Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ವಿಂಟರ್‌ ಗೇಮ್ಸ್‌ನಲ್ಲಿ ಭಾರತಾಂಬೆಗೆ ಕೀರ್ತಿ ತಂದ ಕೊಡಗಿನ ಭವಾನಿ

ಕೊಡಗಿನ ಸಾಹಸಿಗಳ ಬದುಕಿನ ಬಗ್ಗೆ ಮಾತನಾಡಲು ಹೊರಟಾಗಲೆಲ್ಲ ನನಗೆ ನೆನಪಾಗುವುದು ಮಂಜೆ ಮಗೇಶರಾಯರ ಹುತ್ತರಿನ ಹಾಡು. ನಾವು ಪ್ರಾಥಮಿಕ ಶಾಲೆಯಲ್ಲಿ ಓದಿದ್ದೆವು. ಚೀನಾದಲ್ಲಿ ನಡೆಯುತ್ತಿರುವ ಏಷ್ಯಾದ ಚಳಿಗಾಲದ ಕ್ರೀಡಾಕೂಟದಲ್ಲಿ ಕರ್ನಾಟಕದ ಕೊಡಗಿನ ಸಾಹಸಿ ಭವಾನಿ ತೆಕ್ಕಡ ನಂಜುಡ ಅವರು ಮಾಡಿರುವ ಸಾಧನೆ ಬಗ್ಗೆ ಬರೆಯಲು ಹೊರಟಾಗ ಪಂಜೆ ಮಂಗೇಶರಾಯರ ಕವಿತೆಯ ಈ ಸಾಲು ನೆನಪಿಸಿಕೊಳ್ಳದೆ ಹೋದರೆ ಅದು ಅಪೂರ್ಣ. Bhavani Thekkada Nanjunda from Karnataka and Padma Namgail HAWS Team have made history at Asian winter games Harbin China

ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು?

ಕವಣೆ ತಿರಿಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು?

ಸವರಿ ಆನೆಯ ಸೊಂಡಿಲಿನ ರಣಕೊಂಬನಾರ್ ಭೋರ್ಗರೆದರೋ?

ಸವೆದು ಸವೆಯದ ಸಾಹಸತ್ವದ ಕ್ಷಾತ್ರ ಬೇಟೆಯ ಮೆರೆದರೋ?

ಅವರು ಸೋಲ್ ಸಾವರಿಯರು!

ಅವರು ಕಡುಗಲಿ ಗರಿಯರು!

ಅವರೆ ಕೊಡಗಿನ ಹಿರಿಯರು!

(ಮಂಜೆ ಮಗೇಶರಾರಯರ, ಹುತ್ತರಿ ಹಾಡು)

ಭಾರತ ಚಳಿಗಾಲದ ಕ್ರೀಡೆಯಲ್ಲಿ ಸಾಧನೆ ಮಾಡಿರುವುದು ಅತಿ ವಿರಳ. ಪದಕ ಗೆಲ್ಲುವುದ ಒತ್ತಟ್ಟಿಗಿರಲಿ, ಅರ್ಹತೆ ಗಳಿಸುವುದೇ ಕಷ್ಟ. ಒಂದು ವೇಳೆ ಈ ರೀತಿಯ ಸಾಧನೆ ಮಾಡಿದರೆ ಜಮ್ಮು ಕಾಶ್ಮೀರ ರಾಜ್ಯದವರೇ ಮಾಡಬೇಕು. ಏಕೆಂದರೆ ಹಿಮ, ಮಂಜು ಇರುವುದು ಅಲ್ಲ. ಆದರೆ ದಕ್ಷಿಣ ಭಾರತದವರು ಈ ಸಾಧನೆ ಮಾಡಿದರೆ? ಪ್ರಶ್ನೆ ಯಾಕೆ? ….. ಮಾಡಿದ್ದಾರೆ. ಅದರಲ್ಲೂ ಕರ್ನಾಟಕದ ಒಬ್ಬ ಮಹಿಳಾ ಸಾಧಕಿ ಮಾಡಿದ್ದಾರೆ. ಈ ಬಾರಿ ಸಾಧನೆ ಮಾಡಿರುವುದು ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿಪಡೆದಿರುವ, ವೀರ ಯೋಧರ ನಾಡು ಕೊಡಗಿನ ನಾಪೊಕ್ಲುವಿನ ನಂಜುಂಡ ಹಾಗೂ ಪಾರ್ವತಿ ದಂಪತಿಯ ಹಿರಿಯ ಮಗಳು ಭವಾನಿ ತೆಕ್ಕಡ. ಚೀನಾದ ಹೈಲಾಂಗ್‌ಜಿಯಾಂಗ್‌ನ ಹರ್ಬಿನ್‌ನಲ್ಲಿ ನಡೆದ 9ನೇ ಏಷ್ಯನ್‌ ಚಳಿಗಾಲದ ಕ್ರೀಡಾಕೂಟದಲ್ಲಿ ಭವಾನಿ ಕ್ರಾಸ್‌ಕಂಟ್ರಿ ಸ್ಕೀಯಿಂಗ್‌ನಲ್ಲಿ ಕ್ವಾರ್ಟರ್‌ ಫೈನಲ್‌ಗೆ ತಲುಪಿ ಇತಿಹಾಸ ನಿರ್ಮಿಸಿದ್ದಾರೆ. ಏಷ್ಯನ್‌ ಚಳಿಗಾಲದ ಕ್ರೀಡಾಕೂಟಲ್ಲಿ ಈ ಹಂತ ತಲುಪಿದ ದೇಶದ ಮೊದಲ ಸ್ಕೀಯಿಂಗ್‌ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಜೊತೆಯಲ್ಲಿ ತಂಡದಲ್ಲಿ ಹಾಗೂ HAWS (High Altitude Warfare School) ನ ಪದ್ಮಾ ನಾಂಗೇಲ್‌ ಕೂಡ ಸ್ಪರ್ಧಿಸಿರುತ್ತಾರೆ. ರಾಷ್ಟ್ರೀಯ ಮಟ್ಟದಲ್ಲಿ 6 ಚಿನ್ನ, 6 ಬೆಳ್ಳಿ ಹಾಗೂ 5 ಕಂಚಿನ ಪದಕಗಳನ್ನು ಗೆದ್ದಿರುವ ಭವಾನಿ ಇದುವರೆಗೂ ಆರು ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಸ್ಪರ್ಧಿಸಿರುತ್ತಾರೆ. 2023ರಲ್ಲಿ ಸ್ಲೋವೇನಿಯಾದಲ್ಲಿ ನಡೆದ ವಿಶ್ವ ಸ್ಕೀ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಮೂಲಕ ವಿಶ್ವ ಸ್ಕೀ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡ ಭಾರತದ ಏಕೈಕ ಸ್ಕೀಯರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಭಾರತದ ಧ್ವಜಧಾರಿ: ಚೀನಾದಲ್ಲಿ ನಡೆದ ಏಷ್ಯನ್‌ ವಿಂಟರ್‌ ಗೇಮ್ಸ್‌ನಲ್ಲಿ ಭಾರತದ ಧ್ವಜ ಹಿಡಿದು ತಂಡವನ್ನು ಮುನ್ನಡೆಸಿದ ಕರ್ನಾಟಕದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಭವಾನಿ ಪಾತ್ರರಾಗಿದ್ದಾರೆ.

ಭವಾನಿ ತೆಕ್ಕಡ ಚೀನಾದ ಏಷ್ಯನ್‌ ವಿಂಟರ್‌ ಗೇಮ್ಸ್‌ನ 1.3 ಕಿಮೀ ಕ್ಲಾಸಿಕ್‌ ಸ್ಪ್ರಿಂಟ್‌ ವಿಭಾಗದಲ್ಲಿ ಕ್ವಾರ್ಟ್‌‌ರ್ ಫೈನಲ್‌ ತಲುಪಿದ್ದು ಭಾರತದ ಶ್ರೇಷ್ಠ ಸಾಧನೆಯಾಗಿದೆ. 5 ಕಿಮೀ ವೈಯಕ್ತಿಕ ರೇಸ್‌ನಲ್ಲಿ ಭವಾನಿ 18 ನಿಮಿಷ 10 ಸೆಕೆಂಡುಗಳಲ್ಲಿ ಗುರಿ ತಲಪುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಸ್ಕೀಯರ್‌ ಎನಿಸಿದರು. ಭವಾನಿ ಅವರು  ನಾರ್ವೆಯಲ್ಲಿ  ಇದೇ ತಿಂಗಳ ಅಂದರೆ ಫೆಬ್ರವರಿ 25 ರಿಂದ ಮಾರ್ಚ್‌ 9 ರವರೆಗೆ ನಡೆಯಲಿರುವ ನರ್ಡಿಕ್‌ ವಿಶ್ವ ಸ್ಕೀ ಚಾಂಪಿಯನ್‌ಷಿಪ್‌ನಲ್ಲಿ ಭವಾನಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಮಂಗಳೂರಿನ ಸೇಂಟ್‌ ಆಗ್ನೆಸ್‌ನಿಂದ ಆರಂಭ: ಮಡಿಕೆಯಲ್ಲಿ ಜನಿಸಿದ ಭವಾನಿ ಪದವಿ ಶಿಕ್ಷಣ ಮುಗಿಸಿದ್ದು ಮಂಗಳೂರಿನ ಸೇಂಟ್‌ ಆಗ್ನೆಸ್‌ ಕಾಲೇಜಿನಲ್ಲಿ. ಅಲ್ಲಿನ ಎನ್‌ಸಿಸಿ ಘಟಕದ ಮೂಲಕ ಸಾಹಸ ಶಿಬಿರಗಳಲ್ಲಿ ಪಾಲ್ಗೊಂಡು ಸಾಹಸ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಂಡರು. 2014ರಲ್ಲಿಯೇ ಹಿಮಾಲಯನ್‌ ಮೌಂಟೆನೇರಿಂಗ್‌ ಶಿಬಿರಗಳಲ್ಲಿ  ಪಾಲ್ಗೊಳ್ಳುವ ಮೂಲಕ ಆತ್ಮವಿಶ್ವಾಸ ಬೆಳೆಯಿತು. ಅಲ್ಲಿಂದ ಸಾಹಸ ಪ್ರವೃತ್ತಿ ಬೆಳೆಯಿತು. ಸೇನೆಯವರ ಜೊತೆ ಪರ್ವತಾರೋಹಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಆತ್ಮವಿಶ್ವಾ ಹೆಚ್ಚಿತು.  ನಂತರ ತನ್ನದೇ ಆದ ವೆಚ್ಚದಲ್ಲಿ ಕೆಲವು ತಿಂಗಳ ಕಾಲ ಪರ್ವತ ಪ್ರದೇಶಗಳಲ್ಲಿ ತರಬೇತಿ. ಸೇನಾಧಿಕಾರಿಗಳಿಂದ ನೆರವು. ಡಾರ್ಜಲಿಂಗ್‌ನಲ್ಲಿರುವ ಹಿಮಾಲಯನ್‌ ಮೌಂಟೆನೇರಿಂಗ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಇನ್‌ಸ್ಟ್ರಕ್ಟರ್‌ ಆಗಿ ಕಾರ್ಯನಿರ್ವಹಿಸಿರುವ ಭವಾನಿಗೆ ಅಲ್ಲಿಯೇ ಸ್ಕೀಯಿಂಗ್‌ ಬಗ್ಗೆ ಆಸಕ್ತಿ ಹುಟ್ಟಿಕೊಂಡಿತು.

ಪ್ರಭಾವ ಬೀರಿದ Eddie the Eagle ಸಿನಿಮಾ: ಒಲಿಂಪಿಕ್ಸ್‌ ಸ್ಕೀಯಿಂಗ್‌ನಲ್ಲಿ ಸ್ಪರ್ಧಿಸಿದ್ದ ಇಂಗ್ಲೆಂಡ್‌ನ ಮೊದಲ ಸ್ಪರ್ಧಿ ಮೈಕಲ್‌ ಡೇವಿಡ್‌ ಎಡ್ವರ್ಡ್ಸ್‌ ಅವರ ಬದುಕಿನ ಕುರಿತ ಸಿನಿಮಾ “ಎಡ್ಡಿ ದ ಈಗಲ್‌” ಈ ಸಿನಿಮಾವನ್ನು ನೋಡಿದ ನಂತರ ಭವಾನಿ ಸ್ಕೀಯಿಂಗ್‌ನಲ್ಲಿ ದೇಶಕ್ಕಾಗಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ಹುಟ್ಟಿತು. ಒಲಿಂಪಿಯನ್‌ ಮೈಕಲ್‌ ಡೇವಿಡ್‌ ಎಡ್ವರ್ಡ್ಸ್‌ ಅವರ ಬದುಕು ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುವರಿಗೆ ಸ್ಪೂರ್ತಿಯ ಸೆಲೆ. ಈ ಸಿನಿಮಾ ನಮ್ಮ ಕನ್ನಡತಿ ಭವಾನಿ ಅವರ ಮೇಲೂ ಪ್ರಭಾವ ಬೀರಿತು ಮಾತ್ರವಲ್ಲ ಆಕೆಯನ್ನು ಶ್ರೇಷ್ಠ ಕ್ರೀಡಾಪಟುವನ್ನಾಗಿಸುವಲ್ಲಿ ಪ್ರೇರಣೆ ನೀಡಿತು. ಮೊದಲು ಟೈಂಪಾಸ್‌ಗಾಗಿ ತೊಡಗಿಸಿಕೊಂಡ ಸ್ಕೀಯಿಂಗ್‌ನಲ್ಲಿ ಭವಾನಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವವರೆಗೂ ತಮ್ಮನ್ನು ಆ ಕ್ರೀಡೆಯಲ್ಲಿ ಗಂಭಿರವಾಗಿ ತೊಡಗಿಸಿಕೊಂಡರು.

ನಮ್ಮ SportsMail YouTube ಚಾನೆಲ್‌ಗೂ subscribe ಆಗಿ ಪ್ರೋತ್ಸಾಹಿಸಿ

ಕಾಶ್ಮೀರದಲ್ಲಿರುವ ಜವಾಹರ್‌ ಇನ್‌ಸ್ಟಿಟ್ಯೂಟ್‌ ಆಫ್‌‌ ಮೌಂಟೆನೇರಿಂಗ್‌ (JIM)ನಲ್ಲಿ ಎರಡು ವರ್ಷಗಳ ಕಾಲ ತರಬೇತಿ ಪಡೆದ ಭವಾನಿ, ಆಲ್ಪೈನ್‌ ಸ್ಕೀಯಿಂಗ್‌ನಲ್ಲಿ ಇನ್‌ಸ್ಟ್ರಕ್ಟರ್‌ ಆಗಿಯೂ ಕಾರ್ಯನಿರ್ವಹಿಸಿದರು. 2021ರಲ್ಲಿ ಕಾಶ್ಮೀರದಲ್ಲಿ ನಡೆದ ಸ್ಕೀಯಿಂಗ್‌ ಕ್ರಾಸ್‌ಕಂಟ್ರಿ ಕಂಟ್ರಿಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭವಾನಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇದೇ ಸಂದರ್ಭದಲ್ಲಿ JIMನ ಪ್ರಾಂಶುಪಾಲರಾದ ಭಾರತದ ಸೇನಾಧಿಕಾರಿ ಕರ್ನಲ್‌ ಐ ಎಸ್‌ ಥಾಪಾ (COL. I S. Thapa) ಅವರು ಸ್ಕೀ ಕ್ರಾಸ್‌ ಕಂಟ್ರಿಯಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು. ಮಾತ್ರವಲ್ಲ  ಎಲ್ಲ ರೀತಿಯ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು. ಆದರೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಆಗ ಉಳಿದಿರುವುದುದ ಕೇವಲ 15 ದಿನಗಳು. ಹದಿನೈದು ದಿನಗಳಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಸಜ್ಜಾಗುವುದು ಕಷ್ಟದ ಕೆಲಸ., ಆಗ ಕರ್ನಲ್‌ ಥಾಪಾ ಅವರು, “ಚಿಂತೆಯಿಲ್ಲ, ನೀನು ಕೊನೆಯ ಸ್ಥಾನವನ್ನೇ ಪಡೆ, ಮಧ್ಯದಲ್ಲಿ ಬಿದ್ದು ವೈಫಲ್ಯಗೊಂಡೆ ಎಂದೇ ತಿಳಿ, ಆದರೆ ಸಿಗುವ ಅನುಭವ ಭಿನ್ನವಾಗಿರುತ್ತದೆ, ದಕ್ಷಿಣ ಭಾರತದಿಂದ ಇದುವರೆಗೂ ಯಾವುದೇ ಹುಡುಗ ಅಥವಾ ಹುಡುಗಿ ರಾಷ್ಟ್ರೀಯ ಸ್ಕೀಯಿಂಗ್‌ ಕ್ರಾಸ್‌‌ ಕಂಟ್ರಿಯಲ್ಲಿ ಪಾಲ್ಗೊಂಡಿಲ್ಲ, ನೀನೇ ಮೊದಲಿಗಳು, ಧೈರ್ಯದಿಂದ ಭಾವಹಿಸು,” ಎಂದು ಭವಾನಿಗೆ ಧೈರ್ಯ ತುಂಬಿದರು. ಇದರಿಂದ ಸ್ಪೂರ್ತಿ ಪಡೆದ ಭವಾನಿ ನಿರಂತರ 15 ದಿನಗಳ ಕಾಲ ಆಭ್ಯಾಸ ಮಾಡಿದರು. ಪದಕ ಗೆಲ್ಲದಿದ್ದರೂ ಭವಾನಿ ಅವರಿಗೆ ಹೊಸ ಅನುಭವ ಸಿಕ್ಕಿತು. ಅದೇ ಮುಂದಿನ ಸ್ಪರ್ಧೆಗಳಿಗೆ ಸ್ಫೂರ್ತಿಯಾಯಿತು.

ಲಾಕ್‌ಡೌನ್‌ನಲ್ಲಿ ಹೆತ್ತವರೇ ತರಬೇತುದಾರರು: 2021ರಲ್ಲಿ ಜಗತ್ತನ್ನು ಕೋವಿಡ್‌ ಆವರಿಸಿರುವಾಗ, ಭವಾನಿ ಸ್ಕೀಯಿಂಗ್‌ ಕ್ರಾಸ್‌ ಕಂಟ್ರಿ ಬಗ್ಗೆ ಇರುವ ಮಾಹಿತಿಗಳನ್ನು ಕಲೆ ಹಾಕಿ ಓದಿದದರು. ಮತ್ತೆ ಹಲವು ಬಾರಿ Eddie the Eagle ಸಿನಿಮಾ ನೋಡಿದರು. ಭವಾನಿ ಅವರ ತಂದೆ ನಂಜುಂಡ ಅವರು ಮಗಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹತ್ತು ಕಿಲೋ ಮೀಟರ್‌ ದೂರಕ್ಕೆ ಬಿಟ್ಟು ಬರುತ್ತಿದ್ದರು. ಆಗ ಕ್ರೀಡೆಗೆ ಸಂಬಂಧಿಸಿ ವಾಚ್‌ ಭವಾನಿ ಬಳಿ ಇರಲಿಲ್ಲ. ಹತ್ತು ಕಿಲೋ ಮೀಟರ್‌ ದೂರದಲ್ಲಿ ಮಗಳನ್ನು ಬಿಟ್ಟ ಬಳಿಕ ನಂಜುಂಡ ಅವರು ಮನೆಯಲ್ಲಿದ್ದ ಪತ್ನಿ ಪಾರ್ವತಿಗೆ ಕರೆ ಮಾಡಿ ಸಮಯ ಬರೆದಿಟ್ಟುಕೊಳ್ಳಲು ಸೂಚಿಸುತ್ತಿದ್ದರು. ಮನೆಯಲ್ಲಿ ಕೂಡ ನಂಜುಂಡ ಅವರು ಮರದ ಹಲಗೆ ಹಾಗೂ ಇತರ ಭಾರವಾದ ಪರಿಕರಗಳನ್ನು ಮಗಳ ಅಭ್ಯಾಸಕ್ಕಾಗಿ, ವರ್ಕೌಟ್‌ಗಾಗಿ ಇರಿಸಿದ್ದರು. ನಂತರ ರಾಷ್ಟ್ರೀಯ ಸ್ಕೀಯಿಂಗ್‌ ಕ್ರಾಸ್‌ ಕಂಟ್ರಿಯಲ್ಲಿ ಭವಾನಿ ಪಾಲ್ಗೊಂಡು ಸೇನೆಯ ಉತ್ತಮ ಸ್ಪರ್ಧಿಗಳ ನಡುವೆಯೂ ದಿಟ್ಟ ಹೋರಾಟ ನೀಡಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದರು.  ಆ ಬಳಿಕ ಫೆಡರೇಷನ್‌ ಭವಾನಿ ಅವರನ್ನು ಗುರುತಿಸಲಾರಂಭಿಸಿತು.

