Friday, November 22, 2024

ರಾಹುಲ್ ಬದಲು ನಾಯರ್‌ಗೆ ಅವಕಾಶ ನೀಡಬಹುದಿತ್ತು!

ಸ್ಪೋರ್ಟ್ಸ್ ಮೇಲ್ ವರದಿ 

ಟೆಸ್ಟ್ ಕ್ರಿಕೆಟ್ ನಲ್ಲಿ  ತ್ರಿ ಶತಕ ಸಿಡಿಸಿದ ಕರುಣ್ ನಾಯರ್ ಇಂಗ್ಲೆಂಡ್‌ನಲ್ಲಿ ಬೆಂಚ್ ಬಿಸಿ ಮಾಡಿದ್ದೇ  ಬಂತು. ಕೋಚ್ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಪ್ರಭಾವ ಹೊಂದಿರುವವರು ಅಂಗಣದಲ್ಲಿ ಆಡುತ್ತಿದ್ದಾರೆ. ಪರಿಣಾಮ ಸರಣಿ ಸೋಲು.  ಕೊನೆಯ ಪಂದ್ಯದಲ್ಲೂ ಕರುಣ್‌ಗೆ ಅವಕಾಶ ನೀಡದಿರುವುದು ವಿರಾಟ್ ಕೊಹ್ಲಿಯ ತಪ್ಪಿನ  ತೀರ್ಮಾನ ಎಂದೇ ಹೇಳಬಹುದು.

 

 ಐದನೇ ಟೆಸ್ಟ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಸಾಕಷ್ಟು ಬದಲಾವಣೆಗಳನ್ನು ಮಾಡಿ ನಿರಂತರ ವೈಫಲ್ಯ ಕಾಣುತ್ತಿರುವವರಿಗೆ ವಿಶ್ರಾಂತಿ ನೀಡಬಹುದಾಗಿತ್ತು. ಆದರೆ ವಿರಾಟ್ ಕೊಹ್ಲಿ ಹಾಗೆ ಮಾಡದೆ ಸತತ ನಾಲ್ಕು ಪಂದ್ಯಗಳಲ್ಲಿ ವೈಫಲ್ಯಕಂಡಿರುವ ರಾಹುಲ್‌ಗೆ ಅವಕಾಶ ನೀಡಿದ್ದಾರೆ. ಆಂಧ್ರಪ್ರದೇಶದ ಹನುಮ ವಿಹಾರಿ ಟೆಸ್ಟ್‌ಗೆ ಪದಾರ್ಪಣೆ ಮಾಡಿರುವುದು ಉತ್ತಮ ಬೆಳವಣಿಗೆ.
ವಿರಾಟ್ ಕೊಹ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆಯೇ ಹೊರತು ಅದರ ಮಾಲೀಕತ್ವ ಹೊಂದಿಲ್ಲ. ಕೆ.ಎಲ್. ರಾಹುಲ್ ನಿರಂತರವಾಗಿ ವೈಲ್ಯ ಕಂಡಿದ್ದಾರೆ. ಆದರೆ ಅವರಿಗೆ ಕೊಹ್ಲಿಯ ಕೃಪೆ ಇದೆ. ಹಾಗಾಗಿ ವೈಫಲ್ಯದ ನಡುವೆಯೂ ತಂಡದಲ್ಲಿ ಭದ್ರವಾಗಿದ್ದಾರೆ.  ಕರುಣ್ ನಾಯರ್‌ಗೆ ಯಾರ ಪ್ರಭಾವವೂ ಇಲ್ಲ. ಅವರೊಬ್ಬ ಅಪ್ಪಟ ಕ್ರಿಕೆಟಿಗ. ಇದೇ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತ್ರಿಶತಕ ಸಿಡಿಸಿದ ಆಟಗಾರ.

ದಾದಾನ ಮಾತಿಗೂ ಬೆಲೆ ಇಲ್ಲ

ಸೌರವ್ ಗಂಗೂಲಿ ಭಾರತ ಕಂಡ ಶ್ರೇಷ್ಠ ನಾಯಕ. ವಿದೇಶಿ ಪಿಚ್‌ಗಳ ಬಗ್ಗೆ  ಹಾಗೂ ಆಟಗಾರರ ಬಗ್ಗೆ ಚೆನ್ನಾಗಿ ಅರಿತವರು. ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಕರುಣ್ ನಾಯರ್ ಅವರನ್ನು ತಂಡದಲ್ಲಿ ಆಡಿಸಿ ಎಂದು ಸಲಹೆ ನೀಡಿದ್ದರು. ಅದು ನಾಯಕ ವಿರಾಟ್ ಕೊಹ್ಲಿ ಅಥವಾ ಕೋಚ್ ಶಾಸ್ತ್ರಿ ಗಮನಿಸಲೇ ಇಲ್ಲ. ರನ್ ಗಳಿಸುವ ಸಾಮರ್ಥ್ಯ ಇರುವ ಹಾಗೂ ತಾಳ್ಮೆಯ ಆಟ ಪ್ರದರ್ಶಿಸಬಲ್ಲ ಕರುಣ್ ನಾಯರ್ ಆಟವನ್ನು ಬಿಸಿಸಿಐನ ಆಯ್ಕೆ ಸಮಿತಿಯ ಪ್ರತಿಯೊಬ್ಬ ಸದಸ್ಯರಿಗೂ ಗೊತ್ತು. ಆದರೆ ಲಾಬಿಗಳ ಸುಳಿಯಲ್ಲಿ ಸಿಲುಕಿರುವ ಭಾರತ ಕ್ರಿಕೆಟ್ ತಂಡ ಅದಕ್ಕೆ ತಕ್ಕ ಬೆಲೆ ನೀಡಿತು.

ರಾಹುಲ್ ಮೊಬೈಲ್ ನಂಬರ್!

ರಾಹುಲ್ ಅವರನ್ನು ಆರಂಭದಲ್ಲಿ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಸ್ಥಾನವನ್ನು ತುಂಬುವ ಆಟಗಾರ ಎಂದು ಬಿಂಬಿಸಲಾಗಿತ್ತು.ಆದರೆ ವಿದೇಶಿ ಪಿಚ್‌ನಲ್ಲಿ ಅವರು ದ್ರಾವಿಡ್ ಆಗಲಿಲ್ಲ, ಕೇವಲ ಮತ್ತೊಂದು ಹೆಸರಿನ ರಾಹುಲ್ ಆದರು. ರಾಹುಲ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡದಿರುವುದು ಬೇಸರದ ಸಂಗತಿ.
4, 13, 8, 10, 23, 36, 19, 00  ಇದು ರಾಹುಲ್ ನಾಲ್ಕು ಪಂದ್ಯಗಳ ಎಂಟು ಇನ್ನಿಂಗ್ಸ್ ಗಳಲ್ಲಿ  ಗಳಿಸಿದ ರನ್. ಒಂದೆರಡು ಇನಿಂಗ್ಸ್‌ಗಳಲ್ಲಿ ವಿಲವಾಗುವುದು ಸಹಜ. ಆದರೆ ಪ್ರತಿಯೊಂದು ಇನಿಂಗ್ಸ್‌ನಲ್ಲೂ ವಿಲರಾಗಿದ್ದಾರೆ. ಕೊನೆಯ ಪಂದ್ಯದಲ್ಲಿ ರಾಹುಲ್‌ಗೆ ವಿಶ್ರಾಂತಿ ನೀಡಿ ಕರುಣ್ ನಾಯರ್‌ಗೆ ಅವಕಾಶ ಕೊಡುತ್ತಿದ್ದರೆ ಕೊಹ್ಲಿ ತಂಡದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ ಎನ್ನಬಹುದು. ಎಂಟು  ಇನಿಂಗ್ಸ್‌ಗಳಲ್ಲಿ ಸೋತವರಿಗೂ ಪ್ರಮುಖವಲ್ಲದ ಪಂದ್ಯದಲ್ಲಿ ಮತ್ತೆರಡು ಇನ್ನಿಂಗ್ಸ್ ಆಡಲು ಅವಕಾಶ ಕೊಟ್ಟಿರುವುದು ಅದು ಕ್ರಿಕೆಟ್ ಆಚೆಗಿನ ಯೋಚನೆ.

Related Articles