ಸೋಮಶೇಖರ್ ಪಡುಕರೆ ಬೆಂಗಳೂರು
ಭಾರತದ ಪೊಲೀಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕರ್ನಾಟಕದ ಪೊಲೀಸರು ಸಾಹಸ ಕ್ರೀಡೆಯಲ್ಲಿ ತರಬೇತಿ ಪಡೆದಿರುತ್ತಾರೆ.
ಕೊಡಗಿನಲ್ಲಿ ಇತ್ತೀಚಿಗೆ ಸಂಭವಿಸಿದ ನೆರೆ ಹಾವಳಿಯಲ್ಲಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸಿಬ್ಬಂದಿ ತೋರಿದ ಕಾರ್ಯಕ್ಷಮತೆಯನ್ನು ಮೆಚ್ಚಿದ ಎಡಿಜಿಪಿ ಭಾಸ್ಕರ್‌ರಾವ್ ಅದೇ ತಂಡದಿಂದ ಇಲಾಖೆ 50 ಮಂದಿ ಸಿಬ್ಬಂದಿಗೆ ತರಬೇತಿ ನೀಡುವ ಯೋಜನೆ ಹಾಕಿದರು. ಇದರ ಪರಿಣಾಮ ಕೊಡಗಿನ ಬರ್ಪೊಳೆ ಹಾಗೂ ಬದಾಮಿಯಲ್ಲಿ ಸಾಹಸ ಕ್ರೀಡೆಯ ತರಬೇತಿ ನೀಡಲಾಯಿತು.
ಜೆತ್ನಾ ಸಮನ್ವಯಕಾರ ಕೀರ್ತಿ ಪಯಾಸ್ ಹಾಗೂ ತಂಡ ಕೊಡಗಿನಲ್ಲಿ ಸಂಭವಿಸಿದ ನೆರೆ ಪರಿಹಾರ ಕಾರ್ಯದಲ್ಲಿ ಉತ್ತಮ ಶ್ರಮ ತೋರಿ ಹಲವಾರು ಮಂದಿಯ ಜೀವ ರಕ್ಷಿಸಿರುವುದಕ್ಕೆ ಎಡಿಜಿಪಿ ಭಾಸ್ಕರ್ ರಾವ್ ಅವರು ಪ್ರತ್ಯಕ್ಷದರ್ಶಿ. ಜೆತ್ನಾದ ಕಾರ್ಯವೈಖರಿಯನ್ನು ಗಮನಿಸಿದ ಅವರು ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರೊಂದಿಗೆ ಚರ್ಚಿಸಿ ಕೂಡಲೇ ಪೊಲೀಸ್ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲು ಸೂಚಿಸಿದರು.
ಅದೇ ರೀತಿ ಬದಾಮಿಯಲ್ಲಿ ಸ್ಪೋರ್ಟ್ ರಾಕ್ ಕ್ಲೈಮ್ಬಿಂಗ್ ಹಾಗೂ ಬರ್ಪೊಳೆಯಲ್ಲಿ ಜಲ ಸಾಹಸ ಕ್ರೀಡೆಗಳ ತರಬೇತಿಯನ್ನು ಏಳು ದಿನಗಳ ಕಾಲ ನೀಡಲಾಯಿತು. ಭಾರತದ ಪೊಲೀಸ್ ಇತಿಹಾಸದಲ್ಲಿ ಸಿಬ್ಬಂದಿ ಈ ರೀತಿಯ ಸಾಹಸ ತರಬೇತಿ ಪಡೆಯುತ್ತಿರುವುದು ಇದೇ ಮೊದಲು. ಸಾಮಾನ್ಯವಾಗಿ ಸೇನೆಯಲ್ಲಿರುವ ರಕ್ಷಣಾ ಪಡೆಗೆ ಅಥವಾ ವಿಪತ್ತು ಪರಿಹಾರ ತಂಡಕ್ಕೆ ಈ ರೀತಿಯ ತರಬೇತಿ ನೀಡಲಾಗುತ್ತದೆ. ಈ ರೀತಿಯ ತರಬೇತಿ ಪಡೆಯುವುದರಿಂದ ನೈಸರ್ಗಿಕ ವಿಕೋಪಗಳು ಸಂಭವಿಸಿದ್ದಲ್ಲಿ ನಮ್ಮ ಪೊಲೀಸ್ ಇಲಾಖೆ ಇನ್ನೂ ಉತ್ತಮ ರೀತಿಯಲ್ಲಿ ನೆರವನ್ನು ನೀಡಲು ಸಾಧ್ಯವಾಗುತ್ತದೆ.
ಹೊಸ ಉಲ್ಲಾಸ, ಉತ್ಸಾಹ
ತರಬೇತಿ ಪಡೆದ ಪೊಲೀಸ್ ಸಿಬ್ಬಂದಿ ಈ ಹೊಸ ಸಾಹಸದ ಬಗ್ಗೆ ಮೆಚ್ಚುಗೆ ಹಾಗೂ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೆಎಸ್‌ಆರ್‌ಪಿ ಮೈಸೂರು ಘಟಕದ ಕೆ. ಮಲ್ಲೇಶ್ ಈ ಕುರಿತು ಮಾತನಾಡಿ, ಕೊಡಗಿನಲ್ಲಿ ಸಂಭವಿಸಿದ ನೆರೆ ಸಂತೃಸ್ತರ ಪರಿಹಾರ ಕಾರದಲ್ಲಿ ಪಾಲ್ಗೊಂಡಿದ್ದೆ. ಆದರೆ ಈ ರೀತಿಯ ತರಬೇತಿ ಮೊದಲೇ ಸಿಕ್ಕಿರುತ್ತಿದ್ದರೆ ನಾವು ಇನ್ನೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಬಹುದಾಗಿತ್ತು. ಪೊಲೀಸ್ ಸಿಬ್ಬಂದಿಗೆ ಇಂಥ ತರಬೇತಿಗಳ ಅವಶ್ಯಕತೆ ಇದೆ. ಇದು ನಮ್ಮ ಮನೋಬಲವನ್ನು ಹೆಚ್ಚಿಸಿದೆ, ಎಂದರು.
ಥ್ಯಾಂಕ್ಸ್ ಟು ಜೆತ್ನಾ
ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ (ಜೆತ್ನಾ)ದಲ್ಲಿ ನೀಡಿರುವ ತರಬೇತಿ ನಮ್ಮ ವೃತ್ತಿ ಬದುಕಿನಲ್ಲಿ ಹೆಚ್ಚಿನ ಪರಿಣಾಮ ಬೀರಲಿದೆ. ಒಬ್ಬರ ಜೀವ ಉಳಿಸುವುದು ಪುಣ್ಯದ ಕೆಲಸ. ಆ ಕೆಲಸಕ್ಕಾಗಿ ನಾವಿಲ್ಲಿ ತರಬೇತಿ ಪಡೆದಿದ್ದೇವೆ. ಈಜು ಬದುಕಿನಲ್ಲಿ ಅಗತ್ಯವಾಗಿ ಬೇಕಾಗುತ್ತದೆ. ನಾವು ಕಳೆದ ಏಳು ದಿನಗಳಲ್ಲಿ ಕಯಾಕ್ ಹಾಗೂ ರಾಫ್ಟಿಂಗ್ ಮೂಲಕ ನೆರೆಯ ಸಂದರ್ಭದಲ್ಲಿ ಸಂತೃಸ್ತರಿಗೆ ನೆರವಾಗುವುದು ಹೇಗೆ ಎಂಬುದನ್ನು ತಿಳಿದುಕೊಂಡೆವು. ನಮಗೆ ತಜ್ಞರಾದ ದಿನೇಶ್, ಬಶೀರ್ ಹಾಗೂ ಸುರೇಶ್ ಅವರು ಉತ್ತಮ ರೀತಿಯಲ್ಲಿ ತರಬೇತಿ ನೀಡಿರುತ್ತಾರೆ. ನಾವು ಜೆತ್ನಾಕ್ಕೆ ಚಿರಋಣಿಯಾಗಿದ್ದೇವೆ, ಎಂದು ಕೆಎಸ್‌ಆರ್‌ಪಿ ಬೆಂಗಳೂರು ೯ನೇ ಬೆಟಾಲಿಯನ್‌ನ ಸಬ್ ಇನ್‌ಸ್ಪೆಕ್ಟರ್ ನಾಗರಾಜ್ ಅತ್ಯಂತ ಖುಷಿಯಿಂದ ಹೇಳಿದರು.
ಮಹಿಳಾ ಸಿಬ್ಬಂದಿಗೂ ತರಬೇತಿ
ತರಬೇತಿ ಪಡೆದವರಲ್ಲಿ ಅನೇಕ ಮಹಿಳಾ ಪೊಲೀಸ್ ಅಧಿಕಾರಿಗಳೂ ಸೇರಿದ್ದಾರೆ. ಅವರಲ್ಲಿ ಬೆಂಗಳೂರಿನ ಜೈಶಾ ಕೂಡ ಒಬ್ಬರು. ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಮಹಿಳೆಯರಿಗೆ ಹೆಚ್ಚಿನ ನೆರವು ಬೇಕಾಗಿರುತ್ತದೆ. ಅಂಥ ನೆರವು ನೀಡುವಲ್ಲಿ ಈ ತರಬೇತಿ ಹೆಚ್ಚು ಉಪಯೋಗವಾಗಲಿದೆ. ರಿವರ್ ರಾಫ್ಟಿಂಗ್ ಹಾಗೂ ಕಯಾಕ್ ಮೂಲಕ ನಾವು ಉತ್ತಮ ತರಬೇತಿಯನ್ನು ಪಡೆದಿರುತ್ತೇವೆ. ಇದು ನಮ್ಮ ವೃತ್ತಿ ಬದುಕಿಗೆ ನೆರವಾಗಲಿದೆ ಎಂದರು.
ಹೆಮ್ಮೆಯ ಸಂಗತಿ
ಜೆತ್ನಾದ ಕಾರ್ಯವೈಖರಿಯ ಬಗ್ಗೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದು ಇಲಾಖೆಯ ಶ್ರಮ ಇನ್ನೊಂದು ಇಲಾಖೆಯೊಂದಿಗೆ ಹಂಚಿದಾಗ ಅಲ್ಲಿ ಉತ್ತಮ ರೀತಿಯ ಅಭಿವೃದ್ಧಿಯಾಗುವುದು ಸಹಜ. ಈ ಹಿನ್ನೆಲೆಯಲ್ಲಿ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ತಜ್ಞರ ಅನುಭವ ಪೊಲೀಸ್ ಇಲಾಖೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇದು ಸಮಾಜದ ಒಳಿತಿಗಾಗಿ. ಪೊಲೀಸರು ಸಾಹಸ ಕ್ರೀಡೆಯಲ್ಲಿ ಭಾಗಿಯಾಗಿರುವುದು, ಅದರಲ್ಲಿ ಜೆತ್ನಾ ಶ್ರಮವಹಿಸಿರುವುದು ಖುಷಿಕೊಟ್ಟಿದೆ. ಇದು ಕ್ರೀಡಾ ಇಲಾಖೆಯ ಪಾಲಿಗೆ ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಹೆಚ್ಚಿನ ಅವಧಿಯ ತರಬೇತಿ ನೀಡಲು ಜೆತ್ನಾದ ತಜ್ಞರು ಸದಾ ಸಿದ್ಧರಿರುತ್ತಾರೆ ಎಂದು ಅಕಾಡೆಮಿಯ ಸಮನ್ವಯಕಾರ ಕೀರ್ತಿ ಪಯಾಸ್ ಅವರು ತಿಳಿಸಿದ್ದಾರೆ.