ಸ್ಪೋರ್ಟ್ಸ್ ಮೇಲ್ ವರದಿ
ಸ್ಟ್ರೈಕರ್ ಮಗೇಶ್ ಹಾಗೂ ಲೋಕೇಶ್ ಗಳಿಸಿದ ಗೋಲುಗಳ ನೆರವಿನಿಂದ ಸೌತ್ ಯುನೈಟೆಡ್ ತಂಡ ಎ ಡಿ ಇ ಎಫ್ ಸಿ ವಿರುದ್ಧ ಪುಟ್ಟಯ್ಯ ಸ್ಮಾರಕ ಫುಟ್ಬಾಲ್ ಕಪ್ ನಲ್ಲಿ ಮೊದಲ ಜಯ ಗಳಿಸಿ ಶುಭಾರಂಭ ಕಂಡಿದೆ.
ಕೊನೆಯ ನಿಮಿಷದಲ್ಲಿ ಸೌತ್ ಯುನೈಟೆಡ್ ಆಟಗಾನನ್ನು ಅಂಗಣದಿಂದ ಹೊರಗೆ ಕಳುಹಿಸಿದರೂ ತಂಡದ ಫಲಿತಾಂಶದ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟಾಗಲಿಲ್ಲ.
ಬಿ ಜೋನ್ ನ ಮೊದಲ ಪಂದ್ಯದಲ್ಲಿ ನಾಯಕ ಮಗೇಶ್ ಗಳಿಸಿದ ಗೋಲಿನಿಂದ ಸೌತ್ ತಂಡ ಮುನ್ನಡೆ ಕಂಡಿತು. ತಂಡದ ನೂತನ ಸೇರ್ಪಡೆ ಆರೋನ್ ನೀಡಿದ ಪಾಸ್ ಮೂಲಕ ಮಗೇಶ್ ಮೊದಲ ಗೋಲು ಗಳಿಸಿದರು. ಈ ನಡುವೆ ಸೌತ್ ತಂಡ ಹಲವು ಬಾರಿ ಗೋಲು ಗಳಿಸುವ ಅವಕಾಶವನ್ನು ನಿರ್ಮಿಸಿತ್ತು. ಆದರೆ ಅದು ಯಶಸ್ವಿಯಾಗಿ ಕೊನೆಗೊಳ್ಳಲಿಲ್ಲ. ಎಡಿಇ ತಂಡ ದ್ವಿತೀಯಾರ್ಧದಲ್ಲಿ ಉತ್ತಮ ಪೈಪೋಟಿ ನೀಡಿತು. ಆದರೆ ಅವರ ಪ್ರಯತ್ನ ಗೋಲಿನ ರೂಪು ಕಾಣಲಿಲ್ಲ. ಲೋಕೇಶ್ ಗಳಿಸಿದ ಎರಡನೇ ಗೋಲಿನಿಂದ ಸೌತ್ ಯುನೈಟೆಡ್ 2-0 ಅಂತರದಲ್ಲಿ ಪಂದ್ಯ ಗೆದ್ದುಕೊಂಡಿತು.