Friday, November 22, 2024

ಮನೆಯಂಗಣದಲ್ಲಿ ಗೋವಾ ಫೇವರಿಟ್

ಸ್ಪೋರ್ಟ್ಸ್ ಮೇಲ್ ವರದಿ 

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಉತ್ತಮ ಆರಂಭ  ಕಂಡಿರುವ ಎಫ್ಸಿ ಗೋವಾ ತಂಡ ಮನೆಯಂಗಣದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಜಯ ಗಳಿಸುವ ಆತ್ಮವಿಶ್ವಾಸ ಹೊಂದಿದೆ. ಬುಧವಾರ  ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಮುಂಬೈ  ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಗೋವಾ ಗೆಲ್ಲುವ ಫೇವರಿಟ್ ಎನಿಸಿದೆ.

ಆಡಿರುವ ಎರಡುಪಂದ್ಯಗಳಿಂದ ನಾಲ್ಕು ಅಂಕ ಗಳಿಸಿರುವ  ಸರ್ಗಿಯೊ ಲೊಬೆರಾ ಪಡೆ ಈಗ ಮೂರನೇ ಪಂದ್ಯದಲ್ಲಿ ಮುಂಬೈ ಎಫ್ಸಿಗೆ ಆತಿಥ್ಯ ನೀಡಲಿದೆ.ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ  2-2 ಗೋಲುಗಳಿಂದ ಡ್ರಾ ಸಾಧಿಸುವ ಮೂಲಕ ನಿರಾಸೆಗೊಳಗಾಗಿತ್ತು. ಆದರೆ ಚೆನ್ನೈಯಿನ್ ಎಫ್ಸಿ ವಿರುದ್ಧದ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಜಯ ಗಳಿಸುವ ಮೂಲಕ ಪ್ರಭುತ್ವ ಸಾಧಿಸಿತ್ತು. ಪ್ರಮುಖ ಆಟಗಾರ ಮೆನ್ವೆಲ್ ಲಾನ್ಜೆರೋಟ್ ಅವರು ಎಟಿಕೆ ತಂಡವನ್ನು ಸೇರಿಕೊಂಡರೂ ಗೋವಾದ ಗೋಲು ಗಳಿಕೆಯ ಶಕ್ತಿಯ ಮೇಲೆ ಯಾವುದೇ ಪರಿಣಾಮವಾಗಲಿಲ್ಲ. ಈಗಾಗಲೇ ಎರಡು ಪಂದ್ಯಗಳಿಂದ ಆಟಗಾರರು ಐದು ಗೋಲುಗಳನ್ನು ಗಳಿಸಿದ್ದಾರೆ. ಕಳೆದ ಬಾರಿ ಗೋಲ್ಡನ್ ಶೂ ಪ್ರಶಸ್ತಿ ಗೆದ್ದಿದ್ದ ಫರಾನ್ ಕೊರೊಮಿನಾಸ್ ಈಗಾಗಲೇ ಮೂರು ಗೋಲು ಗಳಿಸಿ ಆತ್ಮವಿಶ್ವಾಸದ ಹೆಜ್ಜೆ ಇಟ್ಟಿದ್ದಾರೆ.
‘ಪಂದ್ಯವನ್ನು ಗೆಲ್ಲಲು ನಾವು ಆಕ್ರಮಣಕಾರಿ ಆಟವನ್ನು ಮುಂದುವರಿಸಲಿದ್ದೇವೆ. ನಮ್ಮ ತಂಡಕ್ಕೆ ಈ ಶೈಲಿಯ ಆಟ ಪ್ರಮುಖವಾದುದು. ಎದುರಾಳಿ ತಂಡಕ್ಕೆ ಗೋಲು ನೀಡಬಾರದೆಂಬುದೇ ನಮ್ಮ ಆಕ್ರಮಣಕಾರಿ ಆಟದ ಉದ್ದೇಶ. ನಾವು ಕಳೆದ ಬಾರಿ ಪ್ರಯೋಗ ಮಾಡಿರುವಂತೆ ನೋಡಿಕೊಂಡು ದಾಳಿ ನಡೆಸುವುದು ನಮ್ಮ ಗುರಿ,‘ ಎಂದು ಲೊಬೆರಾ ಹೇಳಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಮುಂಬೈ ಸಿಟಿ ಎಫ್ಸಿಯನ್ನು ಸೋಲಿಸಲ ವಿಲವಾಗಿರುವ ಗೋವಾ ತಂಡ ಈ ಬಾರಿ ಕೆಲವು  ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ.
 ತಂಡದ ರಕ್ಷಣಾ ವಿಭಾಗದಲ್ಲಿ ಮೌರ್ತಾದಾ ಫಾಲ್ ಉತ್ತಮ ಸೇರ್ಪಡೆ. ಚಿಂಗ್ಲೆನ್ಸನಾ ಸಿಂಗ್ ಉತ್ತಮ ರೀತಿಯಲ್ಲಿ ಆಡುತ್ತಿರುವುದು ತಂಡದ ಶಕ್ತಿಯನ್ನು ಹೆಚ್ಚಿಸಿದೆ. ತಂಡದ ಡಿಫೆನ್ಸ್ ವಿಭಾಗಕ್ಕೆ ಮತ್ತಷ್ಟು ಶಕ್ತಿ ಬಂದಂತಾಗಿದೆ.
ಮುಂಬೈ ಸಿಟಿ ತಂಡ ಎಫ್ಸಿ ಪುಣೆ ಸಿಟಿ ವಿರುದ್ಧದ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಅತ್ಯಂತ ಆತ್ಮವಿಶ್ವಾಸದಲ್ಲಿ ಗೋವಾಕ್ಕೆ ಆಗಮಿಸಿದೆ. ಜಾರ್ಜ್ ಕೋಸ್ಟಾ ಅವರಲ್ಲಿ ತರಬೇತಿ ಪಡೆದ ತಂಡ ಜೆಮ್ಷೆಡ್ಪುರ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲನುಭವಿಸಿತ್ತು, ನಂತರ ಕೇರಳ ಬ್ಲಾಸ್ಟರ್ಸ್ ವಿರುದ್ಧ 1-1 ಗೋಲುಗಳಿಂದ ಡ್ರಾ ಸಾಧಿಸಿತ್ತು.
‘ಗೋವಾ ತಂಡಕ್ಕೆ ಉತ್ತಮ ಕೋಚ್ ಇದ್ದಾರೆ, ಹಾಗೇಯೇ ಗೋವಾ ಒಂದು ಉತ್ತಮ ತಂಡ.ಅಂಗಣದಲ್ಲಿ ತಂಡ ಯಾವ ರೀತಿಯಲ್ಲಿ ಆಡುತ್ತದೆ ಎಂಬುದನ್ನು ತಿಳಿಯುವುದು ಸುಲಭ. ನಾವು ಪ್ರತಿಯೊಬ್ಬ ಆಟಗಾರರೊಂದಿಗೆ ಚರ್ಚಿಸಿದ್ದೇವೆ. ನಮ್ಮ ಪಾಲಿಗೆ ನಾಳೆಯ ಪಂದ್ಯ ಕಠಿಣ ಎನಿಸುವುದು ಸ್ಪಷ್ಟ,ನಾವು ಅವರಿಗೆ ಸಾಕಷ್ಟು ಗೌರವ ನೀಡುತ್ತೇವೆ, ಅದೇ ರೀತಿ ಏನು ಮಾಡಬೇಕೆಂಬುದರ ಬಗ್ಗೆಯೂ ಯೋಚಿಸಿದ್ದೇವೆ,‘ ಎಂದು ಕೋಸ್ಟಾ ಹೇಳಿದ್ದಾರೆ.
ಮೊಡೊವ್ ಸೌಗೌ  ಪುಣೆ ವಿರುದ್ಧದ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದರು. ಬ್ರೆಜಿಲ್ ಮೂಲದ ಆಟಗಾರ ರೊಲ್ ಬಾಸ್ಟೋಸ್ ಕೂಡ ತಂಡದ ಪ್ರಮುಖ ಅಸ್ತ್ರವೆನಿಸಿದ್ದಾರೆ. ಆರಂಭದಲ್ಲಿ ಮುಂಬೈ ತಂಡದ ದಾಳಿ ವಿಭಾಗ ಹಲ್ಲುಕಳೆದುಕೊಂಡಂತೆ ಇತ್ತು. ಪುಣೆ ವಿರುದ್ಧದ ಪಂದ್ಯದಲ್ಲಿ ತೋರಿದ ಪ್ರದರ್ಶನ ತಂಡದ ಮನೋಬಲವನ್ನು ಹೆಚ್ಚಿಸಿದೆ. ಅರ್ನಾಲ್ಡ್ ಇಸ್ಸೊಕೊ ಮುಂಬೈ ತಂಡದ ಉತ್ತಮ ಆಯ್ಕೆಯಾಗಿತ್ತು. ಪುಣೆ ವಿರುದ್ಧ ನಡೆದ ಮಹಾರಾಷ್ಟ್ರ ಡರ್ಬಿಯಲ್ಲಿ ಮುಂಬೈ ತಂಡ ಉತ್ತಮ ಪ್ರದರ್ಶನ ತೋರಿದ್ದು, ಅದು ಗೋವಾ ವಿರುದ್ಧವೂ ಮುಂದುವರಿಯುವ ಸಾಧ್ಯತೆ ಇದೆ.

Related Articles