ಸೋಮಶೇಖರ್ ಪಡುಕರೆ
ಒಲಿಂಪಿಕ್ಸ್ ಹಾಕಿಯಲ್ಲಿ ಭಾರತದ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಹುಟ್ಟುಹಬ್ಬ ಇಂದು. ದೇಶದೆಲ್ಲೆಡೆ ಈ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ.
ಆಗಸ್ಟ್ ೨೯ ರಾಷ್ಟ್ರೀಯ ಕ್ರೀಡಾ ದಿನ. ಧ್ಯಾನ್‌ಚಂದ್ ಅವರಿಗೆ ಭಾರತ ರತ್ನ ನೀಡಬೇಕೆಂದು ಹಲವು ವರ್ಷಗಳಿಂದ ಕ್ರೀಡಾ ಸಾಧಕರು ಬೇಡಿಕೆ ನೀಡುತ್ತಿದ್ದಾರೆ. ಆದರೆ ಸಚಿನ್ ತೆಂಡೂಲ್ಕರ್ ಅವರಿಗೆ ನೀಡಿ ನಾವು ಕೈ ತೊಳೆದುಕೊಂಡಿದ್ದೇವೆ.
ದೇಹಕ್ಕೆ ರಕ್ಷಾ ಕವಚ ಇಲ್ಲದೆ, ಆಧುನಿಕ ಟರ್ಫ್ ಇಲ್ಲದೆ ಜರ್ಮನಿಯ ದೊರೆ ಹಿಟ್ಲರ್ ಅವರನ್ನೇ ನಿಬ್ಬೆರಗುಗೊಳಿಸಿದ ಧ್ಯಾನ್‌ಚಂದ್ ಅವರಿಗಿಂತ ಸಚಿನ್ ಶ್ರೇಷ್ಠರಾದುದು ನಮಗೆ ಈಗಲೂ ಅಚ್ಚರಿಯನ್ನುಂಟು ಮಾಡುತ್ತಿದೆ. ರಾಜಕೀಯ ಪಕ್ಷಗಳಿಗೆ ಮೈಲೇಜ್ ತೆಗೆದುಕೊಳ್ಳುವರಿಗೆ ಜೀವಂತ ಇರುವವರು ಬೇಕೇ ವಿನಃ ನಮ್ಮನ್ನು ಅಗಲಿದವರ ಅಗತ್ಯವಿಲ್ಲ. ಇವತ್ತು ಮಾರುಕಟ್ಟೆಯಲ್ಲಿ ಯಾವುದಕ್ಕೆ ಹೆಚ್ಚು ಪ್ರಚಾರ ಸಿಗುತ್ತಿದೆಯೋ ಆ ವಸ್ತು ಉತ್ತಮ ವಸ್ತು ಎಂದು ಬೆಲೆ ಕೊಡುವ ನಾವು ಸಚಿನ್ ತೆಂಡೂಲ್ಕರ್ ಹಾಗೂ ಧ್ಯಾನ್‌ಚಂದ್‌ಗೆ ಅವರಲ್ಲಿ ಯಾರಿಗೆ ಭಾರತ ರತ್ನ ನೀಡಬೇಕೆಂಬ ತೀರ್ಮಾನ ಕೈಗೊಳ್ಳುವಾಗ ಇದೇ ನಿರ್ಧಾರ ಕೈಗೊಂಡೆವು. ಆದರ್ಶಗಳು ನಮ್ಮಲ್ಲಿ ಯಾವಾಗಲೂ ಇರಬೇಕು. ಅದು ಹಣ ಇದ್ದಾಗ ಒಂದು ಅಥವಾ ಹಣ ಇಲ್ಲದಾಗ ಒಂದು ಆದರ್ಶ ಇರಬಾರದು.
ಸಚಿನ್ ಇನ್ನೂ ೫೦ ವರ್ಷ ತಲುಪಿಲ್ಲ. ಆದರೆ ಧ್ಯಾನ್ ಚಂದ್ ನಮ್ಮ ಮುಂದಿಲ್ಲ. ” ನನಗೆ ಈಗ ಬೇಡ.ಆ ಪ್ರಶಸ್ತಿಯನ್ನು ಧ್ಯಾನ್‌ಚಂದ್ ಅವರಿಗೆ ನೀಡಿ ಎಂದು ಇಡೀ ದೇಶವೇ ಒತ್ತಾಯಿಸುತ್ತಿರುವಾಗ ಈ ಬಾರಿ ಆ ಗೌರವವನ್ನು ಧ್ಯಾನ್‌ಚಂದ್ ಅವರಿಗೆ ನೀಡಿ ನನಗಿನ್ನೂ ಕಾಲಾವಕಾಶ ಇದೆ ಎಂದು ಸಚಿನ್ ಹೇಳಿರುತ್ತಿದ್ದರೆ, ಅವರು ನಿಜವಾದ ಭಾರತ ರತ್ನ ಎನಿಸಿಕೊಳ್ಳುತ್ತಿದ್ದರು. ಪ್ರಶಸ್ತಿಗಾಗಿ ಇನ್ನೊಬ್ಬರ ಕೈ ಕಾಲು ಹಿಡಿಯುವ ಈ ಕಾಲದಲ್ಲಿ ಬಂದದನ್ನು ಅಲ್ಲಗಳೆಯುವ ಮನಸ್ಸುಗಳು ಬಹಳ ವಿರಳ. ಧ್ಯಾನ್‌ಚಂದ್ ನಮ್ಮ ಮುಂದೆ ಇಲ್ಲದಿರಬಹುದು. ಆದರೆ ಆಗಸದ ಚಂದಿರನಂತೆ ನಮ್ಮನ್ನು ನೆನಪಿಸುತ್ತಾ ಮುಂದೆ ಸಾಗುತ್ತಾರೆ. ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿ ನಮ್ಮ ಆಟದ ಅಂಗಣದಲ್ಲಿ ಹಸಿರಾಗಿರುತ್ತಾರೆ.