Friday, December 27, 2024

ಭಾರತ ತಂಡ ಪಾಕ್ ಜತೆ ಐಸಿಸಿ ಮ್ಯಾಚ್ ಏಕೆ ಆಡಬೇಕು?

ಸೋಮಶೇಖರ್ ಪಡುಕರೆ ಬೆಂಗಳೂರು 
ಪಾಕಿಸ್ತಾನ ದೇಶದ ಜತೆಗಿನ ರಾಜಕೀಯ ವೈಮನಸ್ಸು, ಗಡಿಯಲ್ಲಿನ ಸಮಸ್ಯೆ ಇವುಗಳನ್ನು ಗಮನಿಸಿ ಆ ದೇಶದೊಂದಿಗಿನ ದ್ವಿಪಕ್ಷೀಯ ಕ್ರಿಕೆಟ್ ಸಂಬಧ  ಮುರಿದು ಸುಮಾರು ಆರು ವರ್ಷಗಳೇ ಗತಿಸಿವೆ. ಈ ನಡುವೆ ಭಾರತ ತಂಡ ಏಷ್ಯಾಕಪ್, ಚಾಂಪಿಯನ್ಸ್ ಟ್ರೋಫಿ ಹಾಗೂ ಐಸಿಸಿ ವಿಶ್ವಕಪ್ ಪಂದ್ಯಗಳನ್ನು ಆಡಿದೆ. ಇದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸಾಕಷ್ಟು ಹಣ ಸಂಪಾದಿಸಿದೆ. ನಾವು ಕೂಡ ಪಂದ್ಯ ನೋಡಿ ಖುಷಿ ಪಟ್ಟಿರುತ್ತೇವೆ.
ಆದರೆ ಗಡಿಯಲ್ಲಿ ಪಾಕಿಸ್ತಾನದ ಕುತಂತ್ರ, ದಾಳಿ ಮುಂದುವರಿಯುತ್ತಲೇ ಇದೆ. ಆ ದೇಶದೊಂದಿಗೆ ಆಡುವುದಾದರೆ ಎಲ್ಲ ರೀತಿಯ ಕ್ರಿಕೆಟ್ ಪಂದ್ಯಗಳನ್ನು ಆಡಬೇಕು. ಇಲ್ಲವಾದಲ್ಲಿ ಯಾವುದೇ ಪಂದ್ಯಗಳನ್ನೂ ಆಡಬಾರದು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಹಾಗೂ ದಿಲ್ಲಿಯ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿರುವುದರಲ್ಲಿ ಯೋಚಿಸುವ ಅಂಶ ಇದೆ..
ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರಗಳ ನಡುವಿನ ವ್ಯಾವಹಾರಿಕ ಸಂಬಂಧ  ಉತ್ತಮವಾಗಿಲ್ಲ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ತೃತೀಯ ರಾಷ್ಟ್ರದ ಮೂಲಕ 5 ಶತಕೋಟಿ ಡಾಲರ್ ವಹಿವಾಟು ಎರಡು ದೇಶಗಳ ನಡುವೆ ನಡೆದಿದೆ. ಪಾಕಿಸ್ತಾನ ಹಿಂಸಾಚಾರವನ್ನು ನಿಲ್ಲಿಸಿ ಉತ್ತಮ ಸಂಬಂಧ  ಬೆಳೆಸಿದರೆ ಎರಡು ದೇಶಗಳ ನಡುವಿನ ವಹಿವಾಟ30 ಬಿಲಿಯನ್ ಡಾಲರ್ (ಅಂದಾಜು 2,16,000 ಕೋಟಿ ರೂ.) ದಾಟಬಹುದು ಎಂದು ಲಾಹೋರ್‌ನಲ್ಲಿರುವ ‘ಭಾರತೀಯ ರಾಯಭಾರಿ ಅಜಯ್ ಬಿಸಾರಿಯಾ ಲಾಹೋರ್ ಚೇಂಬರ್ ಆಫ್  ಕಾಮರ್ಸ್‌ನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಹೇಳಿದ್ದಾರೆ. ಆದರೆ ಇದು ಪಾಕಿಸ್ತಾನದ ಕಡೆಯಿಂದ ಸಾಧ್ಯವೇ? ಎಂಬ ಪ್ರಶ್ನೆಗೆ ಉತ್ತರ ಇಲ್ಲದಂತಾಗಿದೆ.

ಯೋಧರ ಸಾವು

ಗಡಿಯಲ್ಲಿ ಪಾಕ್ ಸೈನಿಕರು ಆಗಾಗ ನಡೆಸುವ ಗುಂಡಿನ ದಾಳಿಗೆ ನಮ್ಮ ಸೈನಿಕರು ಬಲಿಯಾಗುತ್ತಿದ್ದಾರೆ. ಪಾಕಿಸ್ತಾನ ಈ ಹೇಯ ಕೃತ್ಯವನ್ನು ನಿಲ್ಲಿಸಬೇಕು. ಭಯೋತ್ಪಾದನೆಗೆ ಬೆಂಬಲ ಸೂಚಿಸುವುದನ್ನು ನಿಲ್ಲಿಸಬೇಕು. ಹಾಗಿದ್ದಲ್ಲಿ ಮಾತ್ರ ಎರಡು ದೇಶಗಳ ನಡುವೆ ಯಾವುದೇ ಪಂದ್ಯ ನಡೆಯುತ್ತಿದ್ದರೂ ನೋಡುವ ಮನಸ್ಸುಗಳ ಸಂಖ್ಯೆ ಹೆಚ್ಚಾಗುತ್ತದೆ. ಅಲ್ಲಿ ಗುಂಡಿನ ಮಳೆಗರೆಯುತ್ತಿದ್ದರೆ, ಇಲ್ಲಿ ನಾವು ಪಂದ್ಯ ನೋಡಿ ಸಂಭ್ರಮಿಸುತ್ತಿದ್ದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಮತ್ತಷ್ಟು ವೈರತ್ವ ಬೆಳೆಯುತ್ತದೆಯೇ ಹೊರತು ವ್ಯಾವಹಾರಿಕ ಹಾಗೂ ಮಾನವೀಯ ಸಂಬಂಧಗಳು ಹುಟ್ಟಿಕೊಳ್ಳಲು ಸಾಧ್ಯವಿಲ್ಲ.

ವ್ಯವಹಾರ ಮುಂದುವರಿದಿದೆ

ಪಾಕಿಸ್ತಾನವನ್ನು ಭಾರತ ಅತ್ಯಂತ ಇಷ್ಟದ ರಾಷ್ಟ್ರ (ಮೋಸ್ಟ್ ಫೇವರ್ಡ್ ನೇಷನ್) ಎಂದು ಒಪ್ಪಿಕೊಂಡು ಗೌರವಿಸಿದೆ. ಆದರೆ ಪಾಕಿಸ್ತಾನ ಮಾತ್ರ ಭಾರತವನ್ನು ಅತ್ಯಂತ ವೈರಿ ರಾಷ್ಟ್ರವೆಂದು ಈಗಲೂ ಪರಿಗಣಿಸಿದೆ. ಪಾಕಿಸ್ತಾನದ ಪಾಲಿಗೆ ‘ಭಾರತ ಅತ್ಯಂತ ಇಷ್ಟದ ರಾಷ್ಟ್ರವಾಗಿ ಉಳಿದಿಲ್ಲ. ಆದರೂ ಈ ಎರಡು ರಾಷ್ಟ್ರಗಳ ನಡುವೆ ವ್ಯವಹಾರ ನಡೆಯುತ್ತಲೇ ಇದೆ. ರಾಜಕೀಯ ದ್ವೇಷ ಇದ್ದುದರಿಂದ ವಹಿವಾಟಿನಲ್ಲಿ ವರ್ಷದಿಂದ ವರ್ಷಕ್ಕೆ ಏರುಪೇರಿದೆ. 2016-17ರ ಹಣಕಾಸು ವರ್ಷದಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ 15,271.12  ಕೋಟಿ ರೂ. ವ್ಯವಹಾರ ನಡೆದಿದೆ. 2016-17ರ ಅವಧಿಯಲ್ಲಿ ಭಾರತ ರಾಷ್ಟ್ರ ಪಾಕಿಸ್ತಾನಕ್ಕೆ12,222.35 ಕೋಟಿ ರೂ. ಮೊತ್ತದಷ್ಟು ವಸ್ತುಗಳನ್ನು ರಫ್ತ್ತು  ಮಾಡಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 14.5ರಷ್ಟು ಕಡಿಮೆ. ಅದೇ ರೀತಿ 2016-17ರ ಅವಧಿಯಲ್ಲಿ ಭಾರತ, ಪಾಕಿಸ್ತಾನದಿಂದ 3,084.77 ಕೋಟಿ ರೂ. ಮೊತ್ತದಷ್ಟು ವಸ್ತುಗಳನ್ನು ಆಮದು ಮಾಡಿಕೊಂಡಿದೆ. ಎರಡು ರಾಷ್ಟ್ರಗಳ ನಡುವೆ ವೈರತ್ವ ಇದ್ದರೂ ವ್ಯವಹಾರ ಮಾತ್ರ ಮುಂದುವರಿದೆ. ಈ ನಡುವೆ ನಿಷೇಧ  ಆಗಿರುವುದು ಕ್ರಿಕೆಟ್‌ಗೆ ಮಾತ್ರ. ಅದೂ ಎರಡು ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ  ಕ್ರಿಕೆಟ್ ಪಂದ್ಯಗಳಿಗೆ ಮಾತ್ರ.
ಕ್ರೀಡೆಯ ಮೂಲಕ ಎರಡು ರಾಷ್ಟ್ರಗಳ ನಡುವಿನ ಸಂಬಂಧ  ಉತ್ತಮಗೊಳ್ಳುತ್ತದೆ, ಉತ್ತಮಗೊಳ್ಳಬೇಕು ಎಂಬುದು ಒಲಿಂಪಿಕ್ಸ್‌ನ ದ್ಯೇಯ. ಆದರೆ ದ್ವೇಷವನ್ನು ಮಗ್ಗುಲಲ್ಲಿರಿಸಿಕೊಂಡು ಸಂಬಂಧ  ಬೆಳಿಸಿದರೆ ಅದು ಅಪಾಯದ ಕಡೆಗೆ ಸಾಗುವುದೇ ಹೆಚ್ಚು. ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಭಾರತದ ಜತೆ ಆಡಿದರೆ ಮಾತ್ರ ಹಣ ಹರಿದುಬರುತ್ತದೆ. ಇತರ ರಾಷ್ಟ್ರಗಳೊಂದಿಗೆ ಆಡಿದರೆ ಅಷ್ಟು ಪ್ರಯೋಜನ ಇಲ್ಲ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಡುವೆ ಒಂದು ಒಪ್ಪಂದ ನಡೆದಿತ್ತು. 2014 ರಿಂದ 2023ರವರೆಗೂ ದ್ವಿಪಕ್ಷೀಯ ಸರಣಿ ನಡೆಸಲು ಎರಡೂ ಕ್ರಿಕೆಟ್ ಮಂಡಳಿಗಳೂ ಒಪ್ಪಂದಕ್ಕೆ ಸಹಿ ಮಾಡಿಕೊಂಡಿವೆ. ಭಾರತ ಆ ನಂತರ ಯಾವುದೇ ಸರಣಿಯನ್ನಾಡಿರಲಿಲ್ಲ. ಇದರಿಂದ ನಮಗೆ ನಷ್ಟವಾಗಿದೆ. ಸುಮಾರು 450 ಕೋಟಿ ರೂ. ದಂಡ ನೀಡಬೇಕೆಂದು ಪಿಸಿಬಿ ಪಟ್ಟು ಹಿಡಿದಿದೆ. ಬಿಸಿಸಿಐ ಇದಕ್ಕೆ ಸ್ಪಂದಿಸಿಲ್ಲ. ಸರಕಾರದ ಒಪ್ಪಿಗೆ ಇಲ್ಲದೆ ಬಿಸಿಸಿಐ ಯಾವುದೇ ತೀರ್ಮಾನವನ್ನು ಕೈಗೊಳ್ಳುವಂತಿಲ್ಲ.
ಒಂದೆಡೆ ಮುಂದುವರಿದ ವ್ಯವಹಾರ, ಇನ್ನೊಂದೆಡೆ ಮುರಿದು ಬಿದ್ದ ರಾಜಕೀಯ ಸಂಬಂಧ , ಮತ್ತೊಂದೆಡೆ ಕ್ರಿಕೆಟ್. ಒಟ್ಟಾರೆ ದಿನ ಸಾಗುತ್ತಿದೆ. ಆದರೆ ಇದಕ್ಕೊಂದ ತಾರ್ಕಿಕವಾದ ಕೊನೆ ಸಿಗಬೇಕು. ಐಸಿಸಿ ಪಂದ್ಯಗಳನ್ನು ಪಾಕಿಸ್ತಾನದ ಜತೆ ಆಡುವ ಭಾರತ ದ್ವಿಪಕ್ಷೀಯ ಸರಣಿಯ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ದ್ವಿಪಕ್ಷೀಯ ಸರಣಿಯ ಬೇಡವಾದ ಮೇಲೆ ಪಾಕಿಸ್ತಾನವಿದ್ದ ಐಸಿಸಿ ಪಂದ್ಯಗಳಿಗೂ ನಿಷೇಧ  ಹೇರಬೇಕು. ಆಗ ನಿಲುವು ಸ್ಪಷ್ಟವಾಗುತ್ತದೆ.
ಮೋಸದಾಟ, ಮ್ಯಾಚ್‌ಫಿಕ್ಸಿಂಗ್ ಹಾಗೂ ಹಣದ ಹೊಳೆ ಹರಿಯುತ್ತಿರುವ ಕ್ರಿಕೆಟ್‌ನಲ್ಲಿ ಶಾಂತಿ ಹುಡುಕುವುದು ಕಷ್ಟವಾಗಿದೆ. ಪಾಕಿಸ್ತಾನ ಹಾಗೂ ಭಾರತದ ನಡುವಿನ ಪಂದ್ಯವೆಂದರೆ ಅದು ಹಣ ಗಳಿಸುವವರಿಗೊಂದು ಮಾರ್ಗವಿದ್ದಂತೆ. ಟಿವಿಯ ಜಾಹೀರಾತನ್ನೇ ನೋಡಿ, ಭಾರತ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ಪ್ರತ್ಯೇಕ ಜಾಹೀರಾತು ಇರುತ್ತದೆ. ಭಾರತದ ಕ್ರಿಕೆಟಿಗರಿಗೆ ಹಣ ಮಾಡಲು ಇಂಡಿಯನ್ ಪ್ರೀಮಿಯರ್ ಲೀಗ್ ಇದೆ. ಪಾಕಿಸ್ತಾನಕ್ಕೆ ಪಾಕಿಸ್ತಾನ ಸೂಪರ್ ಲೀಗ್ ಇದೆ. ದೇಶಪ್ರೇಮದ ಬಗ್ಗೆ ಮಾತನಾಡುವ ಆಟಗಾರರು ಸರಕಾರದ ಆದೇಶಕ್ಕಾಗಿ ಕಾಯದೆ, ನಾವು ಪಾಕಿಸ್ತಾನದ ವಿರುದ್ಧ ಐಸಿಸಿ ಪಂದ್ಯಗಳನ್ನೂ ಆಡುವುದಿಲ್ಲ ಎಂದು ಹೇಳಲಿ. ಇಲ್ಲ ಬಿಸಿಸಿಐ ಹೇಳಲಿ. ಇಲ್ಲ ಸರಕಾರ ಎಲ್ಲ ಪಂದ್ಯಗಳಿಗೂ ಅವಕಾಶ ಕೊಡಲಿ. ಶಾಂತಿಯ ಸಂದೇಶ ಸಾರುವ ವಿಷಯ ದ್ವೇಷದ ಕಿಡಿ ಬಿತ್ತುವ ವಿಷ ಆಗಬಾರದು. ರಾಜಯಕೀಯದೊಂದಿಗೆ ಕ್ರೀಡೆಯನ್ನು ಬೆರೆತರೆ ಇಂಥ ಸಂದಿಗ್ಧತೆ ನಮ್ಮನ್ನು ಸದಾ ಕಾಡುತ್ತಿರುತ್ತದೆ.

Related Articles