ಅತ್ಯಂತ ದುಬಾರಿ ಸ್ಕೀಸ್‌: ಕಾಲಿಗೆ ಎರಡು ಸ್ಕೀಸ್‌ ಕೈಯಲ್ಲಿ ಎರಡು ಸಪೋರ್ಟಿಂಗ್‌ ಸ್ಟಿಕ್‌ ಇವುಗಳು ಕಾಣಲು ಬಹಳ ಸರಳ ಇವೆ, ಆದರೆ ಅತ್ಯಂತ ದುಬಾರಿ. ಒಂದು ಫುಲ್‌ ಸೆಟ್‌ಗೆ ಸ್ಕೀಸ್‌ ಬೆಲೆ ಎರಡು ಲಕ್ಷ ರೂ. ಕಾರ್ಬನ್‌ ಫೈಬರ್‌ನ ಸ್ಕೀಸ್‌ ಬಳಸಬೇಕು. ಪ್ರತಿಯೊಬ್ಬ ಸ್ಪರ್ಧಿಗಳಲ್ಲಿ 12 ಸ್ಕೀಸ್‌ ಇರುತ್ತದೆ. ಆದರೆ ಭವಾನಿ ಅವರಲ್ಲಿ ಇರುವುದು ಐದು ಸ್ಕೀಸ್‌ ಮಾತ್ರ. ಏಕೆಂದರೆ ಭಾರತದಲ್ಲಿ ಈ ಕ್ರೀಡೆಗೆ ಹೆಚ್ಚು ನಿಧಿಯನ್ನು ಮೀಸಲಿಡುವುದಿಲ್ಲ.  ಸ್ಪರ್ಧೆಯ ವೇಳೆಯಲ್ಲಿ ಸ್ಕೀಸ್‌ ತುಂಡಾಗುವುದಿದೆ, ಮಾತ್ರವಲ್ಲ ವಿಭಿನ್ನ ತಾಂತ್ರಿಕ ಹಿನ್ನೆಲೆಯಲ್ಲಿ ವಿಭಿನ್ನ ಸ್ಕೀಸ್‌ಗಳನ್ನು ಬಳಸಬೇಕಾಗುತ್ತದೆ. ಹವಾಮಾನವನ್ನೂ ಆಧರಿಸಿಯೂ ಸ್ಕೀಸ್‌ ಬದಲಾಯಿಸಬೇಕಾಗುತ್ತದೆ. ಇದರಿಂದಾಗಿ ವೃತ್ತಿಪರ ಸ್ಕೀಯರ್‌ಗಳಲ್ಲಿ ಕನಿಷ್ಠ 12 ಸ್ಕೀಸ್‌ ಇರುತ್ತದೆ. ಕನಿಷ್ಠ ಆರು ಸ್ಕೀಸ್‌ಗಳನ್ನಾದರೂ ಹೊಂದಿರಬೇಕು ಎಂದು ಭವಾನಿ ಹೇಳುತ್ತಾರೆ.

ಸ್ಕೀಯಿಂಗ್‌ಗಾಗಿ ಸಾಲ ಮಾಡಿದ್ದಾರೆ: ಭವಾನಿ ಅವರು ಆರಂಭದ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಳ್ಳುವಾಗ ಸ್ಕೀ ಖರೀದಿಸಲು ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ದುಬಾರಿ ಕ್ರೀಡೆ. ನಂಜುಂಡ ಅವರು ಇರುವ ಪುಟ್ಟ ಜಮೀನಿನಲ್ಲಿ ಕೃಷಿ ಮಾಡಿ ಇಬ್ಬರು ಮಕ್ಕಳಿಗೆ ಓದಿಸಿದ್ದಾರೆ. ಆದರೆ ಹಿರಿಯ ಮಗಳು ಭವಾನಿಯ ಕ್ರೀಡಾ ಪ್ರತಿಭೆಗೆ ಯಾವುದೇ ರೀತಿಯಲ್ಲಿ ದಕ್ಕೆ ಬಾರದ ಹಾಗೆ ನೋಡಿಕೊಂಡಿದ್ದಾರೆ. ಇದಕ್ಕಾಗಿ ಬ್ಯಾಂಕುಗಳಲ್ಲಿ ಸಾಲ ಮಾಡಿ ಮಗಳ ಸ್ಕೀ ಖರೀದಿಗೆ ನೆರವಾಗಿದ್ದಾರೆ. ದಕ್ಷಿಣ ಭಾರತದ ಮೊದಲ ಸ್ಕೀಯಿಂಗ್‌ ತಾರೆಯಾಗಿರುವ ಭವಾನಿ ಅವರ ಕ್ರೀಡಾ ಬದುಕಿಗೆ ತಂದೆ ನಂಜುಂಡ ಅವರು ತನ್ನಿಂದಾದ ಎಲ್ಲ ನೆರವನ್ನು ನೀಡಿದ್ದಾರೆ. ಇಲ್ಲಿ ಈ ಕ್ರೀಡೆಯ ಬಗ್ಗೆ ಯಾರಿಗೂ ಅರವಿಲ್ಲ, ಏಷ್ಯನ್‌ ಗೇಮ್ಸ್‌‌ ಹಾಗೂ ಚಳಿಗಾಲದ ಒಲಿಂಪಿಕ್ಸ್‌ (2026) ರಲ್ಲಿ ಮಗಳು ಪಾಲ್ಗೊಳ್ಳಬೇಕೆಂಬುದು ನಂಜುಂಡ ಅವರ ಮಹದಾಸೆ.

ಆ ಕ್ರೀಡೆ ನಿನಗೆ ಖುಷಿ ಕೊಟ್ಟರೆ ಮುಂದುವರಿ: ಭವಾನಿ ಸ್ಕೀಯಿಂಗ್‌ನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದಕ್ಕೆ ಮುನ್ನ ತಂದೆಯವರಿಗೆ ವಿಷಯವನ್ನು ತಿಳಿಸಿರುತ್ತಾರೆ. “ಇದರಲ್ಲಿ ಯಶಸ್ಸು ಕಾಣುತ್ತೇನೋ ಇಲ್ಲವೋ ಗೊತ್ತಿಲ್ಲ, ಆದರೆ ಪ್ರಯತ್ನ ಮುಂದುವರಿಸುವೆ. ಇದಕ್ಕೆ ಹಣ ವ್ಯಯ ಮಾಡಬೇಕಾಗುತ್ತದೆ,” ಎಂದಾಗ, ನಂಜುಂಡ ಅವರು, “ಈ ಕ್ರೀಡೆ ನಿನಗೆ ವೈಯಕ್ತಿಕವಾಗಿ ಖುಷಿ ಕೊಡುವುದಾದರೆ ಮುಂದುವರಿಸು, ನನ್ನಲ್ಲಿ ಎಲ್ಲಿಯವರೆಗೆ ನೆರವು ಮಾಡಲಾಗುತ್ತದೋ, ಅಲ್ಲಿಯ ವರೆಗೆ ನೆರವು ಮಾಡುತ್ತೇನೆ,” ಎಂದಾಗ ಭವಾನಿ ಇನ್‌ಸ್ಟ್ರಕ್ಟರ್‌ ಕೆಲಸವನ್ನು ಬಿಟ್ಟು ಸ್ಕೀಯಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಸಾಧನೆ ನೋಡಿ ಜನರಲ್‌ ತಿಮ್ಮಯ್ಯ ಸಾಹಸ ಅಕಾಡೆಮಿಯಿಂದ ನೆರವು!: ತಂದೆಯ ಆಶೀರ್ವಾದ ಸಿಕ್ಕಾಗಿನಿಂದ ಭವಾನಿ ಪೂರ್ಣಕಾಲಿಕ ತರಬೇತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆರಂಭದಲ್ಲಿ ಗುರುವಿನ ನೆರವಿಲ್ಲದೆ, ಇನ್ನೊಬ್ಬರು ಆಭ್ಯಾಸ ಮಾಡುತ್ತಿರುವುದನ್ನು ನೋಡಿ ಅಭ್ಯಾಸ ಆರಂಭಿಸಿದರು. ಆರಂಭದಲ್ಲಿ ಲಡಾಕ್‌ನಲ್ಲಿ ತರಬೇತಿ ಆರಂಭಿಸಿದರು. ಅದು ಹೈ ಆಲ್ಟಿಟ್ಯೂಡ್‌ ತರಬೇತಿ. ಅಲ್ಲಿ ಯಾವುದೇ ತರಬೇತಿ ಕೇಂದ್ರಗಳಿರಲಿಲ್ಲ. ಅಲ್ಲಿ ತರಬೇತಿ ನಡೆಸುತ್ತಿರುವರ ಜೊತೆ ಗೆಳೆತನ ಮಾಡಿಕೊಂಡು ಭವಾನಿ ತಪಸ್ಸಿನಂತೆ ಸ್ಕೀಯಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸೇನೆಯ ಐೋಧರು ತರಬೇತಿ ಪಡೆಯುತ್ತಿರುವಾಗ ಅವರ ಹಿಂದೆಯೇ ಓಡಿಕೊಂಡು ಅಭ್ಯಾಸ ಆರಂಬಿಸಿದರು. ಅನಂತರ ಕೀರ್ತಿ ಸರ್‌ ಅವರಿಗೆ ಥಾಪಾ ಸರ್‌ ನನ್ನನ್ನು ಪರಿಚಯಿಸಿದರು. ಇದರಿಂದಾಗಿ ತರಬೇತಿಯಲ್ಲಿ ಆತ್ಮವಿಶ್ವಾಸ ಸಿಕ್ಕಿತು. ತರಬೇತಿಯ ನಡುವೆ ಪ್ರವಾಸಿಗರು ಅಲ್ಲಿಗೆ ಬರುತ್ತಿದ್ದರು. ಅವರಿಗೆ ಟ್ರಕ್ಕಿಂಗ್‌ಗೆ ಸಂಬಂಧಿಸಿದಂತೆ ಫ್ರೀಲಾನ್ಸ್‌ನಲ್ಲಿ ಸಲಹೆ ನೀಡುತ್ತಿದ್ದರು. ಇದರಿಂದ ಸ್ವಲ್ಪ ಹಣವೂ ಸಿಗುತ್ತಿತ್ತು. ಆ ಹಣದಲ್ಲಿ ಭವಾನಿ ತನ್ನ ಖರ್ಚು ನೋಡಿಕೊಳ್ಳುತ್ತಿದ್ದರು. ಬಾಡಿಗೆ ರೂಮು ಪಡೆದಿದ್ದ ಭವಾನಿ ಈ ಪ್ರವಾಸಿಗರು ಕೊಟ್ಟ ಹಣದಿಂದ ಅದನ್ನು ನಿಭಾಯಿಸುತ್ತಿದ್ದರು. ಆ ನಂತರ ಚಿನ್ನದ  ಸಾಧನೆ ನೋಡಿ ಜನರಲ್‌ ತಿಮ್ಮಯ್ಯ ಸಾಹಸ ಅಕಾಡೆಮಿಯವರು ಆರ್ಥಿಕ ನೆರವನ್ನು ನೀಡಿದರು. ಆಲ್ಲಿಂದ ಭವಾನಿ  ಅವರ ಕ್ರೀಡಾ ಬದುಕಿಗೆ ದೊಡ್ಡ ಬೆಂಬಲ ಸಿಕ್ಕಂತಾಯಿತು. ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟದಲ್ಲಿ ಭವಾನಿ ನಿರಂತರವಾಗಿ ಚಿನ್ನ ಗೆದ್ದರು. 2024ರಲ್ಲಿ ಖೇಲೋ ಇಂಡಿಯಾ ವಿಂಟರ್‌ ಗೇಮ್ಸ್‌ನಲ್ಲಿ ಕರ್ನಾಟಕ ರನ್ನರ್‌ ಅಪ್‌‌ ಗೆಲ್ಲುವಲ್ಲಿ ಭವಾನಿ ಅವರ ಸಾಧನೆ ಗಮನಾರ್ಹವಾಗಿತ್ತು. ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಭವಾನಿ ಒಟ್ಟು 17 ಪದಕಗಳನ್ನು ಗೆದ್ದಿರುತ್ತಾರೆ,. ಅವುಗಳಲ್ಲಿ 6 ಚಿನ್ನ, 6 ಬೆಳ್ಳಿ ಹಾಗೂ 5 ಕಂಚಿನ ಪದಕಗಳು ಸೇರಿವೆ. ವಿಶ್ವ ಚಾಂಪಿಯನ್‌ಷಿಪ್‌ ಸೇರಿದಂತೆ ಒಟ್ಟು 6 ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಸ್ಪರ್ಧಿಸಿರುತ್ತಾರೆ. 2022 ರಲ್ಲಿ ಇಟಲಿಯಲ್ಲಿ ನಡೆದ ಲ್ಯಾಂಗ್‌ಲಾಫ್‌ ಕಪ್‌ ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ ಸ್ಕೀಯಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದರು.

ರಾಂಕಿಂಗ್‌ನಲ್ಲಿ ದೇಶಕ್ಕೆ ನಂಬರ್‌ 1: 2024ರ ಖೇಲೋ ಇಂಡಿಯಾ ವಿಂಟರ್‌ ಗೇಮ್ಸ್‌ನಲ್ಲಿ ಮೂರು ಚಿನ್ನದ ಪದಕ ಗೆದ್ದ ಹಿನ್ನೆಲೆಯಲ್ಲಿ ಭವಾನಿ ವನಿತೆಯರ ವಿಭಾಗದ ಸ್ಕೀಯಿಂಗ್‌ನಲ್ಲಿ ದೇಶದಲ್ಲೇ ನಂಬರ್‌ ಒನ್‌ ಸ್ಥಾನಕ್ಕೇರಿದರು. ಇದರಿಂದಾಗಿ ಚೀನಾದಲ್ಲಿ ನಡೆದ ಏಷ್ಯನ್‌ ವಿಂಟರ್‌ ಗೇಮ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಒದಗಿಬಂತು. ಏಷ್ಯನ್‌ ವಿಂಟರ್‌‌ ಗೇಮ್ಸ್‌ನಲ್ಲಿ ಸ್ಕೀಯಿಂಗ್‌ ಕ್ರಾಸ್‌ ಕಂಟ್ರಿಯಲ್ಲಿ ಕ್ವಾರ್ಟರ್‌ ಫೈನಲ್‌ ತಲಪುವ ಮೂಲಕ ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ದಾಖಲೆ ಬರೆದರು. ಭಾರತ ಧ್ವಜ ಹಿಡಿದು ತಂಡವನ್ನು ಮುನ್ನಡೆಸುವ ಗೌರರವೂ ಸಿಕ್ಕಿತು. ಮಂಜೇ ಇಲ್ಲದ ದಕ್ಷಿಣ ಭಾರತದಿಂದ ಬಂದ ಯುವತಿಯೊಬ್ಬಳು ತನ್ನ ಸಾಧನೆಯ ಮೂಲಕ ಭಾರತದ ಧ್ವಜ ಹಿಡಿದು ತಂಡವನ್ನು ಮುನ್ನಡೆಸಿರುವುದು ಅದ್ಭುತ ಸಾಧನೆ. ಈ ಯಶಸ್ಸಿನ ಹಾದಿಯಲ್ಲಿ ಭಾರತದ ಸೇನೆ ಮಾಡಿರುವ ನೆರವನ್ನು ಭವಾನಿ ಸದಾ ಸ್ಮರಿಸುತ್ತಾರೆ. ಕಾಶ್ಮೀರದ ಗುಲ್ಮೋರ್‌ನಲ್ಲಿರುವ  ಹೈ ಆಲ್ಟಿಟ್ಯೂಡ್‌ ವಾರ್‌ಫೇರ್‌ ಸ್ಕೂಲ್‌ High Altitude Warfare School) ನಲ್ಲಿ ಸಿಕ್ಕ ನೆರವು, ಅಲ್ಲಿಯ ಸೇನಾ ಬಂಧುಗಳು ತೋರಿದ ಬೆಂಬಲ ಯಶಸ್ಸಿಗೆ ಕಾರಣವಾಯಿತು ಎನ್ನುತ್ತಾರೆ ಭವಾನಿ. ಅದೇ ರೀತಿ JIM (Jawahar Institute of Mountaineering) ನೆರವನ್ನೂ ಸ್ಮರಿಸಿದ್ದಾರೆ. JIM ನಲ್ಲಿ ಉತ್ತಮ ಪ್ರದರ್ಶನ ತೋರಿ ಸ್ಕೀಯಿಂಗ್‌ಗೆ ಬಂದ ನಂತರ ಅಲ್ಲಿ HAWS ನಲ್ಲಿ ಉತ್ತಮ ಪ್ರೋತ್ಸಾಹ ಸಿಕ್ಕಿದ್ದು ಭವಾನಿ ಅವರ ಯಶಸ್ಸಿಗೆ ಕಾರಣವಾಯಿತು. ಅದೇ ರೀತಿ ಜನರಲ್‌ ತಿಮ್ಮಯ್ಯ ಸಾಹಸ ಕಾಡೆಮಿಯು (General Thimayya National Academy of Adventure) ನೀಡಿದ ಆರ್ಥಿಕ ನೆರವನ್ನೂ ಭವಾನಿ ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ. ಕರ್ನಾಟಕ ರಾಜ್ಯ ಸರಕಾರದ ಕ್ರೀಡಾ ದತ್ತು ಯೋಜನೆಯಿಂದಲೂ ನೆರವು ಸಿಕ್ಕಿರುವುದನ್ನು ಭವಾನಿ ಸ್ಮರಿಸಿದ್ದಾರೆ.

ಅಪ್ಪ ಅಮ್ಮ ಹಾಗೂ ತಂಗಿಯ ತ್ಯಾಗ: “ನನ್ನ ತರಬೇತಿಯನ್ನು ನೋಡಲು ಕಾಶ್ಮೀರಕ್ಕೆ ಬನ್ನಿ” ಎಂದು ಹಲವು ಬಾರಿ ಭವಾನಿ ತನ್ನ ಹೆತ್ತವರು ಮತ್ತು ತಂಗಿಯನ್ನು ವಿನಂತಿಸಿಕೊಂಡಿದ್ದಾರೆ. ಅದಕ್ಕೆ ಅವರ ತಂದೆ ನೀಡಿದ ಉತ್ತರ ಅತ್ಯಂತ ಮಾರ್ಮಿಕವಾಗಿದೆ, “ನಾವಿಬ್ಬರು ಅಲ್ಲಿಗೆ ಬರಲಿಕ್ಕೆ ತಲಾ 40,000 ಬೇಕಾಗುತ್ತದೆ. ಅದೇ ಹಣ ನಿನ್ನ ತರಬೇತಿಗೆ ಉಪಯೋಗವಾಗುತ್ತದಲ್ಲ,” ಭಾವನ ತಂದೆಯವರ ಈ ಮಾತನ್ನು ಹಲವು ಬಾರಿ ಸ್ಮರಿಸಿದರು. ಭವಾನಿ ಅವರ ತಂಗಿ ಸೀತಮ್ಮ  ಅತ್ಯಂತ ಪ್ರತಿಭಾವಂತೆ. ಬಯೋಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವೀಧರೆ. ಯೂನಿವರ್ಸಿಟಿ ಟಾಪರ್‌ ಕೂಡ.  ಜರ್ಮನಿಯಲ್ಲಿ ಡಾಕ್ಟರೇಟ್‌ ಮಾಡಲು ಅವಕಾಶ ಬಂದಿತ್ತು. ಆದರೆ ಅಕ್ಕನ ಕ್ರೀಡಾ ಬದುಕಿಗಾಗಿ ಜರ್ಮನಿಯಲ್ಲಿ ಸಂಶೋಧನೆ ಮಾಡುವುದನ್ನು ಬಿಟ್ಟು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. “ಈ ಎಲ್ಲ ವಿಚಾರಗಳು ನನ್ನನ್ನು ಪದಕ ಗೆಲ್ಲುವಂತೆ ಮಾಡುತ್ತಿದೆ,” ಎನ್ನುತ್ತಾರೆ ಭವಾನಿ. ತಾಯಿ ಅನಾರೋಗ್ಯದಲ್ಲಿರುವುದರಿಂದ ಸೀತಮ್ಮ ಈ ನಿರ್ಧಾರಕ್ಕೆ ಬಂದರು. ಬೆಂಗಳೂರಿನಲ್ಲಿರುವುದರಿಂದ ತಾಯಿಗೆ ಏನಾದರೂ ಅನಾರೋಗ್ಯವಾದರೆ ಬಂದು ನೋಡಬಹದುದು ಎಂಬುದು ಅವರ ಆಶಯವಾಗಿತ್ತು.

ಶ್ರೇಷ್ಠ ಅಥ್ಲೀಟ್‌ಗಳ ವಿರುದ್ಧ ಸ್ಪರ್ಧೆ: ಭಾರತ ವಿಂಟರ್‌ ಗೇಮ್ಸ್‌ನಲ್ಲಿ ಅಷ್ಟೇನು ಇಲ್ಲ. ಜಗತ್ತಿನ ಅಥವಾ ಏಷ್ಯಾದ ಇತರ ದೇಶಗಳಿಗೆ ಹೋಲಿಸಿದರೆ ಇಲ್ಲಿ ಸರಕಾರವೂ ಕೂಡ ಪ್ರೋತ್ಸಾಹ ನೀಡುತ್ತಿಲ್ಲ. ಈಗ ಖೇಲೋ ಇಂಡಿಯಾ ಯೋಜನೆ ಬಂದಾಗಿನಿಂದ ಸುಧಾರಣೆ ಆಗಿದೆ. ವಿಂಟರ್‌ ಗೇಮ್ಸ್‌ ಹೆಸರು ಕೇಳಿ ಬರುತ್ತಿದೆ. ವಿಂಟರ್‌ ಏಷ್ಯನ್‌ ಗೇಮ್ಸ್‌ನಲ್ಲಿ ಸ್ಪರ್ಧಿಸಿರುವ ಭವಾನಿ ಅಲ್ಲಿಯ ಸ್ಪರ್ಧೆಯ ಗುಣಮಟ್ಟದ ಬಗ್ಗೆ ಮಾತನಾಡಿದ್ದಾರೆ. “ಸರ್‌ ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮಲ್ಲಿ ಕ್ರೀಡೆಗೆ ವ್ಯಯ ಮಾಡುತ್ತಿರುವ ಹಣ ಬಹಳ ಕಡಿಮೆ. ಏಷ್ಯನ್‌ ಚಳಿಗಾಲದ ಕ್ರೀಡಾಕೂಟದ ಆತಿಥ್ಯ ವಹಿಸಿರುವ ಚೀನಾದ ಸ್ಪರ್ಧಿಗಳಿಗೆ ಅಲ್ಲಿಯ ಸರಕಾರ ಕೋಟ್ಯಂತರ ಹಣ ವ್ಯಯ ಮಾಡಿದ ಹಣದ ಮೊತ್ತ ಕೇಳಿ ಅಚ್ಚರಿಯಾಯಿತು. ಆ ಕ್ರೀಡೆಯಲ್ಲಿ ಯಶಸ್ಸು ಕಾಣಬೇಕಾದರೆ ಅವರು ಚಿಕ್ಕಂದಿನಿಂದಲೇ ತರಬೇತಿ ನೀಡಲಾರಂಭಿಸುತ್ತಾರೆ. ನಮ್ಮಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಖರ್ಚು ಮಾಡಿರುವುದು ಗರಿಷ್ಠ 20-30 ಲಕ್ಷ ಇರಬಹುದು. ಅವರಿಗೆ ಕೋಚ್‌, ಫಿಸಿಯೋಥೆರಪಿಸ್ಟ್‌, ನ್ಯೂಟ್ರಿಷನಿಸ್ಟ್‌, ನಮ್ಮಲ್ಲಿ ಅಂಥ ಸೌಲಭ್ಯಗಳು ಬಂದರೆ ಇನ್ನೂ ಉತ್ತಮ ರೀತಿಯಲ್ಲಿ ಸಾಧನೆ ಮಾಡಬಹುದು.

ನೆರವು ನೀಡಿದ ರೊನಾಲ್ಡ್‌ ಕೊಲಾಸೋ: ಭವಾನಿ ಆರಂಭದಲ್ಲಿ ಸ್ಕೀಯಿಂಗ್‌ಗೆ ನೆರವು ನೀಡಿದ ಕೊಲ್ಲಿ ರಾಷ್ಟ್ರದಲ್ಲಿ ನೆಲೆಸಿರುವ ಮಂಗಳೂರು ಮೂಲದ ದಾನಿಳಗಾದ ರೊನಾಲ್ಡ್‌ ಕೊಲಾಸೋ ಅವರು ನೆರವು ನೀಡಿರುತ್ತಾರೆ. 2018ರಲ್ಲಿ ಭವಾನಿ ಅವರು ಕ್ರೀಡೆಯನ್ನು ಆರಂಭಿಸಿದಾಗ ಯಾವುದೇ ನೆರವು ಸಿಕ್ಕಿರಲಿಲ್ಲ. ಆಗ ಮಂಗಳೂರಿನಲ್ಲಿ ಯಾರೋ ಕೊಲಾಸೋ ಅವರ ಇ-ಮೇಲ್‌ ಐಡಿಯನ್ನು ಕೊಟ್ಟರು. ಭವಾನಿ ಯಾರೆಂಬುದೂ ಅವರಿಗೆ ಗೊತ್ತಿರಲಿಲ್ಲ. ಭವಾನಿ ಕ್ರೀಡಾ ಸಾಧನೆಗಾಗಿ ನೆರವು ಕೇಳಿ ಹಲವರಿಗೆ ಸಂದೇಶ ರವಾನಿಸಿದ್ದರು. ಅದರಲ್ಲಿ ಕೊಲಾಸೋ ಕೂಡ ಒಬ್ಬರು. ನೂರಾರು ಇ-ಮೇಲ್‌ಗಳಲ್ಲಿ ಪ್ರತಿಕ್ರಿಯೆ ನೀಡಿದವರು ಕೊಲಾಸೋ ಅವರು ಮಾತ್ರ. ಅವರಿಗೆ ಭವಾನಿ ಯಾರೆಂಬುದು ಗೊತ್ತಿಲ್ಲ, ಭವಾನಿಗೂ ಅವರ್ಯಾರೆಂಬುದು ಗೊತ್ತಿಲ್ಲ. ಸಂದೇಶ ನೋಡಿ ಕೊಲಾಸೋ ಅವರು 24 ಗಂಟೆಗಳಲ್ಲಿ ಪ್ರತಿಕ್ರಿಯೆ ನೀಡಿ ಎಲ್ಲ ದಾಖಲೆಗಳನ್ನು ಕಳುಹಿಸುವಂತೆ ಕೇಳಿಕೊಂಡರು. ಆಗ ಭವಾನಿ, “ಸರ್‌ ನನಗೆ ಹಣ ಕಳುಹಿಸುವುದು ಬೇಡ, ನೀವು ತರಬೇತಿ ಕೇಂದ್ರಕ್ಕೆ ಕಳುಹಿಸಿ,” ಎಂದೂ ವಿನಂತಿಸಿಕೊಂಡಿದ್ದರು. ಕೊಲಾಸೋ ಅವರು ಭವಾನಿಯ ತರಬೇತಿಯ ಶುಲ್ಕ ಭರಿಸಿರುವುದನ್ನು ಚಾಂಪಿಯನ್‌ ಈಗಲೂ ಸ್ಮರಿಸುತ್ತಾರೆ. ಒಮ್ಮೆ ಕೊಲಾಸೋ ಅವರು ಬೆಂಗಳೂರಿಗೆ ಬಂದಿದ್ದಾಗ ಭವಾನಿ ಹಾಗೂ ಅವರ ಸಹೋದರಿಯನ್ನು ಮನೆಗೆ ಕರೆಯಿಸಿದ್ದರು. ಮಾತಿನ ನಡುವೆ ಭವಾನಿಯವರು, “ನೀವು ಸಹಾಯ ಮಾಡಿದ್ದೀರಿ ಅದಕ್ಕಾಗಿ ನಿಮ್ಮ ಹೆಸರು ಅಥವಾ ಯಾವುದಾದರೂ ಲೋಗೋವನ್ನು ನನ್ನ ಉಡುಪಿನಲ್ಲಿ ಧರಿಸಬಹುದೇ?” ಎಂದು ಕೇಳಿದಾಗ ಕೊಲಾಸೋ ಅವರು ನಿರಾಕರಿಸಿ, “ನೀನು ಸಾಧನೆ ಮಾಡು, ಅದೇ ಫಲ, ಇನ್ನೂ ಅಗತ್ಯವಿದ್ದರೆ ನೆರವು ನೀಡುತ್ತೇನೆ, ನೀನು ಬದುಕಿನಲ್ಲಿ ಯಶಸ್ಸುಕಂಡು ಉತ್ತಮ ಸ್ಥಿತಿ ತಲುಪಿದಾಗ ನಿನ್ನ ಕೈಯಿಂದ ಬೇರೆಯವರಿಗೆ ಸಹಾಯ ಮಾಡು,” ಎಂದು ಶುಭ ಹಾರೈಸಿದ್ದರು.  ಕೊಡಗಿನ ಶಾಸಕ ಎ. ಎಸ್‌. ಪೊನ್ನಣ್ಣ ಅವರು ಕೂಡ ಭವಾನಿ ಅವರ ಕ್ರೀಡಾ ಸಾಧನೆಗೆ ನೆರವಾಗಿರುತ್ತಾರೆ. ಯಾವುದೇ ಕ್ರೀಡೆ ಇರಲಿ ಸಾಧಕರಿಗೆ ಪ್ರೋತ್ಸಾಹ ನೀಡುವ ಸಂಸದ ತೇಜಸ್ವಿ ಸೂರ್ಯ ಹಾಗೂ ಆತ್ಮೀಯರಾದ ಎಸ್‌ವಿಎಸ್‌ ಗುಪ್ತಾ ಅವರು ಭವಾನಿಯ ಸಾಹಸ ಯಾನದಲ್ಲಿ ನೆರವಾಗಿದ್ದಾರೆ.

ಭವಾನಿಯ ರಾಷ್ಟ್ರೀಯ ಸಾಧನೆಗಳು:  

1.  ಮೊದಲ ಖೇಲೋ ಇಂಡಿಯಾ ವಿಂಟರ್‌ ಗೇಮ್ಸ್‌, -2020 (5 ಕಿಮೀ):  ಕಂಚಿನ ಪದಕ.

2. ಮೊದಲ ಖೇಲೋ ಇಂಡಿಯಾ ವಿಂಟರ್‌ ಗೇಮ್ಸ್‌-2020 (10 ಕಿಮೀ) ಕಂಚಿನ ಪದಕ.

3. ಎರಡನೇ ಖೇಲೋ ಇಂಡಿಯಾ ವಿಂಟರ್‌ ಗೇಮ್ಸ್‌ -2021 (1.4 ಕಿಮೀ) ಚಿನ್ನದ ಪದಕ.

4. ಎರಡನೇ ಖೇಲೋ ಇಂಡಿಯಾ ವಿಂಟರ್‌ ಗೇಮ್ಸ್‌ 2021 (5 ಕಿ ಮೀ) ಕಂಚಿನ ಪದಕ.

5. ಆಲ್‌ಇಂಡಿಯಾ ಓಪನ್‌ ಸ್ಕೀ & ಸ್ನೋಬಾಲ್‌ ಚಾಂಪಿಯನ್‌ಷಿಪ್‌-2022 (1.5 ಕಿಮೀ) ಬೆಳ್ಳಿ ಪದಕ.

6. ಆಲ್‌ಇಂಡಿಯಾ ಓಪನ್‌ ಸ್ಕೀ & ಸ್ನೋಬಾಲ್‌ ಚಾಂಪಿಯನ್‌ಷಿಪ್‌-2022 (5 ಕಿಮೀ) ಕಂಚಿನ ಪದಕ.

7. ನ್ಯಾಷನಲ್‌ ಕ್ರಾಸ್‌ ಕಂಟ್ರಿ ಸ್ಕೀಯಿಂಗ್‌ ಚಾಂಪಿಯನ್‌ಷಿಪ್‌ -2022 (5 ಕಿಮೀ) ಬೆಳ್ಳಿ ಪದಕ.

8. ನ್ಯಾಷನಲ್‌ ಕ್ರಾಸ್‌ ಕಂಟ್ರಿ ಸ್ಕೀಯಿಂಗ್‌ ಚಾಂಪಿಯನ್‌ಷಿಪ್‌ -2022 (10 ಕಿಮೀ) ಬೆಳ್ಳಿ ಪದಕ.

9. ನ್ಯಾಷನಲ್‌ ವಿಂಟರ್‌ ಬೈಥ್ಲಾನ್‌ ಚಾಂಪಿಯನ್‌ಷಿಪ್‌-2022 (10 ಕಿಮೀ) ಬೆಳ್ಳಿ ಪದಕ.

10. ನ್ಯಾಷನಲ್‌ ವಿಂಟರ್‌ ಬೈಥ್ಲಾನ್‌ ಚಾಂಪಿಯನ್‌ಷಿಪ್‌-2022 (5 ಕಿಮೀ) ಬೆಳ್ಳಿ ಪದಕ.

11. ನ್ಯಾಷನಲ್‌ ಕ್ರಾಸ್‌ ಕಂಟ್ರಿ ಸ್ಕೀಯಿಂಗ್‌ ಚಾಂಪಿಯನ್‌ಷಿಪ್‌ -2022 (1. 5 ಕಿಮೀ) ಚಿನ್ನದ ಪದಕ.

12. 3ನೇ ಖೇಲೋ ಇಂಡಿಯಾ ವಿಂಟರ್‌ ಗೇಮ್‌ 2023 (10 ಕಿ ಮೀ) ಚಿನ್ನದ ಪದಕ.

13. 3ನೇ ಖೇಲೋ ಇಂಡಿಯಾ ವಿಂಟರ್‌ ಗೇಮ್‌ 2023 (5 ಕಿ ಮೀ) ಚಿನ್ನದ ಪದಕ.

14. 3ನೇ ಖೇಲೋ ಇಂಡಿಯಾ ವಿಂಟರ್‌ ಗೇಮ್‌ 2023 (1.5 ಕಿ ಮೀ) ಚಿನ್ನದ ಪದಕ.

15. 3ನೇ ಖೇಲೋ ಇಂಡಿಯಾ ವಿಂಟರ್‌ ಗೇಮ್‌ 2024 (10 ಕಿ ಮೀ) ಚಿನ್ನದ ಪದಕ.

16. 3ನೇ ಖೇಲೋ ಇಂಡಿಯಾ ವಿಂಟರ್‌ ಗೇಮ್‌ 2024 (10 ಕಿ ಮೀ) ಚಿನ್ನದ ಪದಕ.

17. 3ನೇ ಖೇಲೋ ಇಂಡಿಯಾ ವಿಂಟರ್‌ ಗೇಮ್‌ 2024 (10 ಕಿ ಮೀ) ಚಿನ್ನದ ಪದಕ.

ಭವಾನಿಯ ಅಂತತಾರಾಷ್ಟ್ರೀಯ ಸಾಧನೆಗಳು:

1. ಎಫ್‌ಐಎಸ್‌ ಸ್ಕೀಯಿಂಗ್‌ ರೇಸ್‌ ಐಸ್‌ಲ್ಯಾಂಡ್‌ 2022 (1.2 ಕಿಮೀ) 7ನೇ ಸ್ಥಾನ.

2. ಎಫ್‌ಐಎಸ್‌ ಸ್ಕೀಯಿಂಗ್‌ ರೇಸ್‌ ಐಸ್‌ಲ್ಯಾಂಡ್‌ 2022 (05 ಕಿಮೀ) 6ನೇ ಸ್ಥಾನ

3. ರೈಪ್ಫಿಸೆನ್‌ ಲಾಂಗ್‌ಲೌಫ್‌ ಕಪ್‌ ಇಟಲಿ, 2022 (05 ಕಿಮೀ) ಬೆಳ್ಳಿ ಪದಕ.

4. ಏಷ್ಯನ್‌ ಸಮ್ಮರ್‌ ಬೈಥ್ಲಾನ್‌, ಕಝಕಿಸ್ತಾನ್‌, 2023 (7.5 ಕಿಮೀ) 17ನೇ ಸ್ಥಾನ,

5. ಎಫ್‌ಐಎಸ್‌ ಸ್ಕೀಯಿಂಗ್‌ ರೇಸ್‌ ಐಸ್‌ಲ್ಯಾಂಡ್‌ 2023 (1.2 ಕಿಮೀ) 4ನೇ ಸ್ಥಾನ.

6. ಎಫ್‌ಐಎಸ್‌ ಸ್ಕೀಯಿಂಗ್‌ ರೇಸ್‌ ಐಸ್‌ಲ್ಯಾಂಡ್‌ 2023 (05 ಕಿಮೀ) 4 ನೇ ಸ್ಥಾನ,

7. ನಾರ್ಡಿಕ್‌, ವಿಶ್ವ ಸ್ಕೀಯಿಂಗ್‌‌ ಚಾಂಪಿಯನ್‌ಷಿಪ್‌ ಸ್ಲೊವೆನಿಯಾ 2023 (05 ಕಿಮೀ) 31ನೆ ಸ್ಥಾನ.

  (ಭಾರತದಿಂದ ಆಯ್ಕೆಯಾದ ಏಕೈಕ ಸ್ಫರ್ಧಿ.)

8. ಈಸ್ಟರ್ನ್‌ ಯೂರೋಪ್‌ ಕಪ್‌, ಕಝಕಿಸ್ತಾನ್‌ 2024 (5 ಕಿಮೀ) 36ನೇ ಸ್ಥಾನ,

9. ಈಸ್ಟರ್ನ್‌ ಯೂರೋಪ್‌ ಕಪ್‌, ಕಝಕಿಸ್ತಾನ್‌ 2024 (1.4 ಕಿಮೀ) 43ನೇ ಸ್ಥಾನ,


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.