Friday, November 22, 2024

ಇತಿಹಾಸ ನಿರ್ಮಾಣಕ್ಕೆ ಒಂದೇ ಮೆಟ್ಟಿಲು… ಹ್ಯಾಟ್ರಿಕ್ ಗುರಿಯಲ್ಲಿ ವಿರಾಟ್ ಪಡೆ

ದಿ ಸ್ಪೋರ್ಟ್ಸ್ ಬ್ಯೂರೊ
ಕೇಪ್‌ಟೌನ್: ವಿಶ್ವದ ನಂ.1 ಟೆಸ್ಟ್ ಹಾಗೂ ಏಕದಿನ ತಂಡವಾಗಿರುವ ಭಾರತ, ಹರಿಣಗಳ ನಾಡಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 6 ಪಂದ್ಯಗಳ ಏಕದಿನ ಸರಣಿಯ 3ನೇ ಪಂದ್ಯವನ್ನು ಗೆದ್ದರೆ ಟೀಮ್ ಇಂಡಿಯಾ ಹ್ಯಾಟ್ರಿಕ್ ಗೆಲುವಿನೊಂದಿಗೆ ಇತಿಹಾಸ ನಿರ್ಮಿಸಲಿದೆ.
PC: Twitter/BCCI
ಭಾರತ ತಂಡ ತನ್ನ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ದಕ್ಷಿಣ ಆಫ್ರಿಕಾದಲ್ಲಿ ಸತತ 3 ಏಕದಿನ ಪಂದ್ಯಗಳನ್ನು ಗೆದ್ದ ಚರಿತ್ರೆಯೇ ಇಲ್ಲ. ಆದರೆ ವಿರಾಟ್ ಕೊಹ್ಲಿ ನಾಯಕತ್ವದ ಈ ತಂಡ ಚರಿತ್ರೆ ಬರೆಯಲು ಸರ್ವಸನ್ನದ್ಧವಾಗಿದೆ.
ಈಗಾಗಲೇ ಮೊದಲ ಎರಡು ಏಕದಿನ ಪಂದ್ಯಗಳನ್ನು ಗೆದ್ದುಕೊಂಡಿರುವ ಟೀಮ್ ಇಂಡಿಯಾ ಸರಣಿಯಲ್ಲಿ 2-0 ಅಂತರದ ಮುನ್ನಡೆಯಲ್ಲಿದೆ. 3ನೇ ಪಂದ್ಯವನ್ನೂ ಗೆದ್ದರೆ ಸರಣಿಯಲ್ಲಿ 3-0 ಮುನ್ನಡೆಯೊಂದಿಗೆ ಹರಿಣಗಳ ನೆಲದಲ್ಲಿ ಚೊಚ್ಚಲ ಏಕದಿನ ಸರಣಿ ಗೆಲ್ಲುವ ಕನಸಿಗೆ ಇನ್ನಷ್ಟು ಬಲ ತಂದುಕೊಳ್ಳಲಿದೆ.
ಮತ್ತೊಂದೆಡೆ ಸತತ ಸೋಲುಗಳಿಂದ ಹೈರಾಣಾಗಿರುವ ದಕ್ಷಿಣ ಆಫ್ರಿಕಾ ತಂಡ ಗಾಯಾಳುಗಳ ಸಮಸ್ಯೆಯಿಂದ ಕಂಗೆಟ್ಟಿದೆ. ನಾಯಕ ಫಾಫ್ ಡುಪ್ಲೆಸಿಸ್ ಕೈ ಬೆರಳಿನ ಗಾಯದಿಂದ ಏಕದಿನ ಸರಣಿ ಮಾತ್ರವಲ್ಲದೆ, ಟಿ20 ಸರಣಿಯಿಂದಲೂ ಹೊರಗುಳಿದಿದ್ದಾರೆ. ವಿಕೆಟ್ ಕೀಪರ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ ಕೂಡ ಮಣಿಕಟ್ಟಿನ ಗಾಯಕ್ಕೆ ತುತ್ತಾಗಿರುವುದರಿಂದ ಏಕದಿನ ಮತ್ತು ಟಿ20 ಸರಣಿಯಿಂದ ಹೊರ ಬಿದ್ದಿದ್ದಾರೆ. ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಗಾಯದ ಕಾರಣ ಈಗಾಗಲೇ ಸರಣಿಯ ಮೊದಲ 3 ಪಂದ್ಯಗಳಿಂದ ಹೊರಗುಳಿದಿದ್ದು, 4ನೇ ಪಂದ್ಯದಿಂದ ಕಣಕ್ಕಿಳಿಯಲಿದ್ದಾರೆ. ಹೀಗೆ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಭಾರತಕ್ಕೆ ತಿರುಗೇಟು ನೀಡಬೇಕಾದ ಅತ್ಯಂತ ಕಷ್ಟದ ಜವಾಬ್ದಾರಿ ದಕ್ಷಿಣ ಆಫ್ರಿಕಾ ತಂಡದ ಮುಂದಿದೆ.
ಭಾರತ-ದಕ್ಷಿಣ ಆಫ್ರಿಕಾ 3ನೇ ಏಕದಿನ ಪಂದ್ಯ
ಸಮಯ: ಸಂಜೆ 4.30ಕ್ಕೆ ಆರಂಭ
ಸ್ಥಳ: ನ್ಯೂಲ್ಯಾಂಡ್ಸ್ ಮೈದಾನ, ಕೇಪ್‌ಟೌನ್
ನೇರ ಪ್ರಸಾರ: ಟೆನ್ ಸ್ಪೋರ್ಟ್ಸ್ ನೆಟ್‌ವರ್ಕ್

Related Articles