Thursday, November 21, 2024

ಬದುಕು ನೀಡಿದ ಆಳ್ವಾ, ಅಮ್ಮನಿಗೆ ಪದಕ ಅರ್ಪಣೆ

ಸೋಮಶೇಖರ್ ಪಡುಕರೆ ಬೆಂಗಳೂರು

ಏಷ್ಯನ್ ಗೇಮ್ಸ್‌ನಲ್ಲಿ ಎರಡು ಬೆಳ್ಳಿಯ ಪದಕ ಗೆದ್ದ ಓಟಗಾರ ಧಾರುಣ್ ಅಯ್ಯಸ್ವಾಮಿ ತಾವು ಗೆದ್ದಿರುವ ಪದಕಗಳನ್ನು ತಮ್ಮ ಕ್ರೀಡಾ ಬದುಕಿಗೆ ನೆರವು  ನೀಡಿದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್‌ಆಳ್ವಾ ಹಾಗೂ ಅಮ್ಮ ಕೆ. ಪೂಂಗುಡಿ ಅವರಿಗೆ ಅರ್ಪಣೆ ಎಂದು ಹೇಳಿದ್ದಾರೆ.

ಜಕಾರ್ತದಿಂದ ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಧಾರುಣ್, ಚಿಕ್ಕಂದಿನಲ್ಲೇ ಅಪ್ಪ ಅಯ್ಯಸ್ವಾಮಿ ತೀರಿಕೊಂಡರು, ನನ್ನನ್ನು ಅಮ್ಮ ಸಾಕಿ ಸಲಹಿದರು. ಅವರು ಶಿಕ್ಷಕಿಯಾಗಿದ್ದುಕೊಂಡು ನನ್ನಲ್ಲಿರುವ ಪ್ರತಿಭೆಗೆ ತಕ್ಕ ಪ್ರೋತ್ಸಾಹ ನೀಡುತ್ತ ಬಂದರು. ನಂತರ ಕಾಲೇಜು ದಿನಗಳಲ್ಲಿ ಆಳ್ವಾ ಸರ್ ಎಲ್ಲ ರೀತಿಯ ನೆರವನ್ನು ನೀಡಿದರು. ನನಗೆ ಒಂದು ಪೈಸೆಯನ್ನೂ ಕೈಯಿಂದ ಖರ್ಚು ಮಾಡಲು ಆಳ್ವಾ ಸರ್ ಬಿಡಲಿಲ್ಲ. ಅವರೇ ಎಲ್ಲವನ್ನೂ ನೋಡಿಕೊಂಡು ತಂದೆಯ ಸ್ಥಾನವನ್ನು ತುಂಬಿದರು, ಎಂದು ಧಾರುಣ್ ಅತ್ಯಂತ ಭಾವುಕರಾಗಿ ನುಡಿದರು.

ಆಳ್ವಾಸ್ ಅದು ಕ್ರೀಡಾ ವಿವಿ

ಆಳ್ವಾಸ್‌ನಲ್ಲಿರುವ ಕ್ರೀಡಾ ಸೌಲಭ್ಯ  ಹಾಗೂ ಪ್ರೋತ್ಸಾಹದ ಬಗ್ಗೆ ಮಾತನಾಡಿದ ಧಾರುಣ್, ಅದೊಂದು ಕ್ರೀಡಾ ವಿಶ್ವವಿದ್ಯಾಲಯ ಇದ್ದಂತೆ. ದೇಶದ ಯಾವುದೇ ಕಾಲೇಜು ಅಥವಾ ವಿಶ್ವವಿದ್ಯಾಲಯ ಈ ರೀತಿಯಲ್ಲಿ ಕ್ರೀಡಾಪಟುಗಳಿಗೆ ಉಚಿತವಾದ ಶಿಕ್ಷಣ ಅಥವಾ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವುದಿಲ್ಲ. ಸ್ವರ್ಧೆ ಇಲ್ಲದಿದ್ದರೂ ಖಾತೆಗೆ ಹಣ ಹಾಕಿ ಆರೋಗ್ಯ ಹಾಗೂ ಇತರ ಸೌಲಭ್ಯಗಳ ಬಗ್ಗೆ ಆಳ್ವಾ ಅವರು ವಿಚಾರಿಸುತ್ತಾರೆ. ಇದರಲ್ಲಿ ಒಂದು ಪದಕ ಆಳ್ವಾ ಅವರಿಗೆ ಒಂದು ಪದಕ ಅಮ್ಮನಿಗೆ ಅರ್ಪಣೆ ಎಂದರು.

ಖೋ ಖೋ ಆಟದಿಂದ ಓಟಕ್ಕೆ

ತಮಿಳುನಾಡಿನ ತಿರುಪುರ ನಿವಾಸಿ ಥಾರುಣ್‌ಗೆ ಕಾಲೇಜು ಶಿಕ್ಷಣಕ್ಕೆ ನೆರವಾದವರು ಡಾ. ಮೋಹನ್ ಆಳ್ವಾ. ಓಟ ಆರಂಭಿಸುವುದಕ್ಕೆ ಮುನ್ನ ಧಾರುಣ್ ಚಿಕ್ಕಂದಿನದಲ್ಲಿ ಖೋ ಖೋ ಆಟವನ್ನು ಆಡುತ್ತಿದ್ದರು. ನಂತರ ಎಂಟನೇ ತರಗತಿಯಲ್ಲಿ ಓಟದಲ್ಲಿ ತೊಡಗಿಕೊಂಡು ರಾಜ್ಯಮಟ್ಟದಲ್ಲಿ ಮಿಂಚಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು. ಈ ವರ್ಷದ ಆರಂಭದಲ್ಲಿ ಟಾಯ್ಫಾಡ್‌ನಿಂದ ಬಳಲುತ್ತಿದ್ದರೂ ಪಟಿಯಾಲದಲ್ಲಿ  ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡು ದಾಖಲೆಯೊಂದಿಗೆ ಚಿನ್ನಗೆದ್ದಿರುವುದು ಧಾರುಣ್ ಅವರ ಕ್ರೀಡಾ ಸ್ಫೂರ್ತಿಗೆ ಉತ್ತಮ ಉದಾಹರಣೆ.
೪೦೦ ಮೀ. ಹರ್ಡಲ್ಸ್ ಹಾಗೂ ೪೦೦ ಮೀ. ರಿಲೇಯಲ್ಲಿ ಧಾರುಣ್ ಬೆಳ್ಳಿಯ ಸಾಧನೆ ಮಾಡಿರುತ್ತಾರೆ.
ಧಾರುಣ್ ಅವರ ಸಾಧನೆಗೆ ತಮಿಳುನಾಡು ಸರಕಾರ ಪದಕವೊಂದಕ್ಕೆ ತಲಾ ೩೦ ಲಕ್ಷ ರೂ. ಬಹುಮಾನ ಪ್ರಕಟಿಸಿದೆ. ಇದರೊಂದಿಗೆ ಎರಡು ಪದಕಗಳ ಸಾಧನೆಗೆ ಧಾರುಣ್ ಅವರು ರಾಜ್ಯ ಸರಕಾರದಿಂದ  ೬೦ ಲಕ್ಷ ರೂ. ನಗದು ಬಹುಮಾನ ಪಡೆಯಲಿದ್ದಾರೆ. ಮುಂದಿನ ಏಷ್ಯನ್ ಚಾಂಪಿಯನ್‌ಷಿಪ್‌ಹಾಗೂ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗಳಲ್ಲಿ ಉತ್ತಮ ಪ್ರದರ್ಶನ ತೋರುವ ಗುರಿ ಹೊಂದಿರುವುದಾಗಿ ಧಾರುಣ್ ಹೇಳಿದ್ದಾರೆ.

ರಾಜ್ಯವರ್ಧನ ಸಿಂಗ್ ರಾಥೋಡ್ 

ಈಗಾಗಲೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಕಳೆದ ಬಾರಿಗಿಂತ ಹೆಚ್ಚಿನ ಪದಕಗಳನ್ನು ಗೆದ್ದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕ್ರೀಡಾಪಟುವೇ ಕ್ರೀಡಾ ಸಚಿವರಾಗಿರುವುದು ಮುಖ್ಯ  ಎಂದು ಧಾರುಣ್ ಹೇಳಿದ್ದಾರೆ. ರಾಜ್ಯವರ್ಧನ  ಸಿಂಗ್ ರಾಥೋಡ್ ಅವರು ಒಲಿಂಪಿಕ್ಸ್ ಪದಕ ವಿಜೇತ ಶೂಟರ್. ಅವರಿಗೆ ಕ್ರೀಡಾಪಟುಗಳ ಕಷ್ಟಗಳ ಬಗ್ಗೆ ಚೆನ್ನಾಗಿ ಅರಿವಿದೆ. ಕ್ರೀಡಾಪಟುಗಳ ಅಗತ್ಯಗಳ ಬಗ್ಗೆ ಚೆನ್ನಾಗಿ ಗೊತ್ತಿದೆ. ಇದರಿಂದಾಗಿ ಅವರು ಕ್ರೀಡಾಪಟುಗಳಿಗೆ ಅಗತ್ಯವಿರುವ ಮೂಲಭೂತ  ಸೌಕರ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದರು. ಅವರಿಗೆ ಅಗತ್ಯಕ್ಕೆ ಬೇಕಾಗುವ ತರಬೇತಿಗೆ ಹಣವನ್ನು ಮೀಸಲಿಟ್ಟರು. ವಿದೇಶಗಳಲ್ಲಿ ತರಬೇತಿ ಪಡೆಯಲು ನೆರವಾದರು. ಇದರಿಂದಾಗಿ ಪದಕಗಳ ಸಂಖ್ಯೆಯಲ್ಲಿ ಹೆಚ್ಚಾಗಲು ಕಾರಣ ಎಂದು ಧಾರುಣ್ ಹೇಳಿದರು.

Related Articles