಗಿ. ಲಾಲಾ ಅಮರನಾಥ್ ಟ್ರೋಫಿಯನ್ನು ಸ್ವೀಕರಿಸಿದರು.
ಯಾವುದೇ ಕ್ರಮಾಂದಲ್ಲೂ ಬ್ಯಾಟಿಂಗ್ ಮಾಡಲು ಸಜ್ಜಾಗಿರುವ ತನುಷ್ ಕೋಟ್ಯಾನ್‌ಗೆ ಕ್ರಿಕೆಟ್‌ನಲ್ಲಿ ಆದರ್ಶ ಆಟಗಾರ ರವಿಚಂದ್ರನ್ ಅಶ್ವಿನ್. ಈ ಬಂಧ ಬೆಳೆದದ್ದು ಇಬ್ಬರೂ ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್ ಆಡುವಾಗ. ಆಗ ಅಶ್ವಿನ್ ಬಿಡುವಿನ ವೇಳೆಯಲ್ಲಿ ರೆಡ್‌ಬಾಲ್‌ನ ಬೌಲಿಂಗ್ ತಂತ್ರದ ಬಗ್ಗೆ ಸಾಕಷ್ಟು ಸಲಹೆ ನೀಡಿದ್ದರು. ತನುಷ್ ಈಗಲೂ ಈ ನೆರವನ್ನು ಸ್ಮರಿಸುತ್ತಾರೆ. ಎಲ್ಲಕ್ಕಿಂತ ವಿಶೇಷವೆಂದರೆ ಅಶ್ವಿನ್ ನಿವೃತ್ತಿ ಘೋಷಿಸಿದಾಗ ಆ ಸ್ಥಾನಕ್ಕೆ ಆಯ್ಕೆ ಸಮಿತಿ ಆಯ್ಕೆ ಮಾಡಿದ್ದು ತನುಷ್ ಕೋಟ್ಯಾನ್ ಅವರನ್ನೇ, ಮುಂಬಯಿಯಲ್ಲಿ ನೆಲೆಸಿರುವ ಕನ್ನಡಿಗರು ಈಗ ಆ ಮಹಾನಗರದ ಜೀವ ನದಿಯಲ್ಲಿ ಸಾಗುತ್ತಿದ್ದಾರೆ. ಮುಂಬಯಿಯ ಪ್ರತಿಯೊಂದು ಯಶಸ್ಸಿನಲ್ಲಿಯೂ ಕನ್ನಡಿಗರ ಪಾತ್ರ ಇದ್ದೇ ಇದೆ. ಈಗ ತನುಷ್ ಕೋಟ್ಯಾನ್ ಮುಂಬಯಿ ಕ್ರಿಕೆಟ್ ತಂಡ ಯಶಸ್ಸಿನ ಪಾತ್ರವಾಗಿರುವುದು ಕನ್ನಡಿಗರ ಹೆಮ್ಮೆ.