ಪುಣೆ, ಅಕ್ಟೋಬರ್ 22
ಪ್ರಥಮಾರ್ಧದಲ್ಲಿ ನಾಯಕ ಸುನಿಲ್ ಛೆಟ್ರಿ (41 ಮತ್ತು 43ನೇ ನಿಮಿಷ) ಗಳಿಸಿದ ಎರಡು ಗೋಲು ಹಾಗೂ ದ್ವಿತೀಯಾರ್ಧದಲ್ಲಿ ಮಿಕು (64ನೇ ನಿಮಿಷ) ಗಳಿಸಿದ ಒಂದು ಗೋಲಿನ ನೆರವಿನಿಂದ ಆತಿಥೇಯ ಪುಣೆ ತಂಡವನ್ನು 3-0 ಗೋಲುಗಳ ಅಂತರದಲ್ಲಿ ಮಣಿಸಿದ ಬೆಂಗಳೂರು ಎಫ್ ಸಿ ತಂಡ ಇಂಡಿಯನ್ ಸೂಪರ್ ಲೀಗ್ ನಲ್ಲಿ ತನ್ನ ಪ್ರಭುತ್ವವನ್ನು ಮುಂದುವರಿಸಿದೆ. 3 ಪಂದ್ಯಗಳಿಂದ ಒಟ್ಟು 7 ಅಂಕ ಗಳಿಸಿದ ಬೆಂಗಳೂರು ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.
ಮಿಕು ಮಿಂಚು
64ನೇ ನಿಮಿಷದಲ್ಲಿ ಮಿಡ್ ಫೀಲ್ಡ್ ನಿಂದ ಬಂದ ಪಾಸ್ ನೇರವಾಗಿ ಮೈಕು ಅವರ ನಿಯಂತ್ರಣಕ್ಕೆ ಸಿಕ್ಕಿತು. ಸಾಹಿಲ್ ಪನ್ವಾರ್ ಸಾಕಷ್ಟು ಪ್ರಯತ್ನ ಮಾಡಿದರೂ ಮೈಕು ಅವರ ಕಿಕ್ ತಡೆಯಲಾಗಲಿಲ್ಲ. ಚೆಂಡು ನೇರವಾಗಿ ಗೋಲ್ ಬಾಕ್ಸ್ ಸೇರಿತು.ಬೆಂಗಳೂರಿನ ಜಯ ಖಚಿತವಾಯಿತು. ಬ್ಲೂ ಪಡೆಗೆ 3-0 ಮುನ್ನಡೆ.
ಬೆಂಗಳೂರು ಮೇಲುಗೈ
ನಾಯಕ ಸುನಿಲ್ ಛೆಟ್ರಿ (41 ಹಾಗೂ 43ನೇ ನಿಮಿಷ) ಗಳಿಸಿದ ಗೋಲಿನಿಂದ ಪ್ರವಾಸಿ ಬೆಂಗಳೂರು ತಂಡ ಪ್ರಥಮಾರ್ಧದಲ್ಲಿ ಮೇಲುಗೈ ಸಾಧಿಸಿತು. 2-0 ಮುನ್ನಡೆ ಕಾಣುವ ಮೂಲಕ ಬೆಂಗಳೂರು ಜಯಕ್ಕೆ ಅಗತ್ಯವಿರುವ ವೇದಿಕೆ ನಿರ್ಮಿಸಿಕೊಂಡಿತು.
ಛೆಟ್ರಿ ಡಬಲ್ ಧಮಾಕ
43ನೇ ನಿಮಿಷದಲ್ಲಿ ಸುನಿಲ್ ಛೆಟ್ರಿ ತಂಡದ ಪರ ಎರಡನೇ ಗೋಲು ಗಳಿಸಿ ಅಚ್ಚರಿ ಮೂಡಿಸಿದರು. ಆತಿಥೇಯ ಪುಣೆ ಆಟಗಾರರು ತಲೆ ಮೇಲೆ ಕೈ ಇಟ್ಟುಕೊಂಡು ಆಕಾಶ ನೋಡುವಂತಾಯಿತು. ಈ ಬಾರಿ ಪಾಸ್ ನೀಡಿದ್ದು ಮಿಕು. ಪುಣೆಯ ಸಾರ್ಥಕ್ ಗೌಳಿ ಚೆಂಡನ್ನು ತಡೆಯಲೆತ್ನಿಸಿದರೂ ಛೆಟ್ರಿಯ ಅದ್ಭುತ ತುಳಿತಕ್ಕೆ ಚೆಂಡು ನೆಟ್ಗೆ ಮುತ್ತಿಟ್ಟಿತು. ಬ್ಲೂ ಪಡೆಗೆ 2-0 ಮುನ್ನಡೆ.
ಮುನ್ನಡೆ ನೀಡಿದ ನಾಯಕ
40ನೇ ನಿಮಿಷದಲ್ಲಿ ನಾಯಕ ಸುನಿಲ್ ಛೆಟ್ರಿಗೆ ಗೋಲು ಗಳಿಸುವ ಅವಕಾಶವಿದ್ದಿತ್ತು, ಆದರೆ ಯಶಸ್ಸು ಸಿಗಲಿಲ್ಲ. ಯಾವಾಗಲೂ ಗೋಲ್ ಬಾಕ್ಸ್ ಕಡೆಗೇ ಗುರಿ ಇಟ್ಟುಕೊಂಡಿರುವ ಸುನಿಲ್ ಛೆಟ್ರಿ ಕಾಲಿನಿಂದ ಚೆಂಡನ್ನು ತಪ್ಪಿಸುವುದು ಕಷ್ಟ. 41ನೇ ನಿಮಿಷದಲ್ಲಿ ನಾಯಕ ಛೆಟ್ರಿ ಗಳಿಸಿದ ಗೋಲಿನಿಂದ ಬೆಂಗಳೂರು ತಂಡ ಮೈಲುಗೈ ಸಾಧಿಸಿತು. ಪುಣೆಯ ಡಿಫೆನ್ಸ್ ವಿಭಾಗ ಚದುರಿರುವುದು ಸ್ಪಷ್ಟವಾಗಿತ್ತು. ಡಿಮಾಸ್ ಡೆಲ್ಗಾಡೊ ನೀಡಿದ ಪಾಸ್ ಮೂಲಕ ಛೆಟ್ರಿ ಪುಣೆಯ ಗೋಲ್ಕೀಪರ್ನನ್ನು ವಂಚಿಸಿ ತಂಡಕ್ಕೆ ಮೊದಲ ಗೋಲು ತಂದುಕೊಟ್ಟರರು.
ಮನೆಯಿಂದ ಹೊರಗಡೆ
ಬೆಂಗಳೂರು ಇಂಡಿಯನ್ ಸೂಪರ್ ಲೀಗ್ನಲ್ಲೇ ಬಲಿಷ್ಠ ತಂಡವೆಂದು ಇತರ ತಂಡಗಳ ಕೋಚ್ಗಳೇ ಒಪ್ಪಿಕೊಂಡಿದ್ದಾರೆ. ಮನೆಯಂಗಣದಲ್ಲಿ ಮಾತ್ರವಲ್ಲಿ ಹೊರಗಡೆ ನಡೆದ ಪಂದ್ಯಗಳಲ್ಲೂ ಬೆಂಗಳೂರು ತಾನು ಬಲಿಷ್ಠ ಎಂಬುದನ್ನು ತೋರಿಸಿಕೊಟ್ಟಿದೆ. ಆಡಿರುವ 9 ಪಂದ್ಯಗಳಲ್ಲಿ ಬೆಂಗಳೂರು 7ರಲ್ಲಿ ಜಯ ಗಳಿಸಿದೆ. ಗೋಲು ಗಳಿಕೆಯಲ್ಲೂ ಗೋವಾದೊಂದಿಗೆ ಸಮಬಲ ಸಾಧಿಸಿದೆ. 20 ಗೋಲುಗಳನ್ನು ಬೆಂಗಳೂರು ಮನೆಯಿಂದ ಹೊರಗಡೆ ನಡೆದ ಪಂದ್ಯಗಳಲ್ಲಿ ಗಳಿಸಿದೆ. ಚೆಂಡನ್ನು ಗೋಲ್ಬಾಕ್ಸ್ಗೆ ಗುರಿ ಇಡುವಲ್ಲಿಯೂ ಬೆಂಗಳೂರು ನಿಖರತೆಯಲ್ಲಿ ಅಗ್ರ ಸ್ಥಾನದಲ್ಲಿದೆ. ಶೇ. 61.54ರಷ್ಟು ನಿಖರತೆ ಕಾಯ್ದುಕೊಂಡಿದೆ. ಮನೆಯಂಗಣದಲ್ಲಿ ಕಳೆದ ನಾಲ್ಕು ಪಂದ್ಯಗಳಲ್ಲಿ 10 ಗೋಲು ಗಳಿಸಿರುವ ಬೆಂಗಳೂರು 2 ಕ್ಲೀನ್ ಶೀಟ್ ಸಾಧನೆ ಮಾಡಿದೆ.
ಮಾರ್ಸೆಲೋ, ಅಲ್ಫಾರೋ ಶಕ್ತಿ
ಫಾರ್ವರ್ಡ್ ವಿಭಾಗದಲ್ಲಿ ಪುಣೆ ತಂಡಕ್ಕೆ ಉತ್ತಮ ಆಟಗಾರರ ಅಗತ್ಯವಿದೆ. ನಿರೀಕ್ಷೆಯಂತೆ ಮಾರ್ಸೆಲೋ ಹಾಗೂ ಅಲ್ಫಾರೋ ಆಡುವ ಹನ್ನೊಂದರಲ್ಲಿ ಸ್ಥಾನ ಗಳಿಸಿದ್ದಾರೆ. ಪಾಸಿಂಗ್ ಸರಾಸರಿಯಲ್ಲಿ ಪುಣೆ ತಂಡ ಬಹಳ ಹಿಂದೆ ಇದೆ. ಅಟ್ಯಾಕ್ ವಿಭಾಗದಲ್ಲೂ ಪುಣೆ ಹಿಂದೆ ಬಿದ್ದಿದೆ. ಕಳಪೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮಾರ್ಸೆಲೋ ಹಾಗೂ ಅಲ್ಫಾರೋ ಇದುವರೆಗೂ ದಾಖಲಾಗಿರುವ 31 ಗೋಲುಗಳಲ್ಲಿ 17 ಗೋಲುಗಳನ್ನು ದಾಖಲಿಸಿ ಪ್ರಬಹುತ್ವ ಸಾಧಿಸಿದ್ದಾರೆ.
ಇನ್ನೂ ಅಂಕ ಪಟ್ಟಿಯಲ್ಲಿ ಜಯದ ಖಾತೆ ತೆರೆಯದ ಪುಣೆ ತಂಡಕ್ಕೆ ಮನೆಯಂಗಣದ ಪ್ರೇಕ್ಷಕರ ಬೆಂಬಲವಿದೆ. ಒಂದು ಜಯ ಹಾಗೂ ಒಂದು ಡ್ರಾ ಕಂಡಿರುವ ಬೆಂಗಳೂರು ತಂಡ ಗೆಲ್ಲುವ ಫೇವರಿಟ್ ಎನಿಸಿದೆ.