Thursday, October 31, 2024

ಏಷ್ಯನ್ ಗೇಮ್ಸ್: ಶೂಟಿಂಗ್‌ನಲ್ಲಿ ಖಾತೆ ತೆರೆದ ಭಾರತ

ಏಜೆನ್ಸೀಸ್ ಜಕಾರ್ತ

ಏಷ್ಯನ್ ಗೇಮ್ಸ್ ಶೂಟಿಂಗ್‌ನ ಮಿಶ್ರ ಟೀಮ್ ವಿಭಾಗದಲ್ಲಿ  ಅಪೂರ್ವಿ ಚಾಂಡೇಲ ಹಾಗೂ ರವಿ ಕುಮಾರ್ ಕಂಚಿನ ಪದಕ ಗೆಲ್ಲುವುದರೊಂದಿಗೆ ಭಾರತ ಜಕಾರ್ತದಲ್ಲಿ ಪದಕದ ಖಾತೆ ತೆರೆದಿದೆ.

ಆದರೆ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ  ಪದಕ ಗೆದ್ದಿರು ಕುಸ್ತಿಪಟು ಸುಶೀಲ್ ಕುಮಾರ್ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದಾರೆ. ಚಿನ್ನದ ಪದಕದ ಸುತ್ತು ತೀರ್ಮಾನವಾಗುವುದಕ್ಕೆ ಮೊದಲೇ ರವಿ ಹಾಗೂ ಅಪೂರ್ವಿ ನಿರಾಸೆಯ ಪ್ರದರ್ಶನ ತೋರಿದರು. ೪೨೯.೯ ಅಂಕ ಗಳಿಸುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

 

ಪುರುಷರ ಈಜಿನಲ್ಲಿ ಸಜ್ಜನ್ ಪ್ರಕಾಶ್ ೨೦೦ ಮೀ. ಬಟರ್ ಫ್ಲೈ ವಿಭಾಗದಲ್ಲಿ  ೧ ನಿಮಿಷ ೫೮.೧೨ ಸೆಕೆಂಡುಗಳಲ್ಲಿ ಗುರಿ ತಲುಪಿ  ಫೈನಲ್  ಅರ್ಹತೆ ಪಡೆದರು. ಕರ್ನಾಟಕದ ಶ್ರೀ ಹರಿ ನಟರಾಜ್ ಕೂಡ ೧೦೦ ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ಫೈನಲ್ ತಲುಪಿದ್ದಾರೆ.
 ಶೂಟಿಂಗ್‌ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಮನು ಬಾಕರ್ ಹಾಗೂ ಅಭಿಷೇಕ್ ವರ್ಮಾ ಜೋಡಿ ೧೦ ಮೀ. ಮಿಶ್ರ ಏರ್ ಪಿಸ್ತೂಲ್‌ನಲ್ಲಿ ಸೋಲನುಭವಿಸಿದ್ದಾರೆ.
ಬಾಸ್ಕೆಟ್‌ಬಾಲ್‌ನಲ್ಲಿ  ಭಾರತ ಮಹಿಳೆಯರ ತಂಡ ಕಜಕಿಸ್ತಾನದ ವಿರುದ್ಧ ೬೧-೭೯ ಅಂತರದಲ್ಲಿ ಸೋಲನುಭವಿಸಿತು.
ನಿರಾಸೆ ಮೂಡಿಸಿದ ಸುಶೀಲ್ ಕುಮಾರ್
 ಭಾರತಕ್ಕೆ ಕುಸ್ತಿಯಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಒಲಿಂಪಿಯನ್ ಸುಶೀಲ್ ಕುಮಾರ್ ಮೊದಲ ಸುತ್ತಿನಲ್ಲೇ ಬೆಹರಿನ್‌ನ ಬಟಿರೋವ್ ಆಡಮ್ ವಿರುದ್ಧ ೫-೩ ಅಂತರದಲ್ಲಿ ಸೋಲನು‘ವಿಸಿ ನಿರಾಸೆ ಮೂಡಿಸಿದರು. ಆದರೆ ಬಜರಂಗ್ ಪೂನಿಯಾ ಉಜ್ಬೆಕಿಸ್ತಾನದ ಸಿರೋಜಿದ್ದೀನ್ ವಿರುದ್ಧ ೧೩-೩ ಅಂತರದಲ್ಲಿ ಗೆದ್ದು ಸೆಮಿ ಫೈನಲ್ ಪ್ರವೇಶಿಸಿದ್ದಾರೆ.
ಬ್ಯಾಡ್ಮಿಂಟನ್‌ನಲ್ಲಿ ಮಾಲ್ದೀವ್ಸ್ ವಿರುದ್ಧ ೩-೦ ಅಂತರದಲ್ಲಿ ಗೆದ್ದಿರುವ ಭಾರತ ತಂಡ ಕ್ವಾರ್ಟರ್ ಫೈನಲ್ ತಲುಪಿದೆ. ಟೆನಿಸ್‌ನಲ್ಲಿ ದಿವಿಜ್ ಶರಣ್ ಹಾಗೂ ಕರ್ಮಾನ್ ಕೌರ್ ಫಿಲಿಪಿನ್ಸ್ ಜೋಡಿಯ ವಿರುದ್ಧ ೬-೪, ೬-೪ ಅಂತರದಲ್ಲಿ ಗೆದ್ದು ಮುನ್ನಡೆದಿದೆ.

Related Articles