ಹೊಸದಿಲ್ಲಿ, ಅಕ್ಟೋಬರ್ 23
ಫ್ರಾನ್ಸಿಸ್ಕೋ ಡೊರಾನ್ಸೊರೊ ಇಂಡಿಯನ್ ಸೂಪರ್ ಲೀಗ್ ನ 16ನೇ ಪಂದ್ಯದ ಹೀರೋ ಎನಿಸಿದರು. ಡೆಲ್ಲಿ ಹಾಗೂ ಚೆನ್ನೈ ನಡುವಿನ ಪಂದ್ಯ ಗೋಳಿಲ್ಲದೆ ಕೊನೆಗೊಂಡಿತು.
ಚೆನ್ನೈ ತಂಡಕ್ಕೆ ದ್ವಿತೀಯಾರ್ಧದಲ್ಲಿ ಗೋಲು ಗಳಿಸಲು ಉತ್ತಮ ಅವಕಾಶ ಇದ್ದಿತ್ತು. ಆದರೆ ಫ್ರಾನ್ಸಿಸ್ಕೋ ಡೊರಾನ್ಸೊರೊ ಎಲ್ಲ ಅವಕಾಶವನ್ನು ಹುಸಿಗೊಳಿಸಿದರು, ಈ ಫಲಿತಾಂಶ ಡೆಲ್ಲಿ ತಂಡಕ್ಕೆ ಸ್ವಲ್ಪಮಟ್ಟಿನ ಖುಷಿ ತಂದಿರಬಹುದು. ಆದರೆ ಚೆನ್ನೈ ತಂಡ ಸತತ ನಾಲ್ಕು ಪಂದ್ಯಗಳಲ್ಲಿ ಜಯ ಗಳಿಸಲು ವಿಫಲವಾಗಿರುವುದು ತಂಡಕ್ಕೆ ನಿರಾಸೆಯನ್ನುಂಟುಮಾಡಿರುವುದು ಸಹಜ. ಹಾಲಿ ಚಾಂಪಿಯನ್ ಚೆನ್ನೈ ಆಡಿರುವ ನಾಲ್ಕನೇ ಪಂದ್ಯದಲ್ಲಿ ಒಂದು ಅಂಕಕ್ಕೆ ತೃಪ್ತಿ ಪಟ್ಟಿತು.
ಗೋಲಿಲ್ಲದ ಮೊದಲ ಭಾಗ
ಎರಡೂ ತಂಡಗಳಿಗೂ ಜಯದ ಅನಿವಾರ್ಯತೆ ಇದ್ದಾಗ ಅಲ್ಲಿ ಗೋಲ್ಕೀಪರ್ಗಳು ಹೆಚ್ಚು ಕಾರ್ಯಪ್ರವೃತ್ತರಾಗಿರುತ್ತಾರೆ ಎಂಬುದಕ್ಕೆ ಡೆಲ್ಲಿ ಹಾಗೂ ಚೆನ್ನೈ ನಡುವಿನ ಪಂದ್ಯದ ಮೊದಲಾರ್ಧ ಸಾಕ್ಷಿಯಾಯಿತು. 42 ಹಾಗೂ 43ನೇ ನಿಮಿಷಗಳಲ್ಲಿ ಡೆಲ್ಲಿ ತಂಡಕ್ಕೆ ಗೋಲು ಗಳಿಸಲು ಉತ್ತಮ ಅವಕಾಶವಿದ್ದಿತ್ತು. ಆದರೆ ಕರಣ್ಜಿತ್ ಸಿಂಗ್ ಅದಕ್ಕೆ ಅವಕಾಶ ನೀಡಲಿಲ್ಲ. ಚೆನ್ನೈನ ಗೋಲಿನ ಅವಕಾಶಕ್ಕೂ ಫ್ರಾನ್ಸಿಸ್ಕೋ ಡೊರಾನ್ಸೊರೊ ತಣ್ಣೀರೆರಚಿದರು. ಪಂದ್ಯದ ಆರಂಭದಲ್ಲಿ ಕುತೂಹಲದ ಕ್ಷಣಗಳಿಗೆ ಅವಕಾಶ ಇರಲಿಲ್ಲ. ಆದರೆ ಚೆನ್ನೈ ತಂಡ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿತಲ್ಲದೆ ಆಕ್ರಮಣಕಾರಿ ಆಟಕ್ಕೆ ಮನ ಮಾಡಿತು. ಡೆಲ್ಲಿಯ ಡಿಫೆನ್ಸ್ ವಿಭಾಗದ ಮೇಲೆ ಒತ್ತಡ ಹೇರಲು ಯತ್ನಿಸಿದರೂ ಗೋಲು ಗಳಿಸುವ ಹಂತ ತಲುಪಲಿಲ್ಲ. ಎಂದಿನಂತೆ ಡೆಲ್ಲಿ ಡೈನಮೋಸ್ ತಂಡಕ್ಕೆ ಗೋಲು ಗಳಿಸಲು ಉತ್ತಮ ಅವಕಾಶ ಸಿಕ್ಕರೂ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ತಂಡ ವಿಲವಾಯಿತು. ಆಂಡ್ರೆಜಾ ಕಲುಜೆರೋವಿಕ್ ಸಿಕ್ಕ ಅವಕಾಶವನ್ನು ಕೈ ಚೆಲ್ಲಿದರು.
ಮೊದಲ ಜಯದ ನಿರೀಕ್ಷೆಯಲ್ಲಿ
ಹಾಲಿ ಚಾಂಪಿಯನ್ ಚೆನ್ನೈಯಿನ್ ತಂಡ ಈ ಬಾರಿಯ ಇಂಡಿಯನ್ ಸೂಪರ್ ಲೀಗ್ನಲ್ಲಿ ಉತ್ತಮ ಆರಂಭ ಕಂಡಿಲ್ಲ. ಇತರ ಯಾವುದೇ ತಂಡಕ್ಕೆ ಹೋಲಿಸಿದರೂ ಚೆನ್ನೈಯಿನ್ ಪ್ರದರ್ಶನ ಅತ್ಯಂತ ಕಳಪೆ ಎಂದರೆ ತಪ್ಪಾಗಲಾರದು. ತಂಡ ಮೊದಲ ಜಯದ ನಿರೀಕ್ಷೆಯಲ್ಲಿದೆ. ಎದುರಾಳಿ ಡೆಲ್ಲಿ ಕೂಡ ಉತ್ತಮ ಪ್ರದರ್ಶನ ತೋರಿದರೂ ಸಂಪೂರ್ಣ ಅಂಕ ಪಡೆಯುವಲ್ಲಿ ವಿಫಲವಾಗಿದೆ. ಐಎಸ್ಎಲ್ 16ನೇ ಪಂದ್ಯದಲ್ಲಿ ಇತ್ತಂಡಗಳು ಜಯದ ಗುರಿ ಹೊತ್ತು ಅಂಗಣಕ್ಕಿಳಿದವು. ದೇಶದ ರಾಜಧಾನಿಯಲ್ಲಿ ಇತ್ತಂಡಗಳಿಗೆ ಜಯದ ಅನಿವಾರ್ಯತೆ ಇದೆ. ಸತತ ಮೂರು ಪಂದ್ಯಗಳಲ್ಲಿ ಸೋಲುವ ಮೂಲಕ ಚೆನ್ನೈಯಿನ್ ತಂಡ ಅತ್ಯಂತ ಕಳಪೆ ಆರಂಭ ಕಂಡ ಮೂರನೇ ತಂಡವೆನಿಸಿದೆ. ಚೆನ್ನೈ ನಾಲ್ಕನೇ ಸೋಲನುಭವಿಸಿದರೆ ಈ ರೀತಿ ಕೆಟ್ಟ ಆರಂಭ ಕಂಡ ಮೊದಲ ತಂಡವೆನಿಸಲಿದೆ. ಉತ್ತಮ ಆಟಗಾರರನ್ನು ಹೊಂದಿದ್ದರೂ ಚೆನ್ನೈ ಜಯದ ಹಾದಿ ಕಂಡುಕೊಳ್ಳುವಲ್ಲಿ ವಿಲವಾಗಿದೆ.
ಪುಣೆ ಸಿಟಿ ಹಾಗೂ ಚೆನ್ನೈಯಿನ್ ತಂಡಗಳ ಜತೆಯಲ್ಲಿ ಡೆಲ್ಲಿ ಕೂಡ ಮೊದಲ ಜಯದ ನಿರೀಕ್ಷೆಯಲ್ಲಿದೆ. ಗೋಲ್ಬಾಕ್ಸ್ಗೆ ಗುರಿ ಇಟ್ಟು ಹೊಡೆಯುವಲ್ಲಿ ಡೆಲ್ಲಿ ಡೈನಮೋಸ್ ತಂಡದ ವಿಲವಾಗಿದೆ. ಇದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಅಟ್ಯಾಕಿಂಗ್ ಹಾಗೂ ಶಾಟ್ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದರೂ ಗೋಲು ಗಳಿಕೆಯಲ್ಲಿ ತಂಡ ಹಿಂದೆ ಬಿದ್ದಿದೆ. ತಂಡದ ನಿಖರತೆ ಶೇ. 22.85 ಆಗಿದ್ದು ಇದು ತಂಡವೊಂದರ ಕಡಿಮೆ ಸರಾಸರಿ ಎನಿಸಸಿದೆ. ವಿಶೇಷವೆಂದರೆ ಈ ತಂಡ ಚೆನ್ನೈಯಿನ್ ವಿರುದ್ಧ ಮನೆಯಂಗಣದಲ್ಲಿ ಸೋತಿರಲಿಲ್ಲ. ಆದರೆ ಈ ಲೆಕ್ಕಾಚಾರವನ್ನು ನಂಬಿಕೊಂಡಿರುವಂತಿಲ್ಲ. ಏಕೆಂದರೆ ಎಟಿಕೆ ವಿರುದ್ಧವೂ ಇದೇ ರೀತಿ ಸೋತಿರಲಿಲ್ಲ. ಆದರೆ ಹಿಂದಿನ ಪಂದ್ಯದಲ್ಲಿ ಎಟಿಕೆ ವಿರುದ್ಧ ಸೋಲನುಭವಿಸಿತ್ತು. ಆಡಿರುವ ನಾಲ್ಕು ಪಂದ್ಯಗಳಲ್ಲಿ ಡೆಲ್ಲಿತಂಡ ಹತ್ತು ಗೋಲು ಗಳಿಸಿತ್ತು, ಆದರೆ ಇತ್ತೀಚಿನ ಒಂಬತ್ತು ಪಂದ್ಯಗಳಲ್ಲಿ ಗಳಿಸಿರುವುದು ಕೇವಲ ಒಂದು ಗೋಲು.