ಸೋಮಶೇಖರ್ ಪಡುಕರೆ ಬೆಂಗಳೂರು
ಕ್ರಿಕೆಟ್‌ಗಾಗಿ ಪದವಿಯನ್ನು ಮೊದಲ ವರ್ಷಕ್ಕೇ ಕೈಬಿಟ್ಟು ಬೆಂಗಳೂರು ಸೇರಿದ ಆ ಯುವಕನಿಗೆ ಕ್ರಿಕೆಟ್ ಬದುಕನ್ನು ನೀಡಲಿಲ್ಲ. ಆದರೆ ಕ್ರಿಕೆಟ್ ಆತನ ಉಸಿರಾಗಿಯೇ ಉಳಿದುಕೊಂಡಿದೆ. ರಾಜ್ಯ ಐದನೇ ಡಿವಿಜನ್ ಕ್ರಿಕೆಟ್ ಆಡುತ್ತಿದ್ದಾನೆ. ಜತೆಯಲ್ಲಿ ಕಾರ್ಪೋರೇಟ್ ಪಂದ್ಯಗಳಲ್ಲೂ ಮಿಂಚುತ್ತಿದ್ದಾನೆ. ಮಂಡ್ಯದ ಮದ್ದೂರು ಸಮೀಪದ ಈಡಿಗರ ದೊಡ್ಡಿಯ ನಾಗೇಂದ್ರ ಅವರದ್ದು ಕ್ರಿಕೆಟ್ ಅಂಗಣದ ಸ್ಫೂರ್ತಿಯ ಕತೆ.
ಪ್ರಭಾವ, ಹಣ ಹಾಗೂ ಅವಕಾಶ ಸಿಗುತ್ತಿದ್ದರೆ ನಾಗೇಂದ್ರ ಈಗ ರಾಜ್ಯ ಅಥವಾ ರಾಷ್ಟ್ರ ತಂಡದಲ್ಲಿ ಆಡುತ್ತಿರಬೇಕಾಗಿತ್ತು. ಆದರೆ ಬಡ ಕುಟುಂಬದಿಂದ ಬಂದ ಕಾರಣ ಅವರಿಗೆ ಕ್ರಿಕೆಟ್ ಬದುಕು ನೀಡಲಿಲ್ಲ. ಆದರೆ ಕ್ರಿಕೆಟ್ ಮೇಲಿನ ಪ್ರೀತಿಗೆ ಆ ಕ್ರೀಡೆಯಿಂದ ಅವರು ದೂರವಾಗಲಿಲ್ಲ. ಬೆಳಿಗ್ಗೆ ಕ್ರಿಕೆಟ್ ಆಡಿ ನಂತರ ಸಂಜೆ ಆಟೋ ಓಡಿಸಿಕೊಂಡು ಬೆಂಗಳೂರಿನ ನಾಯಂಡಹಳ್ಳಿಯ ಜನಪ್ರಿಯ ಕ್ರಿಕೆಟಿಗರಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ಐದನೇ ಡಿವಿಜನ್ ಲೀಗ್‌ನಲ್ಲಿ ಮೈಸೂರಿನ ಅಂಡರ್ ರೈಟರ್ಸ್ ತಂಡದ ಪರ ಆಡುತ್ತಿರುವ ಈಗಾಗಲೇ 7 ವಿಕೆಟ್ ಗಳಿಸಿ ಗಮನ ಸೆಳೆದಿದ್ದಾರೆ. ಆದರೆ ಅವರ ಪ್ರತಿಭೆಗೆ ಮುಂದಿನ ಹಂತ ತಲಪಲು ಪ್ರೋತ್ಸಾಹ ಸಿಗುತ್ತಿಲ್ಲ. ಎಂಟನೇ ವಯಸ್ಸಿನಿಂದ ಟೆನಿಸ್ ಬಾಲ್ ಕ್ರಿಕೆಟ್ ಆಡಿಕೊಂಡು ಬಂದಿದ್ದ ನಾಗೇಂದ್ರ ಈಗ ಲೆದರ್‌ಬಾಲ್‌ನಲ್ಲಿ ಉತ್ತಮ ಆಲ್ರೌಂಡರ್ ಗಂಟೆಗೆ 125 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುವ ನಾಗೇಂದ್ರ ಕಾರ್ಪೋರೇಟ್ ಕ್ರಿಕೆಟ್‌ನಲ್ಲಿ ಹಲವಾರು ತಂಡಗಳ ಪರ ಮಿಂಚಿದ್ದಾರೆ.
ಕಷ್ಟದ ಬದುಕು
ತಮ್ಮ ಬದುಕಿನ ಬಗ್ಗೆ ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ನಾಗೇಂದ್ರ, ಕ್ರಿಕೆಟ್ ಮೂಲಕ ಬದುಕು ಕಟ್ಟಿಕೊಳ್ಳಬೇಕೆಂದು ಬೆಂಗಳೂರಿಗೆ ಬಂದೆ, ಆದರೆ ನಮ್ಮ ಬದುಕು ಕೇವಲ ಕ್ಲಬ್‌ಗೆ ಸೀಮಿತವಾಯಿತು. ಉತ್ತಮವಾಗಿ ಆಡಿದರೂ ಮುಂದಿನ ಹಂತಕ್ಕೆ ತಲುಪಲಾಗುತ್ತಿಲ್ಲ. ಅದಕ್ಕಾಗಿ ರಿಕ್ಷಾ ಚಲಾಯಿಸಿಕೊಂಡು ದಿನ ಕಳೆಯುತ್ತಿರುವೆ. ಜತೆಯಲ್ಲಿ ಲೀಗ್ ಹಂತ ಹಾಗೂ ಕಾರ್ಪೋರೇಟ್ ಕ್ರಿಕೆಟ್ ಪಂದ್ಯಗಳನ್ನು ಆಡಿಕೊಂಡು ನನ್ನ ಆಟದ ಲಯವನ್ನು ಕಾಯ್ದುಕೊಳ್ಳುತ್ತಿದ್ದೇನೆ. ಉತ್ತಮ ಅವಕಾಶಕ್ಕಾಗಿ ಎದುರುನೋಡುತ್ತಿರುವೆ, ಎಂದು ಹೇಳಿದರು.
ನಾಗೇಂದ್ರ ಅವರ ಹೆತ್ತವರು ನಾಗಯ್ಯ ಹಾಗೂ ರಾದಮ್ಮ ಕೃಷಿ ಮಾಡಿಕೊಂಡಿದ್ದಾರೆ.
ನಿದ್ದೆಗೆಟ್ಟು ರಿಕ್ಷಾ ಓಡಿಸಿ, ಬೆಳಿಗ್ಗೆ ಮತ್ತೆ ಅಂಗಣದಲ್ಲಿ ಕಾಣಿಸಿಕೊಳ್ಳುವ ನಾಗೇಂದ್ರ ಅವರ ಕ್ರೀಡಾ ಬದುಕು ನಿಜವಾಗಿಯೂ ಸ್ಫೂರ್ತಿ ತರುವಂಥದ್ದು. ಕ್ರಿಕೆಟ್ ಎಲ್ಲರನ್ನೂ ಸಾಕೊಲ್ಲ, ಆದರೆ ಕ್ರಿಕೆಟ್ ನೀಡುವ ಸಂತೋಷಕ್ಕಾಗಿ ಅನೇಕ ಯುವಕರು ಈ ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ನಾಗೇಂದ್ರ ಇತರರಿಂಗಿತ ಭಿನ್ನ.