Friday, November 22, 2024

ಕೋಟದ ವೇಗಕ್ಕೆ ಮಗುಚಿದ ದಕ್ಷಿಣ ಆಫ್ರಿಕಾ!

ಸ್ಪೋರ್ಟ್ಸ್ ಮೇಲ್ ವರದಿ

ದಕ್ಷಿಣ ಆಫ್ರಿಕಾದ ಸೀಶೆಲ್ಸ್‌ನಲ್ಲಿ ನೆಲೆಸಿರುವ ಕೋಟ ಪಡುಕರೆಯ ಯುವಕನೊಬ್ಬ ದಕ್ಷಿಣ ಆಫ್ರಿಕಾದ ಟಿ೨೦ ಚಾಂಪಿಯನ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯವೊಂದರಲ್ಲಿ 6 ವಿಕೆಟ್ ಗಳಿಸಿದನೆಂದರೆ ನಂಬುತ್ತೀರಾ? ನಂಬಲೇ ಬೇಕು ಏಕೆಂದರೆ ಆತ ಕೆಲಸ ಬೇರೆಯಾಗಿದ್ದರೂ ಹವ್ಯಾಸಿ ಕ್ರಿಕೆಟಿಗ. ಉತ್ತಮ ಆಲ್ರೌಂಡರ್ ….ಉಡುಪಿ ಜಿಲ್ಲೆಯ ಕೋಟ ಪಡುಕರೆಯ ಸಂಜಯ ಕುಂದರ್.

ಆರು ಬಾರಿ ರಾಮ್ ಸ್ಲ್ಯಾಮ್ ಟಿ20 ಚಾಂಪಿಯನ್ತಂtಡ ಟೈಟಾನ್ಸ್‌ಗೆ ಮಾಜಿ ಕ್ರಿಕೆಟಿಗ ಮಾರ್ಕ್ ಬೌಷರ್ ತರಬೇತಿ ನೀಡುತ್ತಿದ್ದಾರೆ. ಮುಂದಿನ ತಿಂಗಳು ಅಬುದಾಬಿಯಲ್ಲಿ ನಡೆಯಲಿರುವ ಆಹ್ವಾನಿತ ಟಿ೨೦ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ಮುನ್ನ ಟೈಟಾನ್ಸ್ ತಂಡ ದ್ವೀಪರಾಷ್ಟ್ರ ಸೀಶೆಲ್ಸ್‌ಗೆ ಆಗಮಿಸಿತ್ತು. ಶಾಲೆಗಳಲ್ಲಿ ಕ್ರಿಕೆಟ್ ಅರಿವು ಮೂಡಿಸುವುದು ತಂಡದ ಉದ್ದೇಶವಾಗಿತ್ತು. ಅದೇ ರೀತಿ ಗ್ರ್ಯಾನ್ ಕಾಜ್ ಕಿಂಗ್ಸ್ ವಿರುದ್ಧ ಪಂದ್ಯವನ್ನಾಡುವುದು ಯೋಜನೆಯಾಗಿತ್ತು.
ಉಡುಪಿ ಜಿಲ್ಲೆಯ ಕೋಟದ ಸಂಜಯ್ ಕುಂದರ್ ಗ್ರ್ಯಾನ್ ಕಾಜ್ ಕಿಂಗ್ಸ್  ತಂಡದ ಆಟಗಾರರಾಗಿರುತ್ತಾರೆ. ಅದೇ ರೀತಿ ಸ್ಥಳೀಯ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಈ ತಂಡದ  ವಿಶೇಷವೆಂದರೆ  ಈ ಕ್ಲಬ್‌ನಲ್ಲಿ ಆಡುತ್ತಿರುವ ಹೆಚ್ಚಿನ ಯುವಕರು ಭಾರತೀಯರು. ಸಂಜಯ್ ಅವರ ಕಿರಿಯ ಸೋಹದರ  ಸಂದೇಶ್ ಹಾಗೂ ಹಿರಿಯ ಸಹೋದರ ಸಂತೋಷ್ ಕೂಡ ಈ ತಂಡದಲ್ಲಿ ಮಿಂಚಿದ ಆಟಗಾರರು.
ಟೈಟಾನ್ ಅತ್ಯಂತ ಬಲಿಷ್ಠ ತಂಡ ಕ್ವಿಂಟನ್ ಡೆ ಕಾಕ್, ಮೋರ್ನೆ ಮಾರ್ಕೆಲ್,  ಎಬಿ ಡಿವಿರಿಯರ್ಸ್, ಫಾಫ್  ಡು ಪ್ಲೆಸಿಸ್ ಅವರಿಂದ ಕೂಡಿದ ತಂಡ. ಆದರೆ ಪ್ಲೆಸಿಸ್ ಹಾಗೂ ಡಿವಿಲಿಯರ್ಸ್ ಸೀಶೆಲ್ಸ್ ಪಂದ್ಯಕ್ಕೆ ಗೈರಾಗಿದ್ದರು.  ಹೆನ್ರಿ ಕ್ಲಾಸೆನ್, ಟಿ. ಮೊರೆಕಿ, ಮೋರ್ನೆ ಮಾರ್ಕೆಲ್, ಅಲ್ಬೆ ಮಾರ್ಕೆಲ್, ಆಲ್ಫ್ರೆಡ್ ಮಥೋವ, ಲುಂಗಿ ಎನ್‌ಗಿಡಿ, ಕ್ರಿಸ್ ಮೊರಿಸ್ ಹಾಗೂ ಟೋನಿ ಜಾರ್ಜ್  ತಂಡದ ಪ್ರಮುಖ ಆಟಗಾರರು.
ಮೊದಲು ಬ್ಯಾಟಿಂಗ್ ಮಾಡಿದ ಟಾಟಾನ್ ತಂಡ ೨೦ ಓವರ್‌ಗಳಲ್ಲಿ  191 ರನ್ ಗಳಿಸಿತು.
ಸಂಜಯ್ ಕುಂದರ್4 ಓವರ್‌ಗಳಲ್ಲಿ 14 ರನ್ ನೀಡಿ 6 ವಿಕೆಟ್ ಗಳಿಸಿದರು. ರಿವಾಲ್ಡೋ ಮೂನ್‌ಸ್ಯಾಮಿ, ಆಂಡ್ರೆ ಅಗ್ತಾಂಗೆಲೋವ್, ಅಲ್ಪೆ ಮಾರ್ಕೆಲ್, ಗ್ರ್ಯಾಂಟ್ ಥಾಮ್ಸನ್, ಟಿ. ಮೊರೆಕಿ, ಹಾಗೂ ಲುಂಗಿ ಎನ್‌ಗಿಡಿ ಅವರು ಸಂಜಯ್ ದಾಳಿಗೆ ವಿಕೆಟ್ ಒಪ್ಪಿಸಿದರು. ಬ್ಯಾಟಿಂಗ್‌ನಲ್ಲೂ ಮಿಂಚಿದ ಸಂಜಯ್ 20 ರನ್ ಗಳಿಸಿ ತಂಡಕ್ಕೆ ನೆರವಾದರು.  ಅಭ್ಯಾಸದ ಪಂದ್ಯವಾಗಿರಬಹುದು, ಆದರೆ ಅಂತಾರಾಷ್ಟ್ರೀಯ ಆಟಗಾರರ ವಿಕೆಟ್ ಗಳಿಸುವುದು  ಹೆಮ್ಮೆಯ ಸಂಗತಿ.
ಸೀಶೆಲ್ಸ್‌ನ ಮಾಹೆಯಿಂದ  ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಸಂಜಯ್, ಮನೆಯಿಂದ ದೂರ ಇದ್ದ ನಾವು ಬಿಡುವಿನ ಸಮಯದಲ್ಲಿ ಕ್ರಿಕೆಟ್ ಆಡುತ್ತೇವೆ. ಇಲ್ಲಿನ ಕ್ಲಬ್‌ಗಳಲ್ಲಿ ಆಡಿದ ಅನುಭವವಿದೆ. ದಕ್ಷಿಣ ಆಫ್ರಿಕಾ ತಂಡದ ಅನುಭವಿ ಆಟಗಾರರೇ ಟೈಟಾನ್ಸ್ ತಂಡದಲ್ಲಿದ್ದಾರೆ. ಆರು ಬಾರಿ ಚಾಂಪಿಯನ್ ತಂಡ ಕೂಡ. ಆ ತಂಡದ ವಿರುದ್ಧ ೬ ವಿಕೆಟ್ ಸಿಕ್ಕಿರುವುದು ಖುಷಿ ಕೊಟ್ಟಿದೆ. ನಾವೆಲ್ಲ ಹವ್ಯಾಸಿ ಆಟಗಾರರು. ಏಕೆಂದರೆ ನಮಗೆ ಇಲ್ಲಿ ಉದ್ಯೋಗ ನೋಡಿಕೊಳ್ಳಬೇಕು ಎಂದು ನುಡಿದರು.

Related Articles