ಸ್ಪೋರ್ಟ್ಸ್ ಮೇಲ್ ವರದಿ
ಕೊಡಗಿನಲ್ಲಿ ನೆರೆಯ ಅನಾಹುತ ಹೆಚ್ಚುತ್ತಿದೆ…ಪರಿಹಾರ ಕಾರ್ಯ ವೇಗದಲ್ಲಿ ನಡೆಯುತ್ತಿದೆ… ಕನ್ನಡಿಗರು ಒಂದಾಗಿ ನಮ್ಮ ಕೊಡಗಿನ ಕೂಗಿಗೆ ಸ್ಪಂದಿಸುತ್ತಿದ್ದಾರೆ. ಆದರೆ ಜಕಾರ್ತದಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಹಾಕಿ ತಂಡವನ್ನು ಪ್ರತಿನಿಧಿಸುತ್ತಿರುವ ಎಸ್.ವಿ. ಸುನಿಲ್ ಮಾತ್ರ ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ.
ಕುಶಾಲನಗರದ ನಿವಾಸಿ ಸುನಿಲ್ ಕೊಡಗಿನಲ್ಲಿ ಸಂಭವಿಸಿರುವ ದುಂರತದ ವೀಡಿಯೋಗಳನ್ನು ನೋಡಿ ಆಂತಕಕ್ಕೀಡಾಗಿದ್ದಾರೆ. ಅವರ ನೋವಿಗಾಗಿ ಮನ ಮಿಡಿಯುತ್ತಿದ್ದೆ ಎಂದು ಸ್ಪೋರ್ಟ್ಸ್ ಮೇಲ್‌ಗೆ ತನ್ನ ಪುಟ್ಟ ಬರಹದ ಮೂಲಕ ನೋವನ್ನು ತೋಡಿಕೊಂಡಿದ್ದಾರೆ. ಅಂಗಣದಲ್ಲಿ ಆಡುವಾಗ ತಾಯ್ನಾಡಿನ ನೆನಪು ಕಾಡುತ್ತದೆ. ನಮ್ಮವರ ಬದುಕು ಏನಾಯಿತೋ ಎಂಬ ನೋವು ಹೆಜ್ಜೆ ಹೆಜ್ಜೆಗೂ ಆವರಿಸುತ್ತಿದೆ ಎಂದಿದ್ದಾರೆ.
’ಕಳೆದ ಮೂರು ದಿನಗಳಿಂದ ಅಭ್ಯಾಸವೇ ಸರಿಯಾಗಿ ಆಗುತ್ತಿಲ್ಲ. ವಾಟ್ಸ್‌ಅಪ್‌ನ ವೀಡಿಯೋ ಹಾಗೂ ಚಿತ್ರಗಳನ್ನು ಕಂಡಾಗ ಮನಸ್ಸು ಮರುಗುತ್ತಿದೆ. ಹೋಗಿ ನೆರೆ ಸಂತೃಸ್ತರ ನೆರವಿಗೆ ಧಾವಿಸಬೇಕು ಎಂದೆನಿಸುತ್ತಿದೆ. ಆದರೆ ಇಲ್ಲಿ ದೇಶಕ್ಕಾಗಿ ಪದಕ ಗೆಲ್ಲುವ ಗುರಿ ಇದೆ. ಕೊಡಗು ವೀರ ಯೋಧರ ಬೀಡು, ಅಲ್ಲಿರುವ ಪ್ರತಿಯೊಬ್ಬರಲ್ಲೂ ಹೋರಾಟದ ಗುಣ ಇದೆ. ಅವರು ಈ ಪ್ರಾಕೃತಿಕ ವಿಕೋಪದಿಂದ ಮುಕ್ತರಾಗಿ ಹೊಸ ಬದುಕಕನ್ನು ಕಾಣುತ್ತಾರೆಂಬ ನಂಬಿಕೆ ಇದೆ. ಮತ್ತೆ ಹೊಸ ಕೊಡಗು ನಿರ್ಮಾಣವಾಗುತ್ತದೆ ಎಂಬ ನಂಬಿಕೆ ನನಗಿದೆ. ಪ್ರತಿಯೊಬ್ಬರೂ ಸುಕ್ಷೇಮವಾಗಿರಲಿ ಎಂಬುದು ನನ್ನ ಹಾರೈಕೆ ಹಾಗೂ ದೇವರಲ್ಲಿ ಪ್ರಾರ್ಥನೆ. ಕೊಡಗಿಗಾಗಿ ಎಲ್ಲರೂ ಸಹಾಯ ಮಾಡಿ ಎಂದು ಈ ಮೂಲಕ ಕೋರಿಕೆ,’ ಎಂದು ಸುನಿಲ್ ಕೇಳಿಕೊಂಡಿದ್ದಾರೆ.
ಸುನಿಲ್ ಅವರೊಂದಿಗೆ ಭಾರತ ತಂಡದ ನಾಯಕ ಶ್ರೀಜೇಶ್,ಸರ್ದಾರ್ ಸಿಂಗ್, ಮನ್‌ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್ ಸೇರಿದಂತೆ ಭಾರತ ಹಾಕಿ ತಂಡದ ಎಲ್ಲ ಆಟಗಾರರು ಕೊಡಗಿನ ಜನರಿಗಾಗಿ ಪ್ರಾರ್ಥನೆ ಮಾಡಿದ್ದಾರೆ.
ಸುನಿಲ್ ಭಾರತ ಹಾಕಿ ತಂಡದಲ್ಲಿ ಆಡುವಾಗ ಹಲವು ಬಾರಿ ಕಷ್ಟದ ಸಮಯಗಳನ್ನು ಎದುರಿಸಿದ್ದಾರೆ. ಅಜ್ಲಾನ್ ಶಾ ಹಾಕಿ ಚಾಂಪಿಯನ್‌ಷಿಪ್ ಆಡುವಾಗ ತಂದೆ ತೀರಿಕೊಂಡರು ಆದರೂ ಆಟ ಮುಗಿದ ಮೇಲೆಯೇ ಅಂಗಣದಿಂದ ಹೊರ ನಡೆದು ಬಂದರು. ಇನ್ನೊಮ್ಮೆ ಜಾಗತಿಕ ಮಟ್ಟದ ಪಂದ್ಯವನ್ನಾಡುವಾಗ ಆತ್ಮೀಯ ಬಂಧುವೊಬ್ಬರು ತೀರಿಕೊಂಡರು. ಈಗ ತನ್ನ ಜಿಲ್ಲೆಯೇ ನೀರಿನಿಂದ ಆವೃತವಾಗಿರುವಾಗ ಅಲ್ಲಿ ಆಡಬೇಕಾದ ಸಂದಿಗ್ಧತೆ.
ಕೇರಳದಿಂದ ೩೬ ಕ್ರೀಡಾಪಟುಗಳು
ಮಳೆಯಿಂದ ಮುಳುಗಿರುವ ನೆರೆಯ ಕೇರಳ ರಾಜ್ಯದಿಂದಲೂ ೩೬ ಕ್ರೀಡಾಪಟುಗಳು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ. ಅವರು ಕೂಡ ತಮ್ಮ ರಾಜ್ಯದ ಕಷ್ಟವನ್ನು ನೆನೆದು ಆತಂಕದಲ್ಲಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕಾಗಿದೆ.