ಸೋಮಶೇಖರ್ ಪಡುಕರೆ ಬೆಂಗಳೂರು
ಮಂಡ್ಯದ ಗಲ್ಲಿಗಳಲ್ಲಿ ಟೆನಿಸ್ ಬಾಲ್ ಕ್ರಿಕೆಟ್, ಆಳ್ವಾಸ್ ಕಾಲೇಜಿನಲ್ಲಿ ಲೆದರ್ ಬಾಲ್ ಟೂರ್ನಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಶತಕ ಸಿಡಿಸಿದ ಸಂಭ್ರಮ, ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಸ್ಫೋಟಕ ಬ್ಯಾಟಿಂಗ್… ಹೀಗೆ ಕ್ರಿಕೆಟ್‌ನ ಪ್ರತಿಯೊಂದು ಹಂತದಲ್ಲೂ ಮಿಂಚಿದ ಆಲ್ರೌಂಡರ್ ಮಂಡ್ಯದ ನವೀನ್ ಗ್ನಾನೇಶ್ವರ್ ಈಗ ರಾಜ್ಯ ಏಕದಿನ ಕ್ರಿಕೆಟ್‌ಗೆ ಪ್ರವೇಶ ನೀಡಿದ್ದಾರೆ.
ಮುಂದಿನ ವಾರ ಬೆಂಗಳೂರಿನಲ್ಲಿ ನಡೆಯಲಿರುವ ವಿಜಯ ಹಜಾರೆ ಟ್ರೋಫಿ ಏಕದಿನ ಪಂದ್ಯಗಳಲ್ಲಿ ಆಡಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ನವೀನ್ ಎಂ.ಜಿ. ಅವರ ಕ್ರಿಕೆಟ್ ಬದುಕಿನ ಹಾದಿ ಯುವ ಕ್ರಿಕೆಟಿಗರಿಗೆ ಸ್ಫೂರ್ತಿ ತರುವಂಥದ್ದು.
ಟೆನಿಸ್ ಬಾಲ್ ಕ್ರಿಕೆಟ್‌ನಿಂದ
ಕ್ರಿಕೆಟ್ ಆಟಗಾರರ ಬದುಕು ಆರಂ‘ವಾಗುವುದೇ ಟೆನಿಸ್ ಕ್ರಿಕೆಟ್‌ನಲ್ಲಿ. ಅದೇ ರೀತಿ ನವೀನ್ ಶಾಲಾ ದಿನಗಳಲ್ಲಿ ಟೆನಿಸ್ ಬಾಲ್ ಕ್ರಿಕೆಟ್‌ನಲ್ಲಿ ಮಿಂಚಿ ಎಲ್ಲರ ಪ್ರೀತಿಗೆ ಪಾತ್ರರಾದರು. ನಂತರ ಮೂಡಬಿದಿರೆಯ ಆಳ್ವಾಸ್ ಕಾಲೇಜು ಸೇರಿಕೊಂಡ ಈ ಆಲ್ರೌಂಡರ್‌ಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವಾ ಅವರಿಂದ ಉತ್ತಮ ಪ್ರೋತ್ಸಾಹ ಸಿಕ್ಕಿತು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ದಕ್ಷಿಣ ವಲಯ ಪಂದ್ಯಗಳನ್ನು ಆಡುವಾಗ ಶತಕ ಸಿಡಿಸಿ ಸಂಭ್ರಮಿಸಿದರು. ಐದನೇ ವರ್ಷದಲ್ಲೇ ಕ್ರಿಕೆಟ್ ಬ್ಯಾಟ್ ಹಿಡಿದ ನವೀನ್ ಎಲ್ಲಿಯೂ ವೈಫಲ್ಯದ ಹಾದಿ ಹಿಡಿಯಲಿಲ್ಲ. ಆಳ್ವಾಸ್ ಶಿಕ್ಷಣ ಸಂಸ್ಥೆ ತಮ್ಮ ಬದುಕಿಗೆ ಹೊಸ ಹಾದಿ ಕಲ್ಪಿಸಿತು ಎನ್ನುತ್ತಾರೆ ಕರ್ನಾಟಕದ ಉತ್ತಮ ಆಲ್ರೌಂಡರ್.
ಬೆಂಗಳೂರಿನಲ್ಲಿ ಕೆರನಾ ಬ್ಯಾಂಕ್ ಉದ್ಯೋಗಿಯಾಗಿರುವ ನವೀನ್ ರಾಜ್ಯದ ಪರ ಟಿ೨೦ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದಾರೆ. ಇತ್ತೀಚಿಗೆ ಮುಕ್ತಾಯಗೊಂಡ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಬಿಜಾಪುರ ಬುಲ್ಸ್ ತಂಡ ಚಾಂಪಿಯನ್ ಪಟ್ಟ ಗೆಲ್ಲುವಲ್ಲಿ ನವೀನ್ ಅವರ ಕೊಡುಗೆ ಪ್ರಮುಖವಾಗಿತ್ತು. ಸೆಫೈನಲ್ ಹಾಗೂ ಫೈನಲ್ ಪಂದ್ಯಗಳಲ್ಲಿ ಮಿಂಚಿರುವ ನವೀನ್,171 ರನ್ ಹಾಗೂ 7 ವಿಕೆಟ್ ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಕೆಪಿಎಲ್ ಉತ್ತಮ ವೇದಿಕೆ
ಕರ್ನಾಟಕ ಪ್ರೀಮಿಯರ್ ಲೀಗ್ ಯುವ ಪ್ರತಿಭಾವಂತ ಆಟಗಾರರಿಗೆ ಮಿಂಚಲು ಉತ್ತಮ ವೇದಿಕೆ. ೨೪ ವರ್ಷದ ನವೀನ್ ಇಲ್ಲಿ ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಂಡರು. ‘ಕರ್ನಾಟಕ ಪ್ರೀಮಿಯರ್ ಲೀಗ್ ರಾಜ್ಯದ ಯುವ ಕ್ರಿಕೆಟಿಗರಿಗೆ ಮಿಂಚಲು ಉತ್ತಮ ವೇದಿಕೆ. ಇಲ್ಲಿ ಉತ್ತಮವಾಗಿ ಆಡಿದವರಿಗೆ ರಾಜ್ಯ ತಂಡದಲ್ಲಿ ಅವಕಾಶ ತೆರೆದಿರುತ್ತದೆ. ಕೆಪಿಎಲ್‌ನಲ್ಲಿನ ಶ್ರಮವನ್ನು ಗಮನಿಸಿ ನನಗೆ ಈ ಅವಕಾಶ ನೀಡಿದ್ದಾರೆ ಎಂದು ತಿಳಿದಿರುವೆ. ಬಿಜಾಪುರ ಬುಲ್ಸ್ ತಂಡದ ಮಾಲೀಕರು, ಕೋಚ್ ಹಾಗೂ ಇತರ ಆಟಗಾರರಿಗೂ ನಾನು ಚಿರಋಣಿಯಾಗಿದ್ದೇನೆ, ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದ ನಾಯಕ ಭರತ್ ಚಿಪ್ಲಿ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ಎಲ್ಲೇ ಪಂದ್ಯಗಳು ನಡೆದರೂ ಅಲ್ಲಿ ಆಡಲು ಅವಕಾಶ ಮಾಡಿಕೊಟ್ಟು, ಚಿಕ್ಕಂದಿನಿಂದಲೂ ಪ್ರೋತ್ಸಾಹ ನೀಡುತ್ತಿರುವ ನನ್ನ ಹೆತ್ತವರಿಗೆ ನಾನು ಚಿರಋಣಿ,‘ ಎಂದು ನವೀನ್ ಸ್ಪೋರ್ಟ್ಸ್ ಮೇಲ್‌ಗೆ ತಿಳಿಸಿದ್ದಾರೆ.