ವಿದರ್ಭ ರಣಜಿ ಟ್ರೋಫಿ ಗೆದ್ದಾಗಲೆಲ್ಲ ಕನ್ನಡಿಗರ ಕೊಡುಗೆ ಇತ್ತು!
ಬೆಂಗಳೂರು: ವಿದರ್ಭ ರಣಜಿ ಟ್ರೋಫಿ ಇತಿಹಾಸದಲ್ಲಿ ಮೂರು ಬಾರಿ ಚಾಂಪಿಯನ್ ಪಟ್ಟ ಗೆದ್ದಿದೆ, ಒಂದು ಬಾರಿ ರನ್ನರ್ಸ್ ಅಪ್ ಗೌರವಕ್ಕೆ ಪಾತ್ರವಾಗಿದೆ. ಮೂರು ಬಾರಿ ಟ್ರೋಫಿ ಗೆದ್ದಾಗ ಹಾಗೂ ಒಮ್ಮೆ ರನ್ನರ್ಸ್ ಅಪ್ ಗೌರವಕ್ಕೆ ಪಾತ್ರವಾದಾಗ ಆ ತಂಡಕ್ಕೆ ನೆರವಾದುದು ಕರ್ನಾಟಕದ ಇಬ್ಬರು ಶ್ರೇಷ್ಠ ಆಟಗಾರರು ಎಂಬುದು ಗಮನಾರ್ಹ. ಅವರು ಗಣೇಶ್ ಸತೀಶ್ ಹಾಗೂ ಕರುಣ್ ನಾಯರ್. How Karnataka’s star players helped to Vidarbha to lift the Ranji Trophy three times.
2017-18 ಗಣೇಶ್ ಸತೀಶ್:
2017-18ರ ಋತುವಿನಲ್ಲಿ ವಿದರ್ಭ ತಂಡ ಡೆಲ್ಲಿ ವಿರುದ್ಧ ಜಯ ಗಳಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿತ್ತು. ಈ ಋತುವಿನಲ್ಲಿ ಕರ್ನಾಟಕ ಗಣೇಶ್ ಸತೀಶ್ ಅವರು ವಿದರ್ಭ ತಂಡವನ್ನು ಪ್ರತಿನಿಧಿಸುತ್ತಿದ್ದರು. ಗಣೇಶ್ ಸತೀಶ್ 9 ಪಂದ್ಯಗಳಲ್ಲಿ 12 ಇನ್ನಿಂಗ್ಸ್ ಆಡಿದ್ದರು. ಒಟ್ಟು 638 ರನ್ ಗಳಿಸಿರುವ ಗಣೇಶ್ ಸತೀಶ್ ಅವರ ವೈಯಕ್ತಿಕ ಗರಿಷ್ಠ ಮೊತ್ತ 164. 2 ಶತಕ, 3 ಅರ್ಧ ಶತಕ, 70 ಬೌಂಡರಿ ಹಾಗೂ 10 ಸಿಕ್ಸರ್… ಹೀಗೆ ಕರ್ನಾಟಕದಲ್ಲಿ ಅವಕಾಶ ಸಿಗದೆ ವಿದರ್ಭ ಪರ ಆಡಿದ ಗಣೇಶ್ ಸತೀಶ್ ತಮಗೆ ಅವಕಾಶ ನೀಡಿದ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
2018-19 ಗಣೇಶ್ ಸತೀಶ್:
2018-19ರ ಋತುವಿನ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ 78 ರನ್ ಅಂತರದಲ್ಲಿ ಜಯ ಗಳಿಸಿದ ವಿದರ್ಭ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಈ ಋತುವಿನಲ್ಲೂ ಗಭೇಶ್ ಸತೀಶ್ ಅವರು ತಂಡಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. 11 ಪಂದ್ಯಗಳಲ್ಲಿ 15 ಇನ್ನಿಂಗ್ಸ್ ಆಡಿರುವ ಗಣೇಶ್ ಸತೀಶ್ ಒಟ್ಟು 507 ರನ್ ಗಳಿಸಿದ್ದರು. 90 ಅವರ ವೈಯಕ್ತಿಕ ಗರಿಷ್ಠ ಮೊತ್ತ. 5 ಅರ್ಧ ಶತಕ, 60 ಬೌಂಡರಿ ಹಾಗೂ 5 ಸಿಕ್ಸರ್ ಮೂಲಕ ತಂಡಕ್ಕೆ ನೆರವಾಗಿದ್ದರು.
2023-24 ಕರುಣ್ ನಾಯರ್:
ಈ ಬಾರಿ ವಿದರ್ಭ ತಂಡ ಫೈನಲ್ ಪಂದ್ಯದಲ್ಲಿ ಮುಂಬೈಗೆ ಶರಣಾಯಿತು. ಆದರೆ ಫೈನಲ್ ತಲಪುವಲ್ಲಿ ಕರ್ನಾಟಕದ ಆಟಗಾರ ಕರುಣ್ ನಾಯರ್ ಅವರ ಪಾತ್ರ ಪ್ರಮುಖವಾಗಿತ್ತು. 10 ಪಂದ್ಯಗಳಲ್ಲಿ 17 ಇನ್ನಿಂಗ್ಸ್ ಆಡಿರುವ ಕರುಣ್ ನಾಯರ್, 690 ರನ್ ಗಳಿಸಿದ್ದರು. 129 ಅವರ ವೈಯಕ್ತಿಕ ಗರಿಷ್ಠ ಮೊತ್ತ. 2 ಶತಕ, 3 ಅರ್ಧ ಶತಕ, 88 ಬೌಂಡರಿ ಹಾಗೂ 1 ಸಿಕ್ಸರ್ ಕೊಡುಗೆ ವಿದರ್ಭ ತಂಡದ ಯಶಸ್ಸಿಗೆ ಕಾರಣವಾಗಿತ್ತು.
2024-25 ಕರುಣ್ ನಾಯರ್:
ಈ ಋತುವಿನಲ್ಲಿ ವಿದರ್ಭ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಕರುಣ್ ನಾಯರ್ ಪ್ರತಿಯೊಂದು ಪಂದ್ಯದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ತಂಡಕ್ಕೆ ನೆರವಾಗಿದ್ದಾರೆ. ಪ್ರಸಕ್ತ ಋತುವಿನಲ್ಲಿ ಒಟ್ಟು 9 ಶತಕಗಳನ್ನು (ಲಿಸ್ಟ್ ಎ ಸೇರಿ) ಗಳಿಸಿದ್ದಾರೆ. 9 ಪಂದ್ಯಗಳಲ್ಲಿ 16 ಇನ್ನಿಂಗ್ಸ್ ಆಡಿರುವ ಕರುಣ್ ನಾಯರ್ ಒಟ್ಟು 863 ರನ್ ಗಳಿಸಿರುತ್ತಾರೆ. ಫೈನಲ್ನಲ್ಲಿ ಗಳಿಸಿದ ಅಮೂಲ್ಯ 135 ರನ್ ಅವರ ಈ ಋತುವಿನ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು. 4 ಶತಕ, 2 ಅರ್ಧ ಶತಕ, 97 ಬೌಂಡರಿ ಹಾಗೂ 10 ಸಿಕ್ಸರ್ ಕರುಣ್ ನಾಯರ್ ಅವರದ್ದು ಈ ವರ್ಷದ ಕೊಡುಗೆ. ಫೈನಲ್ ಪಂದ್ಯದಲ್ಲಿ ವಿದರ್ಭ ಎರಡನೇ ಇನ್ನಿಂಗ್ಸ್ನಲ್ಲಿ 7 ರನ್ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಅಂಗಣಕ್ಕಿಳಿದ ಕರುಣ್ ನಾಯರ್ 135 ರನ್ ಗಳಿಸಿದರು. ಮೊದಲ ಇನ್ನಿಂಗ್ಸ್ನಲ್ಲೂ 86 ರನ್ ಗಳಿಸಿ ಕುಸಿದ ತಂಡಕ್ಕೆ ನೆರವಾಗಿದ್ದರು. ಹೀಗೆ ಫೈನಲ್ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಆದ್ದರಿಂದ ವಿದರ್ಭ ಕರ್ನಾಟಕದ ಈ ಇಬ್ಬರು ಕ್ರಿಕೆಟಿಗರನ್ನು ಸದಾ ಸ್ಮರಿಸಲೇಬೇಕಾಗುತ್ತದೆ.