ಸಾಧಕರ ಕಡೆಗಣನೆ, ಖೋ ಖೋ ಸಂಸ್ಥೆಯಿಂದ ಪ್ರತಿಭಟನೆ!
ಬೆಂಗಳೂರು: ವಿಶ್ವ ಖೋ ಖೋ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್ ಪಟ್ಟ ಗೆದ್ದಿರುವ ಭಾರತ ತಂಡದ ಆಟಗಾರರಾದ ಕರ್ನಾಟಕದ ಮೈಸೂರಿನ ಬಿ. ಚೈತ್ರಾ ಹಾಗೂ ಮಂಡ್ಯದ ಎಂ,ಕೆ. ಗೌತಮ್ ಅವರನ್ನು ಸೂಕ್ತ ಕ್ರಮದಲ್ಲಿ ಗೌರವಿಸದ ಕರ್ನಾಟಕ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆ ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. Karnataka State Kho Kho Association protesting against Karnataka Govt at Bengaluru Freedom Park.
ಈ ಪ್ರತಿಭಟನೆಯನ್ನು ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆಯ ಅಧ್ಯಕ್ಷ ಹಾಗೂ ಭಾರತೀಯ ಖೋ ಖೋ ಸಂಸ್ಥೆಯ ಉಪಾಧ್ಯಕ್ಷ ಲೋಕೇಶ್ವರ್ ಹಾಗೂ ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆಯ ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ಅವರು ಮುನ್ನಡೆಸಲಿದ್ದಾರೆ.
ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆಯ ಪದಾಧಿಕಾರಿಗಳು, ವಿವಿಧ ಜಿಲ್ಲಾ ಸಂಘಟನೆಗಳು ಹಾಗೂ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ರಾಜ್ಯ ಒಲಿಂಪಿಕ್ಸ್ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆಯೂ ರಾಜ್ಯ ಖೋ ಖೋ ಸಂಸ್ಥೆ ತನ್ನ ಅಸಮಧಾನವನ್ನು ವ್ಯಕ್ತಪಡಿಸಿದ್ದು, ಅದರ ಅಧ್ಯಕ್ಷರ ವಿರುದ್ಧವೂ ಪ್ರತಿಭಟನೆ ನಡೆಸಲಿದೆ.
ಖೋ ಖೋ ಆಟಗಾರರಿಗೆ ಆಗಿರುವ ಅನ್ಯಾಯ ಮಾತ್ರವಲ್ಲ ರಾಜ್ಯದಲ್ಲಿ ಕ್ರೀಡೆಗಳಿಗೆ ಆಗುತ್ತಿರುವ ಅನ್ಯಾಯ ಹಾಗೂ ಕ್ರೀಡಾ ನೀತಿಯನ್ನು ಬದಲಾಯಿಸುವಂತೆ ಸರಕಾರದ ಮೇಲೆ ಉತ್ತಡ ಹೇರುವುದು ಕೂಡ ಪ್ರತಿಭಟನೆಯ ಉದ್ದೇಶವಾಗಿದೆ.
ಫೆಬ್ರವರಿ 18, ಮಂಗಳುವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಸರಕಾರ ವಿಶ್ವಕಪ್ ವಿಜೇತ ಭಾರತ ಪುರುಷರ ತಂಡದಲ್ಲಿದ್ದ ಗೌತಮ್ ಹಾಗೂ ವನಿತೆಯರ ತಂಡದಲ್ಲಿ ಚೈತ್ರಾ ಅವರಿಗೆ ತಲಾ 5 ಲಕ್ಷ ರೂ. ನಗದು ಬಹುಮಾನವನ್ನು ಘೋಷಿಸಿತ್ತು. ಆದರೆ ಈ ಮೊತ್ತ ಬಹಳ ಕಡಿಮೆಯಾಯಿತು, ಮಾತ್ರವಲ್ಲ ಗೌರವಿಸಿದ ರೀತಿ ಸರಿಯಾಗಿಲ್ಲ ಎಂದು ಆಟಗಾರರು ತಮಗೆ ನೀಡಿರುವ ಮೊತ್ತವನ್ನು ಸರಕಾರಕ್ಕೆ ಹಿಂದಿರುಗಿಸಿದ್ದರು. ಸರಕಾರ ಈ ಬಗ್ಗೆ ನಂತರ ಯಾವುದೇ ಕ್ರಮವನ್ನು ಕೈಗೊಳ್ಳಲದ ಹಿನ್ನೆಲೆಯಲ್ಲಿ ಖೋ ಖೋ ಸಂಸ್ಥೆ ಈಗ ಪ್ರತಿಭಟನೆಗೆ ಮುಂದಾಗಿದೆ.
ಸರಕಾರಕ್ಕೆ ಮುಜುಗರ: ರಾಜ್ಯದಲ್ಲಿ ಕ್ರೀಡಾ ಸಾದಕರು ತಮಗೆ ನೀಡಿದ ನಗದು ಬಹುಮಾನವನ್ನು ಹಿಂದಿರುಗಿಸಿದ ಘಟನೆ ಇತ್ತೀಚಿನ ವರ್ಷಗಳಲ್ಲಿ ನಡೆದಿಲ್ಲ. ಇದು ದೇಶೀಯ ಕ್ರೀಡೆ, ಅದು ಕೂಡ ವಿಶ್ವಕಪ್. ಬೇರೆ ರಾಜ್ಯಗಳಲ್ಲಿ ಉತ್ತಮ ಬಹುಮಾನವನ್ನು ಘೋಷಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಮಾತ್ರ 5 ಲಕ್ಷ ರೂ ನೀಡಿದ ಸರಕಾರ ಸುಮ್ಮನಾಗಿದೆ. ಯುವಕರು ಕ್ರಿಕೆಟ್ ಆಟದ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿರುವಾಗ ದೇಶೀಯ ಕ್ರೀಡೆಗಳ ರಕ್ಷಣೆ ಮತ್ತು ಪ್ರೋತ್ಸಾಹ ಮಾಡಬೇಕಾಗಿರುವುದು ಸರಕಾರದ ಕರ್ತವ್ಯವಾಗಿರುತ್ತದೆ. ರಾಜ್ಯದಲ್ಲಿ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲು ಕ್ರೀಡಾ ಸಚಿವರು ಕೂಡ ಇಲ್ಲದಂತಾಗಿದೆ. ಮುಖ್ಯಮಂತ್ರಿಗಳಿಗೆ ಕೊಡುವ ಆಸಕ್ತಿ ಇದ್ದರೂ ಅವರಿಗೆ ಸಲಹೆ ನೀಡುತ್ತಿರುವವರು ಮುಖ್ಯಮಂತ್ರಿಗಳ ಹಾದಿ ತಪ್ಪಿಸುತ್ತಿರುವುದು ಸ್ಪಷ್ಟವಾಗಿದೆ